ಬೆಂಗಳೂರು[ಫೆ.09]: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಟ್ಯೂಬ್‌ಲೈಟ್‌ ಎಂದು ಟೀಕಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಿರಿಯ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ತಿರುಗೇಟು ನೀಡಿದ್ದಾರೆ.

‘ಟ್ಯೂಬ್‌ಲೈಟ್‌ ಚೆನ್ನಾಗಿ ಬೆಳಕನ್ನಾದರೂ ಕೊಡುತ್ತೆ. ಪ್ರಧಾನಿ ಮೋದಿ ಝೀರೋ ಕ್ಯಾಂಡಲ್‌ ಬಲ್‌್ಬ ಇದ್ದಂತೆ. ಬೆಳಕೇ ಬರಲ್ಲ’ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ವ್ಯಂಗ್ಯವಾಡಿದರೆ, ‘ನಾವೇನೋ (ಕಾಂಗ್ರೆಸ್‌ನವರು) ಟ್ಯೂಬ್‌ಲೈಟ್‌ಗಳು, ನಿಮ್ಮದು (ಬಿಜೆಪಿಯವರದ್ದು) ಹೈವೋಲ್ಟೇಜ್‌ ಅಲ್ವಾ? ಹಾಗಾದರೆ ನಿರುದ್ಯೋಗದ ಕತ್ತಲು, ಮಂಕಾಗಿರುವ ಆರ್ಥಿಕತೆ ಮೇಲೆತ್ತಿ ದೇಶಕ್ಕೆ ಬೆಳಕು ನೀಡಿ’ ಎಂದು ಡಿ.ಕೆ.ಶಿವಕುಮಾರ್‌ ಸವಾಲು ಎಸೆದಿದ್ದಾರೆ.

ರಾಹುಲ್‌ ಗಾಂಧಿ ‘ಟ್ಯೂಬ್‌ಲೈಟ್‌’: ಬಿಜೆಪಿಗರನ್ನು ನಗೆಗಡಲಲ್ಲಿ ತೇಲಿಸಿದ ಮೋದಿ ಮಾತು!

ಸದಾಶಿವನಗರದ ತಮ್ಮ ನಿವಾಸದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ಟ್ಯೂಬ್‌ಲೈಟ್‌ ಚೆನ್ನಾಗಿ ಬೆಳಕನ್ನಾದರೂ ಕೊಡುತ್ತೆ. ಆದರೆ, ಮೋದಿ ಅವರು ಒಂದು ರೀತಿ ಝೀರೋ ಕ್ಯಾಂಡಲ್‌ ಬಲ್‌್ಬ ಇದ್ದಂತೆ. ಲೈಟ್‌ ಇರುತ್ತೆ, ಬೆಳಕೇ ಬರೋದಿಲ್ಲ. ನಾನು ಸಂಸತ್‌ನಲ್ಲಿ ಭಾಗವಹಿಸಿದ್ದರೆ ಹೀಗೇ ಕೇಳುತ್ತಿದ್ದೆ. ಮೋದಿ ಅವರು ರಾಹುಲ್‌ ಗಾಂಧಿ ಬಗ್ಗೆ ವೈಯಕ್ತಿಕ ಟೀಕೆ ಮಾಡುವ ಬದಲು ದೇಶದ ರೈತರ ಆದಾಯ ದುಪ್ಪಟ್ಟಾಗಿದೆಯಾ? ಕಪ್ಪು ಹಣ ವಾಪಸ್‌ ತಂದು ಪ್ರತಿಯೊಬ್ಬ ನಾಗರಿಕನ ಅಕೌಂಟಿಗೆ 15 ಲಕ್ಷ ರು. ಹಾಕಲಾಗಿದೆಯಾ ಎಂದು ತಾವು ಅಧಿಕಾರಕ್ಕೆ ಬರುವ ಮುನ್ನ ಜನರಿಗೆ ಕೊಟ್ಟಎಷ್ಟುಭರವಸೆಗಳನ್ನು ಈಡೇರಿಸಿದ್ದೇವೆ ಎಂಬ ಬಗ್ಗೆ ಸಂಸತ್‌ನಲ್ಲಿ ಉತ್ತರ ಕೊಡಲಿ ಎಂದು ತೀಕ್ಷ$್ಣವಾಗಿ ಹೇಳಿದರು.

ಮತ್ತೊಂದೆಡೆ ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್‌, ನಾವೇನೋ ಟ್ಯೂಬ್‌ಲೈಟ್‌ಗಳು. ನಿಮ್ಮದು ಹೈವೋಲ್ಟೇಜ್‌ ಅಲ್ವಾ? ದೇಶದ ಎಲ್ಲ ನಿರುದ್ಯೋಗಿ ಯುವಕರಿಗೂ ಉದ್ಯೋಗದ ಬೆಳಕು ಕೊಡ್ರಪ್ಪಾ. ನಮ್ಮ ದೇಶದ ಆರ್ಥಿಕತೆಯನ್ನು ಎಲ್ಲ ದೇಶದವರೂ ಹೊಗಳುವಂತೆ ಮಾಡ್ರಪ್ಪಾ ಎಂದರು.

ಬಜೆಟ್‌ನಲ್ಲಿ ರಾಜ್ಯಕ್ಕೆ ಯಾವ ಹೊಸ ಯೋಜನೆಗಳನ್ನೂ ನೀಡಿಲ್ಲ. ರಾಜ್ಯದ ಅನುದಾನವನ್ನೆಲ್ಲಾ ಕಡಿಮೆ ಮಾಡಿದ್ದಾರೆ. ಯುವ ಪೀಳಿಗೆಯನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದ 25 ಬಿಜೆಪಿ ಸಂಸದರು, ರಾಜ್ಯ ಸರ್ಕಾರದ ಬಿಜೆಪಿ ಶಾಸಕರು ಶಾಲೆಗೆ ಹೋಗುವ ಮಕ್ಕಳಿದ್ದಂತೆ ಬಿಡಿ. ಅವರೇನೂ ಮಾತನಾಡುವುದಿಲ್ಲ ಎಂದು ಲೇವಡಿ ಮಾಡಿದರು.

ವಿಧಾನ ಪರಿಷತ್‌ನ ಒಂದು ಸ್ಥಾನಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಅನಿಲ್‌ ಕುಮಾರ್‌ ಅವರು ನಾಮಪತ್ರ ಸಲ್ಲಿಸಿರುವ ಕುರಿತು ಇದೇ ವೇಳೆ ಪ್ರತಿಕ್ರಿಯಿಸಿದ ಅವರು, ರಾಜಕೀಯದಲ್ಲಿ ಎಲ್ಲಿ ಯಾರು ಯಾವಾಗ ಹೇಗೆ ಉದ್ಭವ ಆಗುತ್ತಾರೋ, ಎಲ್ಲಿ ಮಲಗಿ ಎಲ್ಲಿ ಏಳುತ್ತಾರೋ ಗೊತ್ತಿಲ್ಲ. ನಮ್ಮವರನ್ನೇ ನೋಡಿದ್ರಲ್ಲ. ಮೂವತ್ತು ವರ್ಷಕ್ಕೂ ಹೆಚ್ಚು ಕಾಲ ಕಾಂಗ್ರೆಸ್‌ನಲ್ಲಿದ್ದು ಹೋದ್ರು. ಹೇಗೆಲ್ಲಾ ಹೋರಾಟ ಆಯ್ತು ಅಂತ ಗೊತ್ತಲ್ಲ ಎಂದರು.