2024-25ರ ವೇಳೆಗೆ ಆದಾಯಕ್ಕಿಂತ 57,993 ಕೋಟಿ ರು. ರಾಜಸ್ವ ಕೊರತೆ ಎದುರಾಗಲಿದೆ. ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ರಾಜ್ಯ ಆರ್ಥಿಕವಾಗಿ ದಿವಾಳಿಯಾಗಲಿದೆ ಎಂದು ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.
ಬೆಂಗಳೂರು (ಮಾ.25): ಬಿಜೆಪಿ ಆಡಳಿತದಲ್ಲಿ ರಾಜ್ಯದ ರಾಜಸ್ವ ಕೊರತೆ ಹೆಚ್ಚುತ್ತಲೇ ಇದ್ದು, 2024-25ರ ವೇಳೆಗೆ ಆದಾಯಕ್ಕಿಂತ 57,993 ಕೋಟಿ ರು. ರಾಜಸ್ವ ಕೊರತೆ ಎದುರಾಗಲಿದೆ. ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ರಾಜ್ಯ ಆರ್ಥಿಕವಾಗಿ ದಿವಾಳಿಯಾಗಲಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಲ ಮಾಡಿ ಸಂಬಳ ಕೊಡುವ ಸ್ಥಿತಿಗೆ ರಾಜ್ಯ ಸರ್ಕಾರ ಬಂದಿದೆ. ನಮ್ಮ ಸರ್ಕಾರದ ಆಡಳಿತದಲ್ಲಿ (ಕಾಂಗ್ರೆಸ್) ಶೇ.74ರಿಂದ 78 ರಷ್ಟಿದ್ದ ಬದ್ಧತಾ ವೆಚ್ಚ ಈಗ ಬಿಜೆಪಿ ಆಡಳಿತದಲ್ಲಿ ಶೇ.102ಕ್ಕೇರಿದೆ. ಕಳೆದ ಬಾರಿ ಬಜೆಟ್‌ನಲ್ಲಿ 143 ಕೋಟಿ ರು. ರಾಜಸ್ವ ಹೆಚ್ಚುವರಿಯಾಗಿತ್ತು. ಆದರೆ, ಈಗ 19,485 ಕೋಟಿ ರಾಜಸ್ವ ಕೊರತೆಯಾಗಿದೆ ಎಂದು ಹೇಳಿದ್ದಾರೆ. 2021-22ನೇ ಸಾಲಿನಲ್ಲೂ ಸರ್ಕಾರ 15,133 ಕೋಟಿ ರು. ರಾಜಸ್ವ ಕೊರತೆ ಅಂದಾಜಿಸಿದೆ. ಆದರೆ, ನನ್ನ ಪ್ರಕಾರ ಇದು 20,000 ಕೋಟಿ ರು. ಮೀರಲಿದೆ ಎಂದರು.
2022-23ಕ್ಕೆ 28,088 ಕೋಟಿ ರು., 2023-24ಕ್ಕೆ 47,062 ಕೋಟಿ ರು. ಹಾಗೂ 2024-25ಕ್ಕೆ 57,993 ಕೋಟಿ ರು. ರಾಜಸ್ವ ಕೊರತೆಯಾಗಲಿದೆ ಎಂದು ಸರ್ಕಾರವೇ ಅಂದಾಜಿಸಿದೆ. ಪ್ರತೀ ವರ್ಷ ಈ ಕೊರತೆ ಸರಿದೂಗಿಸಲು ಸಾಲ ಮಾಡಬೇಕಾಗುತ್ತದೆ. ಈಗಾಗಲೇ ಈ ವರ್ಷ 70 ಸಾವಿರ ಕೋಟಿ ರು. ಸಾಲ ಮಾಡಿದ್ದಾರೆ. ವೆಚ್ಚವನ್ನು ಕಡಿಮೆ ಮಾಡಿ ಸಾಲ ಹೆಚ್ಚಾಗದಂತೆ ಮುಖ್ಯಮಂತ್ರಿ ಅವರು ಕ್ರಮ ಕೈಗೊಳ್ಳದಿದ್ದರೆ ರಾಜ್ಯದ ಆರ್ಥಿಕ ಶಿಸ್ತು ದಾರಿತಪ್ಪಲಿದೆ. ರಾಜ್ಯ ದಿವಾಳಿಯಾಗಲಿದೆ ಎಂದು ಎಚ್ಚರಿಸಿದರು.
