ಬಳ್ಳಾರಿಯಲ್ಲಿ ನಡೆಯುವ ಲೋಕಸಭಾ ಉಪ ಚುನಾವಣೆ ಅಭ್ಯರ್ಥಿ ಆಯ್ಕೆಯಲ್ಲಿ ಅಚ್ಚರಿಯ ಬೆಳವಣಿಗೆಯೊಂದು ನಡೆದಿದೆ. ಕಾಂಗ್ರೆಸ್ ನಿಂದ ಉಗ್ರಪ್ಪ ಅವರನ್ನ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ.
ಬೆಂಗಳೂರು : ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಹಿರಿಯ ನಾಯಕ ವಿ.ಎಸ್. ಉಗ್ರಪ್ಪ ಅವರನ್ನು ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಅಭ್ಯರ್ಥಿಯಾಗಿ ಕಾಂಗ್ರೆಸ್ ಪ್ರಕಟಿಸಿದೆ.
ಕಡೆ ಕ್ಷಣದವರೆಗೂ ಬಳ್ಳಾರಿ ಕ್ಷೇತ್ರದ ಟಿಕೆಟ್ ಶಾಸಕ ನಾಗೇಂದ್ರ ಅವರ ಸಹೋದರ ವೆಂಕಟೇಶ್ ಪ್ರಸಾದ್ ಅವರಿಗೆ ಲಭಿಸಲಿದೆ ಎಂದೇ ಹೇಳಲಾಗಿತ್ತು. ಆದರೆ, ಸೋಮವಾರ ಎಐಸಿಸಿಯು ಬಳ್ಳಾರಿಗೆ ವಿ.ಎಸ್. ಉಗ್ರಪ್ಪ ಹಾಗೂ ಜಮಖಂಡಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಆನಂದ ನ್ಯಾಮಗೌಡ ಅವರ ಹೆಸರನ್ನು ಘೋಷಿಸಿದೆ.
ತೀವ್ರ ಲಾಬಿ ನಡೆಸಿದ ವೆಂಕಟೇಶ್ ಪ್ರಸಾದ್ ಅವರನ್ನು ಕಡೆ ಕ್ಷಣದಲ್ಲಿ ಕೈಬಿಟ್ಟು ಉಗ್ರಪ್ಪ ಅವರನ್ನು ಆಯ್ಕೆ ಮಾಡಲು ಪ್ರಸಾದ್‌ಗೆ ಟಿಕೆಟ್ ನೀಡಿದರೆ ಬಳ್ಳಾರಿ ಶಾಸಕರ ಒಂದು ಬಣ ಒಳ ಏಟು ನೀಡಬಹುದು ಎಂಬ ಭೀತಿ ಕಾರಣವಾಗಿದೆ ಎನ್ನಲಾಗಿದೆ. ಬಳ್ಳಾರಿಯಲ್ಲಿ ಶಾಸಕರ ಎರಡು ಬಣ ನಿರ್ಮಾಣವಾಗಿದೆ. ಈ ಬಣಗಳು ಪರಸ್ಪರ ಕಾಲೆಳೆಯುವಲ್ಲಿ ನಿರತವಾಗಿವೆ ಎಂಬ ಗುಮಾನಿ ರಾಜ್ಯ ನಾಯಕರಿಗೆ ಇದೆ. ರಾಜ್ಯ ಕಾಂಗ್ರೆಸ್ ನಾಯಕರು ಹಾಗೂ ಹೈಕಮಾಂಡ್ ನಾಯಕರ ಒತ್ತಡದ ಪರಿಣಾಮವಾಗಿ ಯಾರಿಗೆ ಟಿಕೆಟ್ ನೀಡಿದರೂ ಕೆಲಸ ಮಾಡುವುದಾಗಿ ಶಾಸಕರು ಹೇಳುತ್ತಿದ್ದರೂ, ಅಂತಿಮವಾಗಿ ಒಳ ಏಟು ನೀಡಬಹುದು ಎಂಬ ಆತಂಕವೇ ಟಿಕೆಟ್ ವಿ.