ಬೆಂಗಳೂರು (ಜು. 14): ಕೊರೋನಾ ಪರಿಸ್ಥಿತಿ ನಿಭಾಯಿಸಲು ಸರ್ಕಾರ ವಿಫಲವಾಗಿರುವುದರಿಂದ ಜನರಲ್ಲಿ ಆತಂಕ ಹಾಗೂ ಗೊಂದಲ ಹೆಚ್ಚಾಗಿದೆ. ಹೀಗಾಗಿ ಅವರು ಬೆಂಗಳೂರು ತೊರೆದು ಹಳ್ಳಿಗಳತ್ತ ವಲಸೆ ಹೋಗುತ್ತಿದ್ದಾರೆ. ಇದರಿಂದಾಗಿ ಹಳ್ಳಿಗಳ ನಾಗರಿಕರು ಆತಂಕಪಡುವಂತಾಗಿದೆ. ಈ ಅರಾಜಕತೆಗೆ ಸರ್ಕಾರದ ವೈಫಲ್ಯಗಳೇ ಕಾರಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆರೋಪಿಸಿದ್ದಾರೆ.

ಆದರೆ, ಇಂತಹ ಸಂದರ್ಭದಲ್ಲಿ ಕಾಂಗ್ರೆಸ್‌ ರಾಜಕೀಯಕ್ಕಿಂತ ಜನಪರ ಕೆಲಸಗಳಿಗೆ ಆದ್ಯತೆ ನೀಡುತ್ತದೆ. ಹೀಗಾಗಿ ಪಕ್ಷದ ಕಾರ್ಯಕರ್ತರನ್ನು ಲಾಕ್‌ಡೌನ್‌ ಅವಧಿಯಲ್ಲಿ ಕೊರೋನಾ ನಿಯಂತ್ರಣ ಹಾಗೂ ಸಾರ್ವಜನಿಕರ ಸೇವೆಗೆ ಸ್ವಯಂ ಸೇವಕರಾಗಿ ಕೆಲಸ ಮಾಡಲು ತಯಾರಿದ್ದು, ಅವರನ್ನು ನೇಮಿಸಿಕೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದೇನೆ ಎಂದು ತಿಳಿಸಿದರು.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಮತ್ತು ಲಾಕ್‌ಡೌನ್‌ ಮಾಡುತ್ತಿರುವ ವಿಚಾರದ ಬಗ್ಗೆ ನಾವು ಮಾತನಾಡುವುದಿಲ್ಲ. ಅವರ ಆಡಳಿತ ಕಾರ್ಯದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಕೊರೋನಾ ಪಿಡುಗನ್ನು ಪಕ್ಷಾತೀತವಾಗಿ ಎದುರಿಸಬೇಕು ಎಂದು ನಾವು ಹೇಳುತ್ತಲೇ ಬಂದಿದ್ದೇವೆ. ಆದರೆ ಬಿಜೆಪಿಯವರು ಈ ವಿಚಾರದಲ್ಲೂ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ರೋಗಿ ದಾಖಲಿಸಿಕೊಳ್ಳದಿದ್ರೆ ಕ್ರಿಮಿನಲ್ ಕೇಸ್: ಸುಧಾಕರ್ ಎಚ್ಚರಿಕೆ!

ಗೊಂದಲದ ಗೂಡಾದ ಕೊರೋನಾ ನಿರ್ವಹಣೆ:

ಸರ್ಕಾರದಲ್ಲಿ ಅನೇಕ ಗೊಂದಲಗಳಿವೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಯಾರನ್ನೂ ನಂಬುವ ಪರಿಸ್ಥಿತಿಯಲ್ಲಿ ಇಲ್ಲ. ಮೊದಲು ಆರೋಗ್ಯ ಸಚಿವರು, ನಂತರ ವೈದ್ಯಕೀಯ ಶಿಕ್ಷಣ ಸಚಿವರು, ನಂತರ ಶಿಕ್ಷಣ ಸಚಿವರನ್ನು ಉಸ್ತುವಾರಿಯಾಗಿ ನೇಮಿಸಿದರು. ಬಳಿಕ ಬೆಂಗಳೂರಿನಲ್ಲೇ ನಾಲ್ಕೈದು ಮಂದಿಗೆ ಹೊಣೆ ನೀಡಿದ್ದಾರೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು ಸಹ ಈಗ ಸಚಿವರ ಕೆಲಸ ಮಾಡುವಂತಾಗಿದೆ. ಅಧಿಕಾರಿಗಳನ್ನೂ ನಂಬುವ ಪರಿಸ್ಥಿತಿಯಲ್ಲಿ ಇಲ್ಲ. ಸರ್ಕಾರ ಗೊಂದಲ ಹಾಗೂ ವೈಫಲ್ಯದ ಗೂಡಾಗಿದೆ. ಇದರಿಂದಾಗಿ ಜನರು ಬೇಸತ್ತು ತಮ್ಮ ಊರುಗಳಿಗೆ ಹೋಗುತ್ತಿದ್ದಾರೆ ಎಂದು ಟೀಕಿಸಿದರು.

ಹಿರಿಯ ನಾಯಕರ ಸಭೆಗೆ ಕಾಂಗ್ರೆಸ್‌ನ ಹಿರಿಯರೆಲ್ಲ ಗೈರು!

ಕೊರೋನಾ ಪರಿಸ್ಥಿತಿ ಹಾಗೂ ಸರ್ಕಾರದ ವೈಫಲ್ಯದ ಬಗ್ಗೆ ಚರ್ಚಿಸಲು ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಕರೆಯಲಾಗಿದ್ದ ಸಭೆಗೆ ಬಹುತೇಕ ಎಲ್ಲ ಹಿರಿಯ ನಾಯಕರು ಗೈರು ಹಾಜರಾಗಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಕರೆದಿದ್ದ ಈ ಸಭೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಹಿರಿಯ ನಾಯಕರಾದ ಎಸ್‌.ಆರ್‌. ಪಾಟೀಲ್‌, ಎಚ್‌.ಕೆ. ಪಾಟೀಲ್‌, ಡಾ.ಜಿ. ಪರಮೇಶ್ವರ್‌, ಆರ್‌.ವಿ. ದೇಶಪಾಂಡೆ, ಕೆ.ಆರ್‌. ರಮೇಶ್‌ಕುಮಾರ್‌, ರಾಮಲಿಂಗಾರೆಡ್ಡಿ ಸೇರಿದಂತೆ ಬಹುತೇಕರು ಗೈರು ಹಾಜರಾಗಿದ್ದರು.