ಬೆಂಗಳೂರು (ಮೇ.17):  ಕೊರೋನಾ ಪರೀಕ್ಷೆ ಹಾಗೂ ಸೋಂಕಿತರ ಸಾವಿನ ವಿಚಾರದಲ್ಲಿ ರಾಜ್ಯ ಸರ್ಕಾರ ಸುಳ್ಳು ಹೇಳುತ್ತಿದೆ. ಪರೀಕ್ಷೆ ಪ್ರಮಾಣವನ್ನು ಕೂಡಲೇ ಹೆಚ್ಚಿಸಿ ಕೊರೋನಾದಿಂದ ಆದ ಮರಣಗಳನ್ನು ನಿಖರವಾಗಿ ದಾಖಲಿಸಬೇಕು ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಭಾನುವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, 2019ಕ್ಕೆ ಹೋಲಿಸಿದರೆ 2020ರಲ್ಲಿ 4 ವಿವಿಧ ಕಾಯಿಲೆಗಳಿಂದಲೇ 93,812ಕ್ಕೂ ಹೆಚ್ಚುವರಿ ಸಾವು ದಾಖಲಾಗಿದೆ. ಇವೆಲ್ಲವೂ ಕೊರೋನಾ ಸಂಬಂಧಿತ ಸಾವುಗಳೇ ಆಗಿದ್ದು, ಸರ್ಕಾರ ಸಾವುಗಳನ್ನು ಮುಚ್ಚಿಡುವ ಬದಲು ನಿಖರವಾಗಿ ದಾಖಲಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.

ಸ್ವಕ್ಷೇತ್ರಕ್ಕೆ ಆಂಬುಲೆನ್ಸ್ ಪಿಪಿಇ ಕಿಟ್​, ಮಾಸ್ಕ್​ ಕಳುಹಿಸಿಕೊಟ್ಟ ಸಿದ್ದರಾಮಯ್ಯ

2019ಕ್ಕೆ ಹೋಲಿಸಿದರೆ 2020ರ ಡಿಸೆಂಬರ್‌ 31ರವರೆಗೆ ಹೃದಯಾಘಾತದಿಂದ 38,583, ವಯಸ್ಸಿನ ಕಾರಣಗಳಿಂದ 28,647, ಪ್ಯಾರಾಲಿಸಿಸ್‌ನಿಂದ 4,262 ಮಂದಿ ಹೆಚ್ಚಾಗಿ ಮರಣ ಹೊಂದಿದ್ದಾರೆ. ಆದರೆ, 2020ರ ಡಿಸೆಂಬರ್‌ವರೆಗೆ ಕೊರೋನಾದಿಂದ ಮರಣ ಹೊಂದಿರುವವರು 12,090 ಮಂದಿ ಮಾತ್ರ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಇದೇ ಸರ್ಕಾರದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯೇ ಕೊರೋನಾದಿಂದ 2020ರ ಡಿಸೆಂಬರ್‌ ವೇಳೆಗೆ 22,320 ಮಂದಿ ಸಾವನ್ನಪ್ಪಿರುವುದನ್ನು ದೃಢಪಡಿಸಿದೆ ಎಂದಿದ್ದಾರೆ.

ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಹೃದಯಾಘಾತದಿಂದ ಮರಣ ಹೊಂದುತ್ತಿರುವವರಲ್ಲಿ ಅರ್ಧಕ್ಕೂ ಹೆಚ್ಚು ಜನರಿಗೆ ಕೊರೋನಾ ಇರುವುದು ದೃಢಪಟ್ಟಿದೆ ಎಂದು ಇತ್ತೀಚೆಗೆ ಹೇಳಿದ್ದಾರೆ. ಇದೇ ಮಾತನ್ನೇ ನಾನು ಪದೇಪದೇ ಹೇಳುತ್ತಾ ಬಂದಿದ್ದೆ. ಸರ್ಕಾರ ನನ್ನ ಮಾತುಗಳಿಗೆ ಉತ್ತರಿಸುವ ಧೈರ್ಯ ಇದುವರೆಗೂ ಮಾಡಿಲ್ಲ ಎಂದು ಕಿಡಿಕಾರಿದ್ದಾರೆ.

ಸೋಂಕು ಕಡಿಮೆಯಾಗಿಲ್ಲ: ಮುಖ್ಯಮಂತ್ರಿಗಳೇ ತಜ್ಞರ ಪ್ರಕಾರ ವೈರಸ್‌ನ ಅಲೆ ಕಡಿಮೆಯಾಗಬೇಕಾದರೆ ಪಾಸಿಟಿವಿಟಿ ದರ ಶೇ.5ಕ್ಕಿಂತ ಕಡಿಮೆ ಬರಬೇಕು. ವಾಸ್ತವದಲ್ಲಿ ರಾಜ್ಯದ ಸೋಂಕಿನ ಪ್ರಮಾಣ ಕಡಿಮೆಯಾಗುವ ಬದಲು ಹೆಚ್ಚಾಗುತ್ತಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಬಳ್ಳಾರಿ, ಹಾಸನ, ಮೈಸೂರು, ಬೆಳಗಾವಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇ.50ಕ್ಕಿಂತ ಹೆಚ್ಚಿದೆ. ಉಳಿದ ಜಿಲ್ಲೆಗಳಲ್ಲೂ ಶೇ.35ರ ಆಸುಪಾಸಿನಲ್ಲಿದೆ. ಶೇ.20ಕ್ಕಿಂತ ಕಡಿಮೆ ಇರುವ ಜಿಲ್ಲೆಗಳು ಒಂದೆರಡು ಮಾತ್ರ ಇದೆ. ಹೀಗಿರುವಾಗ ಸೋಂಕು ಕಡಿಮೆಯಾಗಿದೆ ಎಂದು ಹೇಗೆ ಹೇಳುತ್ತಿದ್ದೀರಿ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona