Asianet Suvarna News Asianet Suvarna News

ಕಾಂಗ್ರೆಸ್‌ಗೆ ರಾಮ ಮಂದಿರ ಭೀತಿ ಶುರುವಾಗಿದೆ: ವಿಪಕ್ಷ ನಾಯಕ ಆರ್‌.ಅಶೋಕ್‌

ಕಾಂಗ್ರೆಸ್‌ಗೆ ರಾಮ ಮಂದಿರ ಭೀತಿ ಕಾಡುತ್ತಿದ್ದು, ಅದಕ್ಕಾಗಿ ಹಿಂದುಗಳ ಮೇಲಿನ ಹಳೆ ಕೇಸ್‌ಗಳನ್ನು ತೆರೆಯುವ ಮೂಲಕ ಹಿಂದು-ಮುಸ್ಲಿಂ ನಡುವೆ ಒಡೆದು ಆಳುವ ನೀತಿ ಅನುಸರಿಸುತ್ತಿದೆ ಎಂದು ವಿಧಾನಸಭಾ ವಿಪಕ್ಷ ನಾಯಕ ಆರ್‌.ಅಶೋಕ್‌ ಆರೋಪಿಸಿದ್ದಾರೆ.

Congres panics by Ayodhya Ram Mandir Inauguration Program says R ashok at mangaluru rav
Author
First Published Jan 8, 2024, 5:07 AM IST

ಮಂಗಳೂರು (ಜ.8) : ಕಾಂಗ್ರೆಸ್‌ಗೆ ರಾಮ ಮಂದಿರ ಭೀತಿ ಕಾಡುತ್ತಿದ್ದು, ಅದಕ್ಕಾಗಿ ಹಿಂದುಗಳ ಮೇಲಿನ ಹಳೆ ಕೇಸ್‌ಗಳನ್ನು ತೆರೆಯುವ ಮೂಲಕ ಹಿಂದು-ಮುಸ್ಲಿಂ ನಡುವೆ ಒಡೆದು ಆಳುವ ನೀತಿ ಅನುಸರಿಸುತ್ತಿದೆ ಎಂದು ವಿಧಾನಸಭಾ ವಿಪಕ್ಷ ನಾಯಕ ಆರ್‌.ಅಶೋಕ್‌ ಆರೋಪಿಸಿದ್ದಾರೆ.

ಭಾನುವಾರ ಮಂಗಳೂರಿನ ಜಿಲ್ಲಾ ಬಿಜೆಪಿ ಚುನಾವಣಾ ಕಚೇರಿಗೆ ಭೇಟಿ ನೀಡಿದ ವೇಳೆ ಅವರು ಸುದ್ದಿಗಾರರಲ್ಲಿ ಮಾತನಾಡಿದರು.

ರಾಜ್ಯ ಕಾಂಗ್ರೆಸ್‌ ಸರ್ಕಾರ ಈಗ ಏಕಾಏಕಿ ಹಿಂದುಗಳ ವಿರುದ್ಧ ದಮನ ನೀತಿ ಅನುಸರಿಸುತ್ತಿದೆ. ಹಳೆಯ ಕರಸೇವಕರ ಕೇಸನ್ನು ಮತ್ತೆ ತೆರೆಯುವ ಮೂಲಕ ರಾಜ್ಯಾದ್ಯಂತ ಭೀತಿಯ ವಾತಾವರಣ ನಿರ್ಮಿಸುತ್ತಿದೆ. ಕಾಂಗ್ರೆಸ್‌ನ ಇಂಥ ಗೊಡ್ಡು ಬೆದರಿಕೆಗೆ ಬಿಜೆಪಿ ಜಗ್ಗುವುದಿಲ್ಲ. ಹಿಂದೆ ತುರ್ತು ಪರಿಸ್ಥಿತಿಯಲ್ಲಿ ಜೈಲಿಗೆ ಹೋದ ಕಾರ್ಯಕರ್ತರು ಈಗಲೂ ಎದೆಗುಂದದೆ ಈ ಕೇಸುಗಳನ್ನು ಎದುರಿಸಲು ಶಕ್ತರಿದ್ದಾರೆ ಎಂದರು.

ಹರಿಪ್ರಸಾದ್‌ಗೆ ಕಾಮನ್‌ಸೆನ್ಸ್‌ ಇಲ್ಲ:

ಕಾಂಗ್ರೆಸ್‌ನ ಹಿರಿಯ ಮುಖಂಡ ಎನಿಸಿದ ಬಿ.ಕೆ.ಹರಿಪ್ರಸಾದ್‌ಗೆ ಕಾಮನ್‌ಸೆನ್ಸ್ ಇಲ್ಲ. ರಾಮ ಮಂದಿರ ಉದ್ಘಾಟನೆ ವೇಳೆ ಗೋದ್ರಾ ಮಾದರಿ ಗಲಭೆ ನಡೆಯುತ್ತದೆ ಎನ್ನುತ್ತಿದ್ದಾರೆ. ಆ ಬಗ್ಗೆ ದಾಖಲೆ ಇದೆ ಎನ್ನುವ ಅವರು ಅದನ್ನು ತನಿಖಾಧಿಕಾರಿಗೆ ಸಲ್ಲಿಸಲಿ, ಅದು ಬಿಟ್ಟು ಬೇಕಾಬಿಟ್ಟಿ ಮಾತನಾಡುವ ಅವರ ವಿರುದ್ಧವೇ ಕೇಸು ದಾಖಲಿಸಿ ಅವರನ್ನು ಸಮಗ್ರ ತನಿಖೆಗೆ ಸರ್ಕಾರ ಒಳಪಡಿಸಬೇಕು ಎಂದು ಅಶೋಕ್‌ ಆಗ್ರಹಿಸಿದರು.

ಓಲೈಕೆ ರಾಜಕಾರಣ:

ಮಂದಿರ ಉದ್ಘಾಟಿಸುವುದು ಕಾಂಗ್ರೆಸ್‌ಗೆ ಇಷ್ಟ ಇಲ್ಲ. ಈ ಹಿಂದೆ ರಾಮನ ಜನ್ಮ ದಿನಾಂಕ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಅಫಿದವಿತ್‌ ಕೇಳಿದ ಕಾಂಗ್ರೆಸಿಗರಿಗೆ ಈಗ ರಾಮ ಮಂದಿರದ ಭಯ ಕಾಡತೊಡಗಿದೆ. ಸಿಎಂ ಸಿದ್ದರಾಮಯ್ಯ ಅವರು ಮಂದಿರ ನಿರ್ಮಾಣಕ್ಕೆ ದೇಣಿಗೆ ಕೊಡುವುದಿಲ್ಲ ಎಂದು ಬಹಿರಂಗವಾಗಿಯೇ ಹೇಳಿದ್ದರು. ಅವರ ಪುತ್ರ ಯತೀಂದ್ರ, ಬಿ.ಕೆ.ಹರಿಪ್ರಸಾದ್‌ ಕೂಡ ಏನೇನೋ ಮಾತನಾಡುತ್ತಿದ್ದಾರೆ. ಡಿಸಿಎಂ ಡಿಕೆಶಿ ಕೂಡ ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆಕೋರರ ವಿರುದ್ಧದ ಕೇಸು ವಾಪಸ್‌ ವಿಚಾರ ಹೇಳುತ್ತಿದ್ದಾರೆ. ಈ ಮೂಲಕ ಮುಸ್ಲಿಮರ ಓಲೈಕೆ ರಾಜಕಾರಣ ನಡೆಸುತ್ತಿದ್ದಾರೆ ಎಂದು ಅಶೋಕ್‌ ಟೀಕಿಸಿದರು.

ರಾಮಮಂದಿರ ಉದ್ಘಾಟನೆಗೆ ಯಾರಿಗೆ ಆಹ್ವಾನ ನೀಡಬೇಕು ಎಂಬುದನ್ನು ತೀರ್ಥ ಕ್ಷೇತ್ರ ಟ್ರಸ್ಟ್‌ನವರು ತೀರ್ಮಾನಿಸುತ್ತಾರೆ. ಮುಖ್ಯಮಂತ್ರಿಗೆ ಆಹ್ವಾನ ನೀಡಿಲ್ಲ, ಇನ್ನು ಡಿಸಿಎಂಗೆ ಯಾಕೆ ಆಹ್ವಾನ ನೀಡುತ್ತಾರೆ, ಈ ಪರಿಜ್ಞಾನ ಇಲ್ಲದೆ ಡಿಕೆಶಿ ಬೇಕಾಬಿಟ್ಟಿ ಮಾತನಾಡಬಾರದು ಎಂದರು.

ತಮ್ಮ ಸರ್ಕಾರ ಇದ್ದಾಗ ಬೊಮ್ಮಾಯಿ, ಅಶೋಕ ಏನ್ಮಾಡ್ತಿದ್ರು?: ಪ್ರಿಯಾಂಕ್‌ ಖರ್ಗೆ

ಅಯೋಧ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಠೆ ದಿನ ಜ.22ರಂದು ಎಲ್ಲ ಮುಜರಾಯಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸುವಂತೆ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿಕೆ ನೀಡಿರುವುದರಲ್ಲಿ ವಿಶೇಷ ಏನಿಲ್ಲ. ಯಾಕೆಂದರೆ ಈಗಾಗಲೇ ಎಲ್ಲ ದೇವಸ್ಥಾನಗಳೂ ವಿಶೇಷ ಪೂಜೆ ನಡೆಸುವಂತೆ ಬಿಜೆಪಿ ವಿನಂತಿ ಮಾಡಿದೆ. ಸಚಿವ ರಾಮಲಿಂಗಾ ರೆಡ್ಡಿ ಕಾಟಾಚಾರಕ್ಕೆ ಹೇಳಿರುವಂತಿದೆ ಎಂದರು.

ಕಾಂಗ್ರೆಸ್‌ಗೆ ಬರೇ ಮೂರ್ನಾಲ್ಕು ಸ್ಥಾನ:

ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಕೇವಲ ಮೂರ್ನಾಲ್ಕು ಸ್ಥಾನ ಮಾತ್ರ ಪಡೆಯಲಿದೆ ಎಂದು ಆಂತರಿಕ ಸಮೀಕ್ಷೆಗಳು ಹೇಳುತ್ತಿವೆ. ಬಿಜೆಪಿ 25ಕ್ಕೂ ಅಧಿಕ ಸ್ಥಾನದಲ್ಲಿ ಗೆಲ್ಲಲಿದೆ ಎಂದು ಮೂರ್ನಾಲ್ಕು ಸಮೀಕ್ಷೆಗಳು ಹೇಳಿವೆ. ಇದು ಕಾಂಗ್ರೆಸಿಗರ ನಿದ್ದೆಗೆಡಿಸಿದ್ದು, ಲೋಕಸಭಾ ಚುನಾವಣೆ ಬಳಿಕ ರಾಜ್ಯ ಸರ್ಕಾರದ ಅಸ್ತಿತ್ವಕ್ಕೆ ಅಪಾಯ ಇದೆ ಎಂದು ತಿಳಿದೇ ಕಾಂಗ್ರೆಸಿಗರು ಬೇಕಾಬಿಟ್ಟಿ ಮಾತನಾಡಲಾರಂಭಿಸಿದ್ದಾರೆ ಎಂದು ಅಶೋಕ್‌ ಲೇವಡಿ ಮಾಡಿದರು.

ಇಂದು ಬೆಂಗಳೂರಲ್ಲಿ ಚಿಂತನಾ ಸಭೆ:

ಲೋಕಸಭಾ ಚುನಾವಣೆ ಪೂರ್ವತಯಾರಿ ಸಲುವಾಗಿ ಸೋಮವಾರ ಬೆಂಗಳೂರಿನಲ್ಲಿ ಚಿಂತನಾ ಸಭೆ ಆಯೋಜಿಸಲಾಗಿದೆ. ಈ ಸಭೆಯಲ್ಲಿ ಆಯ್ದ 40 ಮಂದಿ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಈ ಸಭೆಯಲ್ಲಿ ಲೋಕಸಭಾ ಚುನಾವಣೆಗೆ ಯಾವ ರೀತಿ ಸಿದ್ಧತೆ ನಡೆಸಬೇಕು. ಪ್ರಮುಖ ಜವಾಬ್ದಾರಿ, ಪ್ರಭಾರಿಗಳ ನೇಮಕವೇ ಮೊದಲಾದ ವಿಚಾರಗಳನ್ನು ಚರ್ಚಿಸಲಾಗುತ್ತದೆ ಎಂದರು.

ಹಾಲಿ ಸಂಸದರಲ್ಲದೆ, ಹೊಸಬರನ್ನು ಎಲ್ಲೆಲ್ಲಿ ಕಣಕ್ಕೆ ಇಳಿಸಬೇಕು ಎಂಬ ಬಗ್ಗೆಯೂ ವಿಸ್ತೃತ ಚರ್ಚೆ ನಡೆಯಲಿದೆ. ಆದರೆ ಕೇಂದ್ರ ನಾಯಕರ ಸೂಚನೆ ಬಳಿಕವೇ ಅಭ್ಯರ್ಥಿಗಳ ಆಯ್ಕೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಈಗಾಗಲೇ ಅಭ್ಯರ್ಥಿಗಳ ಕುರಿತಂತೆ ಆಂತರಿಕ ಸಮೀಕ್ಷೆ ನಡೆಸಲಾಗಿದ್ದು, ಅದರ ವರದಿ ಕೇಂದ್ರ ನಾಯಕರ ಮುಂದಿದೆ ಎಂದು ಅಶೋಕ್‌ ಸ್ಪಷ್ಟಪಡಿಸಿದರು.

 

ಶ್ರೀಕಾಂತ್ ಪೂಜಾರಿ ಬಂಧನ ಖಂಡಿಸಿ ಠಾಣೆ ಎದುರು ಬಿಜೆಪಿ ಪ್ರತಿಭಟನೆ: 43 ಮಂದಿ ವಿರುದ್ಧ ಎಫ್ಐಆರ್, ಆರ್ ಅಶೋಕ್ ಎ1 ಆರೋಪಿ!

ಮಾಜಿ ಸಚಿವ ಬೈರತಿ ಬಸವರಾಜು, ಶಾಸಕ ವೇದವ್ಯಾಸ್‌ ಕಾಮತ್, ವಿಧಾನ ಪರಿಷತ್‌ ಸದಸ್ಯ ಪ್ರತಾಪ್‌ಸಿಂಹ ನಾಯಕ್‌, ಮೇಯರ್ ಸುಧೀರ್‌ ಶೆಟ್ಟಿ ಕಣ್ಣೂರು, ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್‌ ಇದ್ದರು.

ಬೇಸಿಗೆಯಲ್ಲಿ ಕಂಡ ಕಲ್ಲನ್ನು ಮಳೆಗಾಲದಲ್ಲಿ ಕಿತ್ತುಹಾಕಬೇಕು ಎಂಬಂತೆ ಭ್ರಷ್ಟ, ದುಷ್ಟ ಕಾಂಗ್ರೆಸ್‌ ಸರ್ಕಾರವನ್ನು