Asianet Suvarna News Asianet Suvarna News

ಲೋಕಸಭೆ ಚುನಾವಣೆಗೆ ಬಿಲ್ಡರ್‌ಗಳಿಂದ 2000 ಕೋಟಿ ವಸೂಲಿಗೆ ಸರ್ಕಾರ ಟಾರ್ಗೆಟ್‌: ಎಚ್‌ಡಿಕೆ

ರಾಜ್ಯದ ಕಾಂಗ್ರೆಸ್‌ ಸರ್ಕಾರ ಗುತ್ತಿಗೆದಾರರಿಂದ ಹಣ ವಸೂಲಿ ಮಾಡುತ್ತಿದೆ ಎಂದು ಆರೋಪಿಸಿದ್ದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಇದೀಗ ರಿಯಲ್‌ ಎಸ್ಟೇಟ್‌ ಬಿಲ್ಡರ್‌ಗಳಿಂದ ಎರಡು ಸಾವಿರ ಕೋಟಿ ರು. ಸುಲಿಗೆ ಮಾಡಲು ಸರ್ಕಾರ ಮುಂದಾಗಿದೆ ಎಂದು ಹೊಸ ಬಾಂಬ್‌ ಸಿಡಿಸಿದ್ದಾರೆ.

Congress govt targets to collect Rs 2000 crore from real estate builders for Lok Sabha elections says HDK rav
Author
First Published Sep 11, 2023, 5:22 AM IST

ಬೆಂಗಳೂರು (ಸೆ.11) :  ರಾಜ್ಯದ ಕಾಂಗ್ರೆಸ್‌ ಸರ್ಕಾರ ಗುತ್ತಿಗೆದಾರರಿಂದ ಹಣ ವಸೂಲಿ ಮಾಡುತ್ತಿದೆ ಎಂದು ಆರೋಪಿಸಿದ್ದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಇದೀಗ ರಿಯಲ್‌ ಎಸ್ಟೇಟ್‌ ಬಿಲ್ಡರ್‌ಗಳಿಂದ ಎರಡು ಸಾವಿರ ಕೋಟಿ ರು. ಸುಲಿಗೆ ಮಾಡಲು ಸರ್ಕಾರ ಮುಂದಾಗಿದೆ ಎಂದು ಹೊಸ ಬಾಂಬ್‌ ಸಿಡಿಸಿದ್ದಾರೆ.

ಭಾನುವಾರ ನಗರದ ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್‌ನ ಬೃಹತ್‌ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಮುಂಬರುವ ಲೋಕಸಭೆ ಚುನಾವಣೆ ನೆಪವಾಗಿಟ್ಟುಕೊಂಡು ಕೆಲವು ಪ್ರಭಾವಿಗಳು ದೊಡ್ಡ ಬಿಲ್ಡರ್‌ಗಳ ಸಭೆ ನಡೆಸಿದ್ದಾರೆ. ಈ ವೇಳೆ ಇಷ್ಟಿಷ್ಟುಕಪ್ಪ ಒಪ್ಪಿಸಲೇಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. ಬಿಲ್ಡರ್‌ಗಳಿಂದ ಪ್ರತಿ ಚದರ ಅಡಿಗೆ 100 ರು. ಲೆಕ್ಕದಲ್ಲಿ ವಸೂಲಿ ಮಾಡಲು ಮುಂದಾಗಿದ್ದಾರೆ. ಈ ಮೂಲಕ ಎರಡು ಸಾವಿರ ಕೋಟಿ ರು. ಸಂಗ್ರಹಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಆಪಾದಿಸಿದರು.

ಕುಟುಂಬದ ಆರೋಗ್ಯಕ್ಕಾಗಿ ತಿರುಮಲಗಿರಿ ವೆಂಕಟೇಶ್ವರಸ್ವಾಮಿ ದೇವಸ್ಥಾನದಲ್ಲಿ ಎಚ್‌ಡಿಕೆ 2 ತಾಸು ಹೋಮ

ಎಲ್ಲ ಇಲಾಖೆಗಳಲ್ಲಿಯೂ ಲೂಟಿಗೆ ಟಾರ್ಗೆಟ್‌ ನಿಗದಿ ಮಾಡಿಕೊಂಡಿರುವ ಕಾಂಗ್ರೆಸ್‌ ಸರ್ಕಾರ ಇಂಧನ ಇಲಾಖೆಯಲ್ಲಂತೂ ಮೇಯಲು ಮುಂದಾಗಿದೆ. ವಿದ್ಯುತ್‌ ಖರೀದಿಗೆ ಮುಂದಾಗಿದ್ದು, ವಿದ್ಯುತ್‌ ಖರೀದಿ ಎಂದರೆ ಇವರಿಗೆ ಹಬ್ಬವಾಗಿದೆ. ಖರೀದಿ ಮಾಡಿದಷ್ಟೂಕಿಕ್‌ಬ್ಯಾಕ್‌ ಜಾಸ್ತಿ. ಪ್ರತಿ ತಿಂಗಳು 1,500 ಕೋಟಿ ರು. ಖರ್ಚು ಮಾಡುವುದಕ್ಕೆ ಹೊರಟಿದ್ದಾರೆ. ರಾಜ್ಯದಲ್ಲಿ ಅನಧಿಕೃತವಾಗಿ ಲೋಡ್‌ ಶೆಡ್ಡಿಂಗ್‌ ಮಾಡುತ್ತಿದ್ದು, ರೈತರಿಗೆ ಸಮರ್ಪಕವಾದ ಕರೆಂಟ್‌ ನೀಡುತ್ತಿಲ್ಲ. ಈಗ ದೀಪಾವಳಿಗೆ ಮನೆಮನೆಗೂ ಮಣ್ಣಿನ ದೀಪ ನೀಡಲು ಸರ್ಕಾರ ಹೊರಟಿದೆ. 200 ಯೂನಿಟ್‌ ವಿದ್ಯುತ್‌ ಉಚಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು. ಈಗ ಸರಾಸರಿ ಎಂದು ಹೇಳಿಕೊಂಡು ಜನತೆಗೆ ಮೋಸ ಮಾಡುತ್ತಿದ್ದಾರೆ. ಆದರೂ ನುಡಿದಂತೆ ನಡೆದಿದ್ದೇವೆ ಎಂದು ಕಾಂಗ್ರೆಸ್‌ನ ಘೋಷವಾಕ್ಯವನ್ನು ವ್ಯಂಗ್ಯವಾಡಿದರು.

ಮೈತ್ರಿ ಸರ್ಕಾರದ ವೇಳೆ ಡಿ.ಕೆ.ಶಿವಕುಮಾರ್‌ ಅವರು ನನ್ನ ಜತೆಯಲ್ಲಿದ್ದು, ನನ್ನ ಕೈಯನ್ನು ಮೇಲೆ ಎತ್ತಿದ್ದರು. ನಮ್ಮಿಬ್ಬರನ್ನು ಜೋಡೆತ್ತು ಎಂದು ಕರೆದರು. ಲೋಕಸಭೆ ಚುನಾವಣೆಯಲ್ಲಿ ನನ್ನ ಕೈ ಎತ್ತಿ ಎತ್ತಿನಗಾಡಿ, ಎತ್ತುಗಳನ್ನು ಹೈಜಾಕ್‌ ಮಾಡಿಕೊಂಡು ಹೋದರು. ನನ್ನನ್ನು ನಡುರಸ್ತೆಯಲ್ಲಿ ಬಿಟ್ಟು ಹೋದರು. ನಾನು ಅವರಿಗೆ ಮರುಳಾದೆ. ಅವರು ಬದಲಾಗಿರಬಹುದು ಎಂದು ನಂಬಿ ಮೋಸ ಹೋದೆ. ಈಗ ಸಿದ್ದರಾಮಯ್ಯ ಅವರ ಕೈ ಮೇಲೆತ್ತಿ ದಿನವೂ ಪೋಸು ನೀಡುತ್ತಿದ್ದಾರೆ. ಅದೆಷ್ಟುದಿನ ಎಂಬುದನ್ನು ನೋಡೋಣ ಎಂದು ವಾಗ್ದಾಳಿ ನಡೆಸಿದರು.

ನೈಸ್‌ ಅಕ್ರಮ, ಭೂಮಿ ಗುಳುಂ:

ಬೆಂಗಳೂರು-ಮೈಸೂರು ಇನ್ಫ್ರಾಸ್ಟ್ರಕ್ಚರ್‌ ಕಾರಿಡಾರ್‌ ಯೋಜನೆಯಲ್ಲಿ (ನೈಸ್‌ ಯೋಜನೆ) ಬಹುದೊಡ್ಡ ಹಗರಣವಾಗಿದೆ. ಸುಮಾರು 2-3 ಲಕ್ಷ ಕೋಟಿ ರು. ಮೌಲ್ಯದ ಭೂಮಿಯನ್ನು ಪಟ್ಟಭದ್ರರು ನುಂಗಿದ್ದಾರೆ. ಮುಖ್ಯಮಂತ್ರಿಗಳು ದಮ್‌, ತಾಕತ್‌ ಬಗ್ಗೆ ಮಾತನಾಡುತ್ತಾರೆ. ಅವರಿಗೆ ದಮ್‌, ತಾಕತ್‌ ಇದ್ದರೆ ರೈತರಿಂದ ಕಸಿದುಕೊಂಡಿರುವ ಭೂಮಿಯನ್ನು ವಾಪಸ್‌ ಪಡೆದು ರೈತರಿಗೆ ಮರು ಹಸ್ತಾಂತರ ಮಾಡಬೇಕು. ನೈಸ್‌ ಭೂಮಿ ಕರ್ಮಕಾಂಡದಲ್ಲಿ ಸರ್ಕಾರದ ಪ್ರಭಾವಿ ಸಚಿವರೊಬ್ಬರು ನೇರವಾಗಿ ಶಾಮೀಲಾಗಿದ್ದಾರೆ. ಪೆನ್ನು-ಪೇಪರ್‌ ನನಗೂ ಒಮ್ಮೆ ಕೊಡಿ ಎಂದು ಜನತೆಗೆ ದುಂಬಾಲು ಬಿದ್ದಿದ್ದ ಅವರು ಪೆನ್ನು, ಪೇಪರ್‌ ಸಿಕ್ಕಿದ ಮೇಲೆ ಜನರ ಸಂಪತ್ತನ್ನು ಎಗ್ಗಿಲ್ಲದೆ ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.

ಬಿಜೆಪಿ ಜೊತೆ ಜೆಡಿಎಸ್‌ ಮೈತ್ರಿ: ಎಚ್‌ಡಿ ದೇವೇಗೌಡ, ಕುಮಾರಸ್ವಾಮಿ ಅಧಿಕೃತ ಹೇಳಿಕೆ

ರೈತರಿಂದ ನೈಸ್‌ ಯೋಜನೆಗೆ 14 ಸಾವಿರ ಎಕರೆ ಭೂಮಿಯನ್ನು ಹೆಚ್ಚುವರಿಯಾಗಿ ಸ್ವಾಧೀನಕ್ಕೆ ಪಡೆದುಕೊಂಡಿದ್ದಾರೆ. ಅದನ್ನು ಕೂಡಲೇ ವಾಪಸ್‌ ಪಡೆಯಬೇಕು. ಸಿದ್ದರಾಮಯ್ಯ ಅವರೇ ಎರಡನೇ ಬಾರಿಗೆ ಸಿಎಂ ಆಗಿದ್ದಾರೆ. ಪೂರ್ಣ ಬಹುಮತವೂ ಇದೆ. ರೈತರ ಬಗ್ಗೆ ಕಾಳಜಿ ಇದ್ದರೆ ಅವರನ್ನು ಉಳಿಸಬೇಕಲ್ಲವೇ? ಹಾಗಿದ್ದರೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Follow Us:
Download App:
  • android
  • ios