ಬೆಂಗಳೂರು [ನ.02]:  ‘ಜನಾದೇಶ ಇಲ್ಲದಿದ್ದರೂ ಅನೈತಿಕವಾಗಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ 100 ದಿನಗಳ ಆಡಳಿತದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯ ಏನೇನೂ ಇಲ್ಲ. ಹೀಗಾಗಿ ಅವರ ಆಡಳಿತಕ್ಕೆ ನಾನು ನೀಡುವ ಅಂಕ ದೊಡ್ಡ ಸೊನ್ನೆ.’ 

ರಾಜ್ಯ ಸರ್ಕಾರಕ್ಕೆ 100 ದಿನ ತುಂಬಲಿರುವ ಈ ಹಂತದಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಆಡಳಿತಾವಧಿಯಲ್ಲಿ ತೋರಿದ ಸಾಧನೆ ಕುರಿತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾಡಿದ ವ್ಯಾಖ್ಯಾನವಿದು. ಬೆಂಗಳೂರು ಪ್ರೆಸ್‌ಕ್ಲಬ್ ಶುಕ್ರವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಈ ನೂರು ದಿನಗಳಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಸಂಪೂರ್ಣ ನಿಂತುಹೋಗಿದೆ. ಸರ್ಕಾರ ಹಿಮ್ಮುಖವಾಗಿ ಚಲಿಸುತ್ತಿದೆ ಎಂದು ಆರೋಪಿಸಿದರು.

ಜತೆಗೆ, ಯಡಿಯೂರಪ್ಪ ಏನಾದರೂ ಸಾಧನೆ ಮಾಡಿದ್ದರೆ ಅದು ಕಾಂಗ್ರೆಸ್-ಜೆಡಿಎಸ್‌ನ  17 ಶಾಸಕರ ರಾಜೀನಾಮೆ ಕೊಡಿಸಿದ್ದು, ಯದ್ವಾತದ್ವಾ ಅಧಿಕಾರಿಗಳ ವರ್ಗಾವಣೆ ಮಾಡಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ಕ್ಷೇತ್ರಗಳ ಅನುದಾನ ಕಿತ್ತು ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಹಂಚಿದ್ದು ಮಾತ್ರ. ಇದನ್ನು ಬಿಟ್ಟರೆ ಇನ್ನೇನೂ ಇಲ್ಲ. ಕೇಂದ್ರದಿಂದ ಹೆಚ್ಚಿನ ನೆರೆ ಪರಿಹಾರ ತರುವಲ್ಲಿಯೂ ವಿಫಲರಾಗಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.

ನೆರೆ ಸಂತ್ರಸ್ತರಿಗೆ ಇನ್ನೂ ಸೂಕ್ತ ಪರಿಹಾರ ಸಿಕ್ಕಿಲ್ಲ. ಅಂಗಡಿ, ಸಣ್ಣ ಪುಟ್ಟ ಉದ್ಯಮ ಕಳೆದುಕೊಂಡವರು, ಬೆಳೆ ಹಾನಿಗೆ ಇದುವರೆಗೂ ಬಿಡಿಗಾಸು ಪರಿಹಾರ ನೀಡಿಲ್ಲ. ಹೆಚ್ಚಿನ ನೆರೆ ಪರಿಹಾರ ತರಲು ಯಡಿಯೂರಪ್ಪ ವಿಫಲರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೆರೆಪೀಡಿತ ಪ್ರದೇಶಗಳಿಗೆ ಕಾಲಿಡಲೇ ಇಲ್ಲ. ಮುಖ್ಯಮಂತ್ರಿ ಭೇಟಿಗೂ ಅವಕಾಶ ಕೊಡಲಿಲ್ಲ.

ಪ್ರತಿಪಕ್ಷಗಳ ಪತ್ರಕ್ಕೂ ಕಿಮ್ಮತ್ತು ನೀಡಲಿಲ್ಲ. ನಾನು ಖುದ್ದು ರಾಜ್ಯದ ಎಲ್ಲಾ ನೆರೆ ಜಿಲ್ಲೆಗಳಿಗೂ ಭೇಟಿ ನೀಡಿ ಅಲ್ಲಿನ ಜನರ ಅಹವಾಲು ಕೇಳಿಯೇ ಮಾತನಾಡಿದ್ದೇನೆ. ನಾನೇನೂ ಸುಮ್ಮನೆ ಆರೋಪ ಮಾಡುತ್ತಿಲ್ಲ. ಜತೆಗೆ ಇದೆಲ್ಲವೂ ಮಾಧ್ಯಮಗಳಲ್ಲಿ ನಿತ್ಯ ವರದಿಯಾಗುತ್ತಿದೆ. ಇದ್ದಿದ್ದು ಇದ್ದಂಗೆ ಹೇಳಿದರೆ ನನ್ನದು ಬೇಜವಾಬ್ದಾರಿ ಹೇಳಿಕೆ ಎನ್ನುತ್ತೀರಲ್ಲಾ, ಬೇಜವಾಬ್ದಾರಿ ಹೇಳಿಕೆ ನನ್ನದಾ ನಿಮ್ಮದಾ, ಮಿಸ್ಟರ್ ಯಡಿಯೂರಪ್ಪ? ಎಂದು ಪ್ರಶ್ನಿಸಿದರು.

2.47 ಲಕ್ಷ ಮನೆಗಳಿಗೆ ನೆರೆಯಿಂದ ಹಾನಿಯಾಗಿರುವುದಾಗಿ ಕೇಂದ್ರ ಸರ್ಕಾರಕ್ಕೆ ವರದಿ ನೀಡಿದ ರಾಜ್ಯ ಸರ್ಕಾರ, ಗುರುವಾರ ರಾಜ್ಯದ ಪ್ರಮುಖ ಪತ್ರಿಕೆಗಳಿಗೆ ನೀಡಿರುವ ಜಾಹೀರಾತಿನಲ್ಲಿ ಕೇವಲ 97 ಸಾವಿರ ಮನೆಗಳಿಗೆ ಹಾನಿಯಾಗಿದೆ ಎಂದು ಹೇಳುತ್ತಿದೆ. ಇನ್ನು ಕೇಂದ್ರ ನೀಡಿರುವ ಪರಿಹಾರ1200 ಕೋಟಿ ರು. ಪರಿಹಾರ ಮಾತ್ರ. ಇದು ಯಾವುದಕ್ಕೂ ಸಾಲುವುದಿಲ್ಲ. ಎಷ್ಟೇ ಕೈಮಗ್ಗಗಳು ಹಾಳಾಗಿದ್ದರೂ ತಲಾ 25 ಸಾವಿರ ರು. ಪರಿಹಾರ ಎಂದು ಆದೇಶ ಮಾಡಿ, ಈಗ ಇದ್ದಕ್ಕಿದ್ದಂತೆ ಎಷ್ಟೇ ಕೈಮಗ್ಗ ಹಾಳಾದರೂ ಒಂದು ಕುಟುಂಬಕ್ಕೆ 25 ಸಾವಿರ ರು. ಮಾತ್ರ ಎಂದು ತಿದ್ದುಪಡಿ ಮಾಡಿದ್ದೀರಿ. ಇದೆಲ್ಲಾ ಸುಳ್ಳಾ? ಎಂದು ಪ್ರಶ್ನಿಸಿದರು