‘ನಾನು ಟಾಪ್‌ ಫೈವ್‌ನಲ್ಲಿ ಇದ್ದೇನೆ. ನೀನು?’

ವಿಧಾನಸಭೆ ಮೊಗಸಾಲೆಯಲ್ಲಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಕಾಂಗ್ರೆಸ್‌ ಶಾಸಕರು ಪರಸ್ಪರ ಪ್ರಶ್ನಿಸಿ ತಮಾಷೆ ಮಾಡಿಕೊಳ್ಳುತ್ತಿರುವ ಪರಿ ಇದು.

ಇದಕ್ಕೆ ಕಾರಣ- ಸಚಿವ ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನ ದೊರೆಯಲು ಸಾಧ್ಯವಿಲ್ಲದ ಆದರೆ, ಹಿರಿತನ ಹೊಂದಿರುವ ಹತ್ತಾರು ಶಾಸಕರಿಗೆ ಪ್ರಮುಖ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನದ ಭರವಸೆಯನ್ನು ಪಕ್ಷದ ಹಿರಿಯ ನಾಯಕರು ನೀಡುತ್ತಿರುವುದು.

ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌, ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಅವರು ತಮ್ಮ ಬೆಂಬಲಿಗ ಶಾಸಕರಿಗೆ ಸಂಪನ್ಮೂಲಭರಿತವಾಗಿರುವ ಮೊದಲ ಐದು ಪ್ರಮುಖ ನಿಗಮ ಮಂಡಳಿಗಳ ಪೈಕಿ ಒಂದಕ್ಕೆ ನಿಮ್ಮನ್ನು ಅಧ್ಯಕ್ಷರನ್ನಾಗಿ ಮಾಡುವುದಾಗಿ ಭರವಸೆ ನೀಡುತ್ತಿದ್ದಾರಂತೆ.

ಅಂದ ಹಾಗೆ ಕಾಂಗ್ರೆಸ್‌ ಪಾಲಿಗೆ ಬರಲಿರುವ ಟಾಪ್‌ ಫೈವ್‌ ನಿಗಮ ಮಂಡಳಿಗಳು- ಬಿಡಿಎ ಅಧ್ಯಕ್ಷ, ಸ್ಲಂ ಬೋರ್ಡ್‌, ಲ್ಯಾಂಡ್‌ ಆರ್ಮಿ, ಕೆಡಬ್ಯುಎಸ್‌ಎಸ್‌ಬಿ ಮತ್ತು ಕೆಎಚ್‌ಬಿ.

ಈ ಶಾಸಕರ ಪ್ರಕಾರ ಐದಕ್ಕೂ ಹೆಚ್ಚು ಮಂದಿಗೆ ಬಿಡಿಎ ಅಧ್ಯಕ್ಷ ಸ್ಥಾನದ ಭರವಸೆ ದೊರಕಿದೆಯಂತೆ, ಲ್ಯಾಂಡ್‌ ಆರ್ಮಿಗೆ 12 ಮಂದಿಗೆ, ಸ್ಲಂ ಬೋರ್ಡ್‌ಗೆ 7ಕ್ಕೂ ಹೆಚ್ಚು ಮಂದಿಗೆ ಭರವಸೆ ನೀಡಿದೆಯಂತೆ. ಹೀಗಾಗಿ, ನಿಗಮ ಮಂಡಳಿ ಆಕಾಂಕ್ಷಿ ಶಾಸಕರು ಪರಸ್ಪರ ಭೇಟಿಯಾದಾಗ, ನನಗೆ ಸ್ಲಂ ಬೋರ್ಡ್‌ ಕೊಡ್ತೀನಿ ಅಂತಿದ್ದಾರೆ, ನಿನಗೆ ಎಂದು ಪ್ರಶ್ನಿಸಿದರೆ, ಮತ್ತೊಬ್ಬ ಶಾಸಕ ನನಗೂ ಅದೇ ಭರವಸೆ ಕೊಟ್ಟಿದ್ದಾರೆ ಗುರು ಎಂದು ಹೇಳಿಕೊಂಡು ಜೋರು ಧ್ವನಿಯಲ್ಲಿ ನಗುತ್ತಿದ್ದದ್ದು ಕಂಡುಬಂತು.