ಅಥಣಿ: ರೆಸಾರ್ಟ್‌ಗೆ ಹೋಗಿ ಇತ್ತೀಚೆಗಷ್ಟೇ ದಿಢೀರನೆ ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದ ಶಾಸಕ ಮಹೇಶ ಕುಮಟಳ್ಳಿ ಇದೀಗ ಮತ್ತೆ ನಾಪತ್ತೆಯಾಗಿದ್ದು, ಎಲ್ಲಿಗೆ ಹೋಗಿದ್ದಾರೆ ಎಂಬ ಪ್ರಶ್ನೆ ಉದ್ಭವಿಸಿದೆ.

ಜ. 25 ರಂದು ರಾತ್ರಿ ಕಾಣಿಸಿಕೊಂಡಿದ್ದ ಶಾಸಕ ಕುಮಟಳ್ಳಿ, ಜ. 26 ರಂದು ಗಣರಾಜ್ಯೋತ್ಸವದ ದಿನದಂದು ಧ್ವಜಾರೋಹಣ ನೆರವೇರಿಸಿ ತರಾತುರಿಯಲ್ಲಿ ಎದ್ದು ಹೋದರು. 

ಆದರೆ, ಅವರು ಎಲ್ಲಿಗೆ ಹೋದರು ಎಂಬುದು ಇನ್ನೂ ನಿಗೂಢವಾಗಿದ್ದು, ಆ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಬಲ್ಲ ಮೂಲಗಳ ಪ್ರಕಾರ ಕುಮಟಳ್ಳಿ, ಬೆಳಗಾವಿ ಜಿಲ್ಲೆ ಬಿಟ್ಟು ಬೇರೆಡೆಗೆ ತೆರಳಿಲ್ಲ ಎನ್ನಲಾಗಿದೆ. ಮಹೇಶ್ ಕುಮಟಳ್ಳಿ ಆಯ್ಕೆಗೆ ಶ್ರಮಿಸಿದ ಶಾಸಕ ರಮೇಶ ಜಾರಕಿಹೊಳಿ ಅವರ ಹತ್ತಿರವೆ ಇದ್ದಾರೆ ಎನ್ನುತ್ತಿದ್ದಾರೆ ಶಾಸಕರ ಆಪ್ತರು. 

ರಮೇಶ ಜಾರಕಿಹೊಳಿ ನಿಷ್ಠರಾಗಿ ಅವರು ಕೈಗೊಳ್ಳುವ ನಿರ್ಧಾರಕ್ಕೆ ಬದ್ಧರಾಗಿದ್ದಾರೆ ಎಂದೂ ಹೇಳಲಾಗುತ್ತಿದೆ. ಹೀಗಾಗಿ ಜಾರಕಿಹೊಳಿ ಅವರ ಬೇಡಿಕೆಗೆ ಕಾಂಗ್ರೆಸ್  ಹೈಕಮಾಂಡ್ ಇನ್ನೂ ಸ್ಪಂದಿಸಿಲ್ಲ. ಇದರಿಂದ ಮತ್ತಷ್ಟು ಪರಿಸ್ಥಿತಿ ಬಿಗಡಾಯಿಸಿದೆ ಎನ್ನುವ ಮಾತು ಕ್ಷೇತ್ರದಲ್ಲಿ ಹರಿದಾಡುತ್ತಿದೆ.