ಕೊರೋನಾ ಟೆಸ್ಟ್ ಇಳಿಸಲು ಸರ್ಕಾರ ಮೌಖಿಕ ಸೂಚನೆ: ಎಂ.ಬಿ.ಪಾಟೀಲ್
* ಮಾಜಿ ಸಚಿವ ಎಂ.ಬಿ.ಪಾಟೀಲ್ ಗಂಭೀರ ಆರೋಪ
* ಪಿಎಚ್‌ಸಿಗಳಲ್ಲಿ 10 ಆರ್‌ಟಿ ಪಿಸಿಆರ್ ಟೆಸ್ಟ್‌ಗೆ ಸೂಚನೆ
* ಸರ್ಕಾರದಿಂದ ಜನತೆಯನ್ನು ಸಂಕಷ್ಟಕ್ಕೆ ದೂಡುವ ಪ್ರಯತ್ನ
ಬೆಂಗಳೂರು(ಮೇ.16): ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ, ಪರೀಕ್ಷೆಗಳನ್ನು ಕಡಿಮೆ ಮಾಡುವಂತೆ ಮೌಖಿಕ ಸೂಚನೆ ನೀಡಿರುವ ಸರ್ಕಾರ, ನಿಜವಾದ ಸೋಂಕಿತರ ಸಂಖ್ಯೆ ಮರೆಮಾಚಿ ಚಿಕಿತ್ಸೆ ಸೌಲಭ್ಯಗಳನ್ನು ಒದಗಿಸದೇ ವಂಚಿಸುವ ಮೂಲಕ ಅಮಾನವೀಯ ಕೃತ್ಯವೆಸಗುತ್ತಿದೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಆರೋಪಿಸಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಅತೀ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ ವಾರದಿಂದ ತಪಾಸಣೆಗಳನ್ನು ಕಡಿಮೆ ಮಾಡಲಾಗಿದೆ. ಇದರಿಂದ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತದೆ. ಇದೇ ಪ್ರಯೋಗವನ್ನು ರಾಜ್ಯಾದ್ಯಂತ ಮಾಡಲು ಸರ್ಕಾರ ಮುಂದಾಗಿದ್ದು, ಶನಿವಾರದಿಂದ ರಾಜ್ಯದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಕೇವಲ 10 ಆರ್‌ಟಿಪಿಸಿಆರ್ ಪರೀಕ್ಷೆಗಳಿಗೆ ಸೀಮಿತಗೊಳಿಸಿ ಮೌಖಿಕ ಆದೇಶ ಹೊರಡಿಸಿದೆ. ಆ ಮೂಲಕ ಸಂಖ್ಯೆ ಇಳಿಮುಖವಾಗಿದೆ ಎಂದು ಅಂಕಿ ಅಂಶಗಳ ತೋರಿಸಿ ಜನತೆಯ ಆರೋಗ್ಯ ಗಂಭೀರ ಸ್ಥಿತಿ ತಲುಪುವಂತೆ ಮಾಡಿದೆ ಎಂದು ಅವರು ದೂರಿದ್ದಾರೆ.
ಲಾಕ್‌ಡೌನ್ ವಿಸ್ತರಣೆ: ಸಚಿವ ಸದಾನಂದಗೌಡ ಪ್ರತಿಕ್ರಿಯೆ
ರಾಜ್ಯದ ಮಹಾನಗರಗಳು, ನಗರಗಳು ಮತ್ತು ಪಟ್ಟಣಗಳಲ್ಲಿ ಹೆಚ್ಚಾಗಿದ್ದ ಕೊರೋನಾ ಸೋಂಕಿತರ ಪ್ರಮಾಣ ಗ್ರಾಮಾಂತರ ಪ್ರದೇಶಕ್ಕೂ ವ್ಯಾಪಿಸಿದೆ. ಅತೀ ಕಡಿಮೆ ಜನಸಾಂದ್ರತೆ ಹೊಂದಿರುವ ಮಲೆನಾಡಿನ ಹಳ್ಳಿಗಳಲ್ಲಿಯೂ ಇದು ವ್ಯಾಪಕವಾಗಿ ಹಬ್ಬುತ್ತಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ಇದರ ಹರಡುವಿಕೆ ಭೀಕರತೆಯನ್ನು ಪ್ರದರ್ಶಿಸುತ್ತಿದೆ. ಇಂತಹ ಸ್ಥಿತಿಯಲ್ಲಿ ಸರ್ಕಾರ ಹೆಚ್ಚು ಪರೀಕ್ಷೆಗಳನ್ನು ಮಾಡಿ, ಅಗತ್ಯವಿರುವ ರೋಗಿಗಳಿಗೆ ಚಿಕಿತ್ಸೆ ಸೌಲಭ್ಯ, ಔಷಧಿ ಒದಗಿಸಲು ಮುಂದಾಗಬೇಕು. ಬದಲಿಗೆ ವಾಮ ಮಾರ್ಗದ ಮೂಲಕ ರೋಗಿಗಳ ಸಂಖ್ಯೆ ಇಳಿಕೆಯಾಗಿದೆ ಎಂದು ಬಿಂಬಿಸುವ ಮೂಲಕ ಜನತೆಯನ್ನು ಸಂಕಷ್ಟಕ್ಕೆ ದೂಡುವ ಪ್ರಯತ್ನ ಮಾಡುತ್ತಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona