ಬೆಂಗಳೂರು (ನ.24):  ಅವಕಾಶವಿದ್ದರೂ ಬದುಕಲು ಆಗದಂತಹ ಸಮಾಜದಲ್ಲಿ ಹುಟ್ಟಿದ್ದೇವೆ. ದಲಿತರದ್ದು ಜೀವ ಇದ್ದರೂ ಸತ್ತಂತೆ ಜೀವನ ಮಾಡಬೇಕಾದ ದುರ್ಬಲ ಸಮುದಾಯವಾಗಿದೆ ಎಂದು ಮಾಜಿ ಸಚಿವ ಎಚ್‌. ಆಂಜನೇಯ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಸೋಮವಾರ ನಗರದ ಕುಮಾರಪಾರ್ಕ್ ಪೂರ್ವದಲ್ಲಿರುವ ಗಾಂಧಿ ಭವನದ ಕಸ್ತೂರಬಾ ಸಭಾಂಗಣದಲ್ಲಿ ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟ ಮತ್ತು ಪ್ರೊ.ಬಿ.ಕೃಷ್ಣಪ್ಪ ಟ್ರಸ್ಟ್‌ ಆಯೋಜಿಸಿದ್ದ ‘ದಲಿತ ನಾಯಕ ದಿವಂಗತ ಎಂ.ಜಯಣ್ಣ’ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇನ್ನೂ ದಲಿತ ಸಮುದಾಯ ಜೀತ, ಅಸ್ಪೃಶ್ಯತೆ, ಸಾಮಾಜಿಕ ಬಹಿಷ್ಕಾರದಂತ ದೌರ್ಜನ್ಯಗಳಿಂದ ನರಳುತ್ತಿದೆ. ಇಂದಿಗೂ ದಲಿತರು, ಶೋಷಿತರು, ಅವಮಾನ, ಅಪಮಾನವನ್ನು ಅನುಭವಿಸುವಂತಾಗಿದೆ ಎಂದರು.

‘ಅಂಬೇಡ್ಕರ್‌ ಅವರ ಆಶಯದಂತೆ ಬಡ ವರ್ಗದವರಿಗೆ ನ್ಯಾಯ, ಹಕ್ಕು ಕೊಡಿಸಲು ಹೋರಾಟ ನಡೆಸುವವರು ಪೂರ್ಣಾವಧಿ ಆಯಸ್ಸು ಬದುಕಲಿಲ್ಲ. ದಲಿತರ, ಶೋಷಿತರ ಮತ್ತು ಮಹಿಳೆಯರ ಉದ್ಧಾರಕ್ಕಾಗಿ ಜೀವನದುದ್ದಕ್ಕೂ ಶ್ರಮಿಸಿದ ಡಾ.ಅಂಬೇಡ್ಕರ್‌ ಅವರು ಕೂಡ ಹೆಚ್ಚು ವರ್ಷ ಜೀವಿಸಲಿಲ್ಲ. ಬಹುಶಃ ಅವರು ಹೆಚ್ಚು ವರ್ಷ ಬದುಕಿದ್ದರೆ ದಲಿತರ, ಶೋಷಿತರ ಇಂದಿನ ಜೀವನ ಚಿತ್ರಣವೇ ಬದಲಾಗುತ್ತಿತ್ತು’ ಎಂದು ಅಭಿಪ್ರಾಯಪಟ್ಟರು.

ಸಚಿವ ಪ್ರಭು ಚವ್ಹಾಣ್ ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಆಯ್ಕೆ: ಗಂಭೀರ ಆರೋಪ

‘ಅದೇ ರೀತಿ ರೈತ, ದಲಿತ ಹಾಗೂ ಕೂಲಿ ಕಾರ್ಮಿಕರ ನಾಯಕನಾಗಿದ್ದ ಜಯಣ್ಣ ಅವರು ಸರಳ ಸಜ್ಜನಿಕೆಯ ವಕ್ತಿ. ಜೀವನದುದ್ದಕ್ಕೂ ಹೋರಾಟ ಮಾಡಿದ ಅವರನ್ನು ಸ್ಮರಿಸಲು ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ ಎರಡು ಎಕರೆ ಜಾಗದಲ್ಲಿ ಸ್ಮಾರಕ ನಿರ್ಮಿಸಲಾಗುವುದು. ಜತೆಗೆ ಅವರ ಕುಟುಂಬದವರು ಗೌರವಯುತ ಜೀವನ ಸಾಗಿಸಲು ಅನುಕೂಲವಾಗುವಂತೆ ಆ ಜಾಗದಲ್ಲಿ ಕೃಷಿಗೆ ಅವಕಾಶ ಕಲ್ಪಿಸಿಕೊಡುವ ಉದ್ದೇಶವಿದೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಎಚ್‌.ಹನುಮಂತಯ್ಯ, ಪ್ರೊ.ಬಿ.ಕೃಷ್ಣಪ್ಪ ಟ್ರಸ್ಟಿನ ವ್ಯವಸ್ಥಾಪಕ ಟ್ರಸ್ಟಿಇಂದಿರಾ ಕೃಷ್ಣಪ್ಪ, ಟ್ರಸ್ಟಿರುದ್ರಪ್ಪ ಹನಗವಾಡಿ, ದಸಂಸ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್‌, ರಾಜ್ಯ ಸಂಚಾಲಕರಾದ ಲಕ್ಷ್ಮೇನಾರಾಯಣ ನಾಗವಾರ, ಮೋಹನ್‌ರಾಜ್‌, ಕಲಾವಿದ ಸಿ.ಚಂದ್ರಶೇಖರ್‌, ದಸಂಸ ಸಂಯೋಜಕ ವಿ.ನಾಗರಾಜ್‌, ಗುರುಪ್ರಸಾದ್‌ ಕೆರಗೋಡು ಉಪಸ್ಥಿತರಿದ್ದರು.