ಕಾಂಗ್ರೆಸ್‌ನಲ್ಲಿ ಡಿಕೆಶಿ ಸ್ಫೋಟಿಸುವ ಯತ್ನ : ಅಧಿಕೃತ ಸಂದೇಶದ ಬಗ್ಗೆ ಬಿಜೆಪಿಗರ ಸ್ಫೋಟಕ ಹೇಳಿಕೆ .
ಕೇಂದ್ರಕ್ಕೆ ಪೆಟ್ರೋಲಿಯಂ ಉತ್ಪನ್ನಗಳಿಂದ 30 ಸಾವಿರ ಕೋಟಿ ರು. ಸೇರಿ ಪ್ರತೀ ವರ್ಷ ಕರ್ನಾಟಕದಿಂದ ಎಲ್ಲಾ ಮೂಲಗಳಿಂದ ಸುಮಾರು 2.50 ಲಕ್ಷ ಕೋಟಿ ರು. ತೆರಿಗೆ ಸೇರುತ್ತದೆ. ಆದರೆ, ಇದರಲ್ಲಿ ನಮಗೆ ಈ ವರ್ಷ ವಾಪಸು ಬಂದಿರುವುದು 34,198 ಕೋಟಿ ರು. ಮಾತ್ರ. ನಮಗೆ ಬರಬೇಕಿದ್ದ 28,591 ಕೋಟಿ ರು. ತೆರಿಗೆ ಪಾಲಲ್ಲಿ 20,053 ಕೋಟಿ ರು. ಮಾತ್ರ ಬಂದಿದೆ. ಬಾಕಿ 8538 ಕೋಟಿ ರು. ಬಂದಿಲ್ಲ. ಬರಬೇಕಿದ್ದ 15,538 ಕೋಟಿ ರು. ಸಹಾಯಧನದಲ್ಲೂ 14,140 ಕೋಟಿ ರು. ನೀಡಿ ಉಳಿದದ್ದು ಕೊಟ್ಟಿಲ್ಲ. 15ನೇ ಹಣಕಾಸು ಆಯೋಗ ಶಿಫಾರಸು ಮಾಡಿದ್ದ 5,495 ಕೋಟಿ ರು. ವಿಶೇಷ ಅನುದಾನವೂ ನೀಡಿಲ್ಲ. 2022ರ ಜೂನ್‌ನಿಂದ ಜಿಎಸ್‌ಟಿ ಪರಿಹಾರವೂ ಪೂರ್ಣ ನಿಂತು ಹೋಗಲಿದೆ. ಇದಕ್ಕೆ ಪರಿಹಾರವೇನು ಎಂದು ಪ್ರಶ್ನಿಸಿದರು.
ಕೇಂದ್ರದಿಂದ ನಮ್ಮ ಪಾಲಿನ ಹಣ ತರಲು ವಿಫಲವಾಗಿರುವ ರಾಜ್ಯ ಸರ್ಕಾರ, ಬದ್ಧ ವೆಚ್ಚ ಹೆಚ್ಚಾಗಲು ಅನ್ನಭಾಗ್ಯ, ಕ್ಷೀರಭಾಗ್ಯ, ರೈತರಿಗೆ ವಿದ್ಯುತ್ ಸಬ್ಸಿಡಿ ನೀಡುತ್ತಿರುವುದು ಕಾರಣ ಎಂದು ಹೇಳಿದೆ. ನಮ್ಮ ಸರ್ಕಾರದ ಅವಧಿಯಲ್ಲಿಯೂ ಈ ಯೋಜನೆಗಳಿದ್ದವು. ಆಗ ಆಗದ ಸಮಸ್ಯೆ ಈಗ ಉದ್ಭವಿಸಿದ್ದು ಹೇಗೆ? ಕೆಲವು ಹೊಸ ನಿಗಮಗಳನ್ನು ಸ್ಥಾಪನೆ ಮಾಡಿದ್ದು ಬಿಟ್ಟರೆ ಈ ಸರ್ಕಾರ ಇನ್ನೇನೂ ಮಾಡಿಲ್ಲ. ಬಹುತೇಕ ನಿಗಮಗಳಿಗೆ ಹಣವನ್ನೇ ನೀಡಿಲ್ಲ. ಇದೆಲ್ಲದರ ಬಗ್ಗೆ ನಾವು ಸದನದಲ್ಲಿ ಪ್ರಶ್ನಿಸಿದ್ದರೂ ಸರ್ಕಾರ ಉತ್ತರ ನೀಡಿಲ್ಲ. ಇಂಥವರ ಕೈಲಿ ಸರ್ಕಾರ ನಡೆಸಲು ಆಗುತ್ತಾ? ಎಂದರು.
