ಬೆಂಗಳೂರು : ಶಾಸಕ ಆನಂದ್ ಸಿಂಗ್  ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಕಾಂಗ್ರೆಸ್ ಶಾಸಕಗೆ ಬಂಧನದ ಭೀತಿ ಎದುರಾಗಿದೆ.  ಕಂಪ್ಲಿ ಶಾಸಕ ಗಣೇಶ್ ಗೆ ಬಂಧನದ ಭೀತಿ ಎದುರಾಗಿದ್ದು,  ಬಿಡದಿ ಪೊಲೀಸರು ಕೊಲೆ ಯತ್ನದಡಿ ಕೇಸ್ ದಾಖಲಾಗುತ್ತಿದ್ದಂತೆ ಆರೋಪಿ ಗಣೇಶ್ ಕಣ್ಮರೆಯಾಗಿದ್ದಾರೆ. 

ಆಪರೇಷನ್ ಕಮಲದ ಭೀತಿಯ ಹಿನ್ನೆಲೆಯಲ್ಲಿ ಈಗಲ್‌ಟನ್ ರೆಸಾರ್ಟ್‌ಗೆ ತೆರಳಿದ್ದ ವೇಳೆ ಮದ್ಯದ ಅಮಲಿನಲ್ಲಿ ಆಡಳಿತಾರೂಢ ಕಾಂಗ್ರೆಸ್ಸಿನ ಶಾಸಕರಿಬ್ಬರು ಹೊಡೆದಾಡಿಕೊಂಡ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದ್ದು, ಕಂಪ್ಲಿ ಕ್ಷೇತ್ರದ ಶಾಸಕ ಜೆ.ಎನ್.ಗಣೇಶ್ ವಿರುದ್ಧ ಬಿಡದಿ ಠಾಣೆಯಲ್ಲಿ ಸೋಮವಾರ ಎಫ್ ಐಆರ್ ದಾಖಲಾಗಿದೆ.

ಹಲ್ಲೆಗೊಳಗಾದ ಬಳ್ಳಾರಿ ಜಿಲ್ಲೆ ವಿಜಯನಗರ ಕ್ಷೇತ್ರದ ಶಾಸಕ ಆನಂದ್‌ಸಿಂಗ್ ಅವರು ಕೊಟ್ಟ ದೂರಿನ ಮೇರೆಗೆ ಗಣೇಶ್ ವಿರುದ್ಧ ಕೊಲೆ ಯತ್ನ (ಸೆ.೩೦೭), ಜೀವ ಬೆದರಿಕೆ ಹಾಗೂ ನಿಂದನೆ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗಿದೆ ಎಂದು ಬಿಡದಿ ಪೊಲೀಸರು ಹೇಳಿದ್ದಾರೆ.
 
ಈ ನಡುವೆ, ಶಾಸಕ ಆನಂದ್ ಸಿಂಗ್ ಆರೋಗ್ಯವಾಗಿ ಇದ್ದಾರೆ. ರಾತ್ರಿ ಅವರನ್ನು ನೋಡಿಕೊಂಡು ಬಂದಿದ್ದೇನೆ. ಆನಂದ್ ಸಿಂಗ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಶಾಸಕರಾದ ಗಣೇಶ್, ಭೀಮಾನಾಯಕ್ ಮತ್ತು ಆನಂದ್ ಸಿಂಗ್‌ರಿಂದ ಹೇಳಿಕೆಗಳನ್ನು ಪಡೆದಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಬಿಡದಿಯಲ್ಲಿ ಹೇಳಿದ್ದಾರೆ.