ಎಸ್. ಉಗ್ರಪ್ಪ ಅವರ ಪಾಲಾಗಲು ಕಾರಣ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಈ ಕ್ಷೇತ್ರಕ್ಕೆ ಹಲವು ಪ್ರಭಾವಿಗಳು ಟಿಕೆಟ್ಗಾಗಿ ತೀವ್ರ ಪೈಪೋಟಿ ನಡೆಸಿದ್ದರಿಂದ ಟಿಕೆಟ್ ಹಂಚಿಕೆ ಕಾಂಗ್ರೆಸ್ ಪಾಲಿಗೆ ಬಿಸಿ ತುಪ್ಪವಾಗಿತ್ತು. ಬಳ್ಳಾರಿಯ ಶಾಸಕರಿಂದ ಹಿಡಿದು ರಾಜ್ಯಮಟ್ಟದ ನಾಯಕರವರೆಗೂ ಒಬ್ಬೊಬ್ಬರು ಒಬ್ಬೊಬ್ಬ ಅಭ್ಯರ್ಥಿ ಪರವಾಗಿ ಲಾಬಿ ನಡೆಸಿದ್ದರಿಂದ ಈ ಕಗ್ಗಂಟು ನಿವಾರಿಸಲು ಕಾಂಗ್ರೆಸ್ ಸಾಕಷ್ಟುಸರ್ಕಸ್ ಕೂಡ ಮಾಡಿತ್ತು. ನಾಗೆæೕಂದ್ರ ಸಹೋದರ ವೆಂಕಟೇಶ್ ಪ್ರಸಾದ್, ಸತೀಶ್ ಜಾರಕಿಹೊಳಿ ಸಂಬಂಧಿ ದೇವೇಂದ್ರಪ್ಪ, ಸ್ಥಳೀಯರಾದ ನಾಗರಾಜ್ ಗುಜ್ಜಲ್, ನೆಟ್ಟಕಲ್ಲಪ್ಪ ಅವರು ತೀವ್ರ ಪೈಪೋಟಿ ನಡೆಸಿದ್ದರು. ಈ ನಡುವೆ, ಲೋಕಸಭಾ ಚುನಾವಣೆಗೆ ರಾಜ್ಯಮಟ್ಟದ ನಾಯಕರೊಬ್ಬರನ್ನು ಕಣಕ್ಕೆ ಇಳಿಸುವ ಚಿಂತನೆ ಹಿನ್ನೆಲೆಯಲ್ಲಿ ವಿ.ಎಸ್.ಉಗ್ರಪ್ಪ ಅವರ ಹೆಸರು ಚಾಲನೆಗೆ ಬಂದಿತ್ತು. ಪಕ್ಷ ಟಿಕೆಟ್ ನೀಡಿದರೆ ಸ್ಪರ್ಧಿಸುವುದಾಗಿ ಉಗ್ರಪ್ಪ ತಿಳಿಸಿದ್ದರು.
ಆದರೆ, ಪಕ್ಷದ ಅಭ್ಯರ್ಥಿ ಆಯ್ಕೆಗಾಗಿ ರಾಜ್ಯ ನಾಯಕರು ನಡೆಸಿದ ಸಭೆಗಳಲ್ಲಿ ಹೆಚ್ಚಾಗಿ ವೆಂಕಟೇಶ್ ಪ್ರಸಾದ್ ಹಾಗೂ ದೇವೇಂದ್ರಪ್ಪ ಅವರ ಹೆಸರಿನ ಕುರಿತು ಚರ್ಚೆ ನಡೆದಿತ್ತು. ಬಳ್ಳಾರಿಯ ಬಿಜೆಪಿಯ ಅಭ್ಯರ್ಥಿಗಳು ಅಬ್ಬರದ ಪ್ರಚಾರ ನಡೆಸಲಿದ್ದು, ಆರ್ಥಿಕ ಸಂಪನ್ಮೂಲವೂ ಭರ್ಜರಿಯಾಗಿದೆ. ಹೀಗಾಗಿ ಅವರಿಗೆ ತಕ್ಕ ಪೈಪೋಟಿ ನೀಡುವಂತಹವರಿಗೆ ಟಿಕೆಟ್ ನೀಡಬೇಕು ಎಂಬ ಚಿಂತನೆ ಹಿನ್ನೆಲೆಯಲ್ಲಿ ನಾಯಕ ಸಮಾಜದವರೇ ಹಾಗೂ ಆರ್ಥಿಕವಾಗಿ ಬಲವಾಗಿರುವ ವೆಂಕಟೇಶ್ ಪ್ರಸಾದ್ ಹಾಗೂ ದೇವೆಂದ್ರಪ್ಪ ಅವರ ಹೆಸರು ಚರ್ಚೆಯಾಗಲು ಕಾರಣವಾಗಿತ್ತು.
ಈ ನಡುವೆ, ಲೋಕಸಭೆಯಂತಹ ದೊಡ್ಡ ಚುನಾವಣೆಯಲ್ಲಿ ಕೇವಲ ಹಣದಿಂದಲೇ ಗೆಲ್ಲುವುದು ಸಾಧ್ಯವಿಲ್ಲ. ಸೀಮಿತ ವ್ಯಾಪ್ತಿ ಹೊಂದಿರುವ ವಿಧಾನಸಭೆ ಚುನಾವಣೆಗಳಲ್ಲಿ ಹಣ ಹೆಚ್ಚು ಕೆಲಸ ಮಾಡಬಹುದು. ಆದರೆ, ಲೋಕಸಭೆ ಚುನಾವಣೆಯಲ್ಲಿ ರಾಷ್ಟ್ರ ಮಟ್ಟದ ವಿಚಾರಗಳು ಹಾಗೂ ಅಭ್ಯರ್ಥಿಯ ವರ್ಚಸ್ಸು ಕೆಲಸ ಮಾಡುತ್ತದೆ. ಹೀಗಾಗಿ ಆರ್ಥಿಕ ಸಾಮರ್ಥ್ಯಕ್ಕಿಂತಲೂ ವರ್ಚಸ್ವಿ ನಾಯಕರನ್ನು ಕಣಕ್ಕೆ ಇಳಿಸಬೇಕು ಎಂದು ಕೆ.ಸಿ.ಕೊಂಡಯ್ಯ ಅವರಂತಹ ನಾಯಕರು ವಾದ ಮಂಡಿಸಿದ್ದರು.
