ದೆಹಲಿಯ ಚಾಂದನಿ ಚೌಕ್‌ನಲ್ಲಿ ನಡೆದ ಕಾರ್ ಬಾಂಬ್ ಸ್ಫೋಟದಲ್ಲಿ 13 ಮಂದಿ ಮೃತಪಟ್ಟಿದ್ದು, ಇದೊಂದು ಗುಪ್ತಚರ ಮತ್ತು ಭದ್ರತಾ ವೈಫಲ್ಯ ಎಂದು ಕಾಂಗ್ರೆಸ್ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಖಂಡಿಸಿದ್ದಾರೆ. ಈ ಕೃತ್ಯವು 'ಆಪರೇಷನ್ ಸಿಂದೂರ್'ಗೆ ಭಯೋತ್ಪಾದಕರು ನೀಡಿದ ಉತ್ತರವಾಗಿರಬಹುದು ಎಂದಿದ್ದಾರೆ.
ದಾವಣಗೆರೆ (ನ.12): ದೆಹಲಿಯ ಕೆಂಪುಕೋಟೆ ಬಳಿ ಚಾಂದನಿ ಚೌಕ್‌ನ ಜನನಿಬಿಡ ಪ್ರದೇಶದಲ್ಲಿ ನಡೆದ ಕಾರು ಬಾಂಬ್ ಸ್ಫೋಟದಲ್ಲಿ ೧೩ ಜನ ಸಾವನ್ನಪ್ಪಿದ್ದಾರೆ. ಈ ಘಟನೆಯನ್ನು ಇಂಟಲಿಜೆನ್ಸ್ ಮತ್ತು ಭದ್ರತಾ ವ್ಯವಸ್ಥೆಯ ವೈಫಲ್ಯವೇ ಕಾರಣವೆಂದು ಕಾಂಗ್ರೆಸ್ ಸಂಸದೆ ಡಾ ಪ್ರಭಾ ಮಲ್ಲಿಕಾರ್ಜುನ ತೀವ್ರವಾಗಿ ಖಂಡಿಸಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಅವರು, ಈ ಸ್ಫೋಟವು ಆಪರೇಷನ್ ಸಿಂದೂರ್‌ಗೆ ಉತ್ತರವಾಗಿ ಎಂಬ ಅರ್ಥದಲ್ಲಿ ಭಯೋತ್ಪಾದಕರು ಈ ಕೃತ್ಯ ನಡೆಸಿದ್ದಾರೆ. ಕೇಂದ್ರ ಸರ್ಕಾರವು ಆಪರೇಷನ್ ಸಿಂದೂರು ಬಳಿಕ ಎಚ್ಚೆತ್ತುಕೊಂಡು ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ಇಂಟಲಿಜೆನ್ಸ್ ಫೇಲ್ಯೂರ್ ಆಗಿರೋದು ಸ್ಪಷ್ಟ
ಚಾಂದನಿ ಚೌಕ್ ಜನನಿಬಿಡ ಪ್ರದೇಶವಾಗಿದ್ದು, ಅಲ್ಲಿಯೇ ಸುಮಾರು ಐದು ಬೇರೆ ಬೇರೆ ಧರ್ಮಗಳ ದೇವಸ್ಥಾನಗಳಿವೆ. ಎಲ್ಲಾ ಧರ್ಮದ ಜನರು ಅಲ್ಲಿ ವಾಸ ಮಾಡುತ್ತಾರೆ. ನಾನೂ ಸಹ ಒಂದು ತಿಂಗಳ ಹಿಂದೆ ಆ ಪ್ರದೇಶದಲ್ಲಿದ್ದ ಗೌರಿಶಂಕರ ದೇವಸ್ಥಾನಕ್ಕೆ ಹೋಗಿ ಬಂದಿದ್ದೆ. ಅಲ್ಲಿಯೇ ಹೂವು ಹಣ್ಣು ಖರೀದಿ ಮಾಡಿದ್ದೆ. ಅದು ಜನಸಂದಣಿ ಪ್ರದೇಶವಾಗಿದ್ದರೂ, ನಮ್ಮ ಭದ್ರತಾ ವ್ಯವಸ್ಥೆ ಇನ್ನೂ ಬಿಗಿಯಾಗಿರಬೇಕಿತ್ತು. ಇಲ್ಲಿ ಇಂಟಲಿಜೆನ್ಸ್ ಫೇಲ್ಯೂರ್ ಆಗಿರೋದು ಸ್ಪಷ್ಟ ಎಂದು ಆರೋಪಿಸಿದರು.
ಟೆರರಿಸ್ಟ್ ಆ್ಯಕ್ಟಿವಿಟಿ ಟ್ರ್ಯಾಕ್ ಮಾಡಬೇಕು
ಈ ಘಟನೆ ಬಳಿಕ ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರು ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಗೃಹ ಇಲಾಖೆ, ರಕ್ಷಣಾ ಇಲಾಖೆ ಟೆರರಿಸ್ಟ್ ಆ್ಯಕ್ಟಿವಿಟಿ ಟ್ರ್ಯಾಕ್ ಮಾಡಬೇಕು. ನಮ್ಮ ಜನತೆಗೆ ಸುರಕ್ಷಿತ ವಾತಾವರಣ ಕಲ್ಪಿಸಬೇಕು. ಭಾರೀ ಪ್ರಮಾಣದ ಸ್ಫೋಟಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ, ಮೆಡಿಕಲ್ ಇನ್ಸ್ಟಿಟ್ಯೂಷನ್‌ನಲ್ಲಿ ಉಗ್ರರು ಪತ್ತೆಯಾಗಿದ್ದಾರೆ. ನಮ್ಮ ಗೃಹ ಮಂತ್ರಿಗಳು ಎಚ್ಚೆತ್ತು ಅಂತಹ ಸ್ಪಾಟ್‌ಗಳನ್ನು ಐಡಿಂಟಿಫೈ ಮಾಡಬೇಕು. ಈಗ ನಡೆದಿರುವ ಭಯೋತ್ಪಾದಕ ದಾಳಿಯಲ್ಲಿ ಭದ್ರತಾ ವ್ಯವಸ್ಥೆ ಫೇಲ್ಯೂರ್ ಅಂತಾ ಹೇಳಬೇಕಾಗುತ್ತದೆ. ಈ ಸ್ಫೋಟವು ದೆಹಲಿಯ ಹೃದಯಭಾಗದಲ್ಲಿ ನಡೆದಿದ್ದು, ಭಯೋತ್ಪಾದಕರ ಉದ್ದೇಶವು ಆಪರೇಷನ್ ಸಿಂದೂರ್‌ಗೆ ಪ್ರತಿಕಾರ ಎಂಬರ್ಥದಲ್ಲಿ ಇದು ನಡೆದಿದೆ. ಕೇಂದ್ರ ಸರ್ಕಾರವು ತಕ್ಷಣ ಕ್ರಮಗಳನ್ನು ಕೈಗೊಳ್ಳಬೇಕು ಆಗ್ರಹಿಸಿದರು.
