ಕೋಲಾರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕದ ಬೊಬ್ಬುಲಿ ಪುಲಿ ಎಂದು ಸ್ಪೀಕರ್‌ ರಮೇಶ್‌ ಕುಮಾರ್‌ ಬಣ್ಣಿಸಿದರು.

ಜಿಲ್ಲೆಯ ಶ್ರೀನಿವಾಸಪುರದಲ್ಲಿ ಕನಕ ಭವನ ಉದ್ಘಾಟನೆ ವೇಳೆ ಮಾತನಾಡಿದ ಅವರು, ನನ್ನ ಹುಲಿ ಅವತಾರ ಮುಗಿದು ಬಹಳ ಕಾಲವಾಗಿದೆ. ಆದರೆ, ಸಿದ್ದರಾಮಯ್ಯ ಅವರ ಖದರ್‌ ಇಂದಿಗೂ ಅದೇ ರೀತಿ ಇದೆ ಎಂದರು.

ಸಿದ್ದರಾಮಯ್ಯರ ಮಾತು ಒರಟಾದ್ರೂ ಅವರ ಮನಸು ಬಹಳ ಮೃದು. ಸಿದ್ದರಾಮಯ್ಯ ಹಾಗೂ ದೇವರಾಜು ಅರಸು ಅವರ ನಡುವೆ ಸಾಮ್ಯತೆಗಳಿವೆ. ದೇವರಾಜು ಅರಸು ನನ್ನ ರಾಜಕೀಯ ಗುರುಗಳು. ಅವರಲ್ಲಿದ್ದ ಜಾತ್ಯತೀತ ಮನೋಭಾವ ಸಿದ್ದರಾಮಯ್ಯನವರಲ್ಲಿ ಕಂಡಿದ್ದೇನೆ. ಸಿದ್ದರಾಮಯ್ಯನವರೇ ನನಗೆ ನಾಯಕ. ಮಾಜಿ ಮುಖ್ಯಮಂತ್ರಿಗಳಾದರೂ ನನಗೆ ಅವರೇ ಮುಖ್ಯಮಂತ್ರಿಗಳು. ಅವರೇ ನಮ್ಮ ಮುಖಂಡರು ಎಂದು ಹೇಳಿದರು. ನಾನು ನನ್ನ ಕ್ಷೇತ್ರಕ್ಕೆ ಮಾಡಿರುವ ಅಭಿವೃದ್ಧಿ ಕೆಲಸಗಳ ಹಿಂದೆ ಸಿದ್ದರಾಮಯ್ಯನವರ ಶ್ರಮವಿದೆ ಎಂದರು.

ಕೆ.ಸಿ. ವ್ಯಾಲಿ ನೀರಿಗೆ ರಸ್ತೆಗಳಲ್ಲಿ ಸ್ಪೀಡ್‌ ಕಟ್ಟುಗಳು ನಿರ್ಮಿಸಿದಂತೆ ಅಡೆತಡೆಗಳನ್ನು ತರುತ್ತಿದ್ದಾರೆ. ನಿಧಾನವಾಗಿ ಮುನ್ನುಗುವ ಕೆಲಸ ಮಾಡಲಾಗುತ್ತಿದೆ. ಎತ್ತಿನಹೊಳೆ ಯೋಜನೆಯ ಭೂ ಸ್ವಾಧೀನಕ್ಕೆ ತಿದ್ದುಪಡಿ ಅಂಗೀಕಾರಗೊಂಡು ರಾಜ್ಯಪಾಲರ ಅಂಗಳಕ್ಕೆ ಹೋಗಿದೆ. ಅಲ್ಲಿ ಅಂಗಿಕಾರ ಸಿಕ್ಕಿದ ನಂತರ ಎರಡು ವರ್ಷಗಳಲ್ಲಿ ನೀರು ಬರಲಿದೆ ಎಂದರು.