ಇಂತಹ ವರ್ಚಸ್ವಿ ನಾಯಕರ ಪೈಕಿ ವಾಲ್ಮೀಕಿ ಸಮಾಜದವರಾದ ಸತೀಶ್ ಜಾರಕಿಹೊಳಿ ಅಥವಾ ವಿ.ಎಸ್.ಉಗ್ರಪ್ಪ ಅವರನ್ನು ಕಣಕ್ಕೆ ಇಳಿಸುವುದು ಉತ್ತಮ. ಸತೀಶ್ ಜಾರಕಿಹೊಳಿ ಅವರು ವಾಲ್ಮೀಕಿ ಜನಾಂಗದ ಮೇಲೆ ಹಿಡಿತ ಹೊಂದಿದ್ದಾರೆ. ಕ್ಷೇತ್ರದ ಹೊರಗಿನವರಾದರೂ ರಾಜ್ಯ ಮಟ್ಟದ ವರ್ಚಸ್ಸು ಹೊಂದಿದ್ದಾರೆ. ಹೀಗಾಗಿ ಅವರು ಸೂಚಿಸುತ್ತಿರುವ ದೇವೇಂದ್ರಪ್ಪ ಅವರಿಗಿಂತ ಅವರನ್ನೇ ಕಣಕ್ಕೆ ಇಳಿಸಬೇಕು ಎಂದು ವಾದ ಮಾಡಲಾಗಿತ್ತು.
ಆದರೆ, ಬಳ್ಳಾರಿಯಿಂದ ಸ್ಪರ್ಧಿಸಲು ಸತೀಶ್ ಜಾರಕಿಹೊಳಿ ಸ್ಪಷ್ಟವಾಗಿ ನಿರಾಕರಿಸಿದ್ದರಿಂದ ರಾಜ್ಯ ಮಟ್ಟದ ವರ್ಚಸ್ಸು ಹೊಂದಿರುವ ಹಾಗೂ ಬಿಜೆಪಿ ಅಧಿಕಾರದಲ್ಲಿದ್ದ ಅವಧಿಯಲ್ಲಿ ಬಳ್ಳಾರಿಯ ಗಣಿ ಧಣಿಗಳ ವಿರುದ್ಧ ಹೋರಾಟ ರೂಪುಗೊಳ್ಳಲು ಪ್ರಮುಖ ಪ್ರೇರಕರಲ್ಲಿ ಒಬ್ಬರಾಗಿದ್ದ ವಿ.ಎಸ್. ಉಗ್ರಪ್ಪ ಅವರ ಹೆಸರನ್ನು ಪರಿಗಣಿಸಬೇಕು ಎಂದು ಆಗ್ರಹಿಸಲಾಗಿತ್ತು.
ಇಷ್ಟಾಗಿಯೂ ರಾಜ್ಯ ಮಟ್ಟದ ನಾಯಕರ ಸಭೆಗಳಲ್ಲಿ ವೆಂಕಟೇಶ್ ಪ್ರಸಾದ್ ಹಾಗೂ ದೇವೇಂದ್ರಪ್ಪ ಅವರ ಹೆಸರೇ ಮುಂಚೂಣಿಯಲ್ಲಿತ್ತು. ಆದರೆ, ಈ ಇಬ್ಬರ ಪೈಕಿ ಯಾರನ್ನು ಆಯ್ಕೆ ಮಾಡಿದರೂ ಕಾಂಗ್ರೆಸ್ನ ಒಂದು ಬಣ ವಿರುದ್ಧವಾಗಿ ಕೆಲಸ ಮಾಡುವ ಸಾಧ್ಯತೆ ಕಂಡು ಬಂದ ಹಿನ್ನೆಲೆಯಲ್ಲಿ ಪರ್ಯಾಯ ಅಭ್ಯರ್ಥಿ ಹುಡುಕಾಟ ನಡೆಸಿದ ಕಾಂಗ್ರೆಸ್ ನಾಯಕರಿಗೆ ವಿ.ಎಸ್. ಉಗ್ರಪ್ಪ ಅಪ್ಯಾಯಮಾನವಾಗಿ ಕಂಡರು ಎಂದು ಮೂಲಗಳು ಹೇಳುತ್ತವೆ.
