Asianet Suvarna News Asianet Suvarna News

ಮಾಹಿತಿ ಇಲ್ಲದೆ ಬಾಲಿಶ ಹೇಳಿಕೆ ನೀಡಬಾರದು: ಕಟೀಲ್‌ಗೆ ಸಿದ್ದು ತಿರುಗೇಟು

ಖಜಾನೆ ಖಾಲಿಯಾಗಿಲ್ಲ: ಬಿಎಸ್‌ವೈ| ಅನುದಾನ ಕೇಳಿದ ಶಾಸಕರಿಗೆ ನೆರೆಯ ಕಾರಣ ನೀಡಿ ಕಷ್ಟವಿದೆ ಅಂದಿದ್ದೆ ಅಷ್ಟೆ’| ಕಟೀಲ್‌ ವಿರುದ್ಧ ಸಿದ್ದು ಕಿಡಿ

Congress Leader Siddaramaiah Slams BJP State President Nalin Kumar Kateel
Author
Bangalore, First Published Oct 13, 2019, 9:56 AM IST

ವಿಧಾನಸಭೆ[ಅ.13]: ರಾಜ್ಯದ ಹಣಕಾಸಿನ ಪರಿಸ್ಥಿತಿ ಸರಿಯಾಗಿದ್ದು, ಖಜಾನೆ ಖಾಲಿಯಾಗಿಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ.

2019-20ನೇ ಸಾಲಿನ ಅನುದಾನ ಬೇಡಿಕೆಗಳ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ಶಾಸಕರು ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಕೇಳಿದ್ದರು. ರಾಜ್ಯದಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಸಂತ್ರಸ್ತರಿಗೆ ಆರ್ಥಿಕ ನೆರವು ನೀಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಹಣ ಹೊಂದಾಣಿಕೆ ಮಾಡುವುದು ಕಷ್ಟಎಂದು ಹೇಳಿದ್ದೆ. ಆದರೆ, ನನ್ನ ಹೇಳಿಕೆಯನ್ನು ಖಜಾನೆ ಖಾಲಿ ಎಂಬಂತೆ ಬಿಂಬಿಸಲಾಗಿದೆ. ರಾಜ್ಯದ ಹಣಕಾಸಿನ ಪರಿಸ್ಥಿತಿ ಸರಿಯಾಗಿದೆ ಎಂದು ಹೇಳಿದರು.

'ನಳಿನ್ ಕುಮಾರ್ ಕುಡುಕರಂತೆ ಮಾತನಾಡುತ್ತಾರೆ'

ಈ ವೇಳೆ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮುಖ್ಯಮಂತ್ರಿಗಳು ಖಜಾನೆ ಖಾಲಿಯಾಗಿದೆ ಎನ್ನುತ್ತಾರೆ ಎಂದು ಯಾರೋ ಸುಳ್ಳು ಹಬ್ಬಿಸಿದ್ದಾರೆ. ಮುಖ್ಯಮಂತ್ರಿಗಳಿಗೂ ಆರ್ಥಿಕ ಕೊರತೆ ಬಗ್ಗೆ ತಪ್ಪು ಮಾಹಿತಿ ಕೊಟ್ಟಿರಬಹುದು. ಮೋಟಾರು ವಾಹನ ತೆರಿಗೆ ಮಾತ್ರ ಕೊರತೆ ಇದ್ದು, ಉಳಿದೆಲ್ಲಾ ತೆರಿಗೆ ಸಂಗ್ರಹ ಇದೆ. ವಿತ್ತಿಯ ಹೊಣೆಗಾರಿಕೆ ಕಾಯ್ದೆಯಂತೆ ನಡೆದುಕೊಂಡರೆ ಆರ್ಥಿಕವಾಗಿ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದರು.

ದೇಶದ ಆರ್ಥಿಕತೆ ಕುಂಟಿತಗೊಂಡಿದ್ದು, ಜಿಡಿಪಿ ಶೇ.8ರಿಂದ ಶೇ.5ಕ್ಕೆ ಕುಸಿದಿದೆ. ಕೇಂದ್ರ ಸರ್ಕಾರದ ನಿರ್ಧಾರದಿಂದಾಗಿ ಜಿಡಿಪಿ ಕುಸಿತ ಕಂಡಿದೆ. ನಿರುದ್ಯೋಗ ಸಮಸ್ಯೆ ಸೃಷ್ಟಿಯಾಗುತ್ತಿದೆ. ಕೇಂದ್ರದ ಆರ್ಥಿಕ ಸ್ಥಿತಿಯು ರಾಜ್ಯದ ಮೇಲೂ ಪರಿಣಾಮ ಬೀರಲಿದೆ. ಕಳೆದ ಆರು ತಿಂಗಳಲ್ಲಿ ಕೇಂದ್ರದಿಂದ ಬರಬೇಕಿದ್ದ 1672 ಕೋಟಿ ರು. ಬಂದಿಲ್ಲ ಎಂದು ಹೇಳಿದರು.

'ಕೊಡಗು ಸಂತ್ರಸ್ತರಿಗೆ ಕುಮಾರಸ್ವಾಮಿ ಈವರೆಗೂ ಮನೆ ಕಟ್ಟಿಸಿಕೊಟ್ಟಿಲ್ಲ'

ಕಟೀಲ್‌ ವಿರುದ್ಧ ಸಿದ್ದು ಕಿಡಿ

ಹಿಂದಿನ ಸರ್ಕಾರ ರಾಜ್ಯದ ಖಜಾನೆ ಲೂಟಿ ಹೊಡೆದಿದೆ ಎಂದು ಹೇಳಿಕೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ವಿರುದ್ಧ ವಿಧಾನಸಭಾ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದು, ಇಂತಹ ಹೇಳಿಕೆ ನೀಡುವುದು ಸರಿಯಲ್ಲ, ಬಾಲಿಶ ಹೇಳಿಕೆಗಳನ್ನು ನೀಡಬಾರದು ಎಂದು ಹೇಳಿದರು.

ರಾಜ್ಯದ ಆರ್ಥಿಕತೆ ಕುರಿತು ಸರಿಯಾದ ಮಾಹಿತಿ ಇಲ್ಲದೆ ಮಾತನಾಡಬಾರದು. ಲೂಟಿ ಹೊಡೆದಿದೆ ಎಂದು ಹೇಳಿದರೆ ರಾಜ್ಯದ ಪರಿಸ್ಥಿತಿ ದಿವಾಳಿಯಾಗುತ್ತಿದೆ ಎಂಬ ತಪ್ಪು ಸಂದೇಶ ರವಾನೆಯಾಗಲಿದೆ. ಬಜೆಟ್‌ ಬಗ್ಗೆ ಜ್ಞಾನ ಇಲ್ಲದವರು, ಬಜೆಟ್‌ ಪರಿಸ್ಥಿತಿ ಗೊತ್ತಿಲ್ಲದವರು ಇಂತಹ ಹೇಳಿಕೆ ನೀಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಮುಂದಿನ ದಿನದಲ್ಲಿ ಇಂತಹ ಬಾಲಿಶ ಹೇಳಿಕೆ ನೀಡದಂತೆ ಕಟೀಲ್‌ ಅವರಿಗೆ ತಿಳಿಹೇಳಿ ಎಂದು ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದರು.

Follow Us:
Download App:
  • android
  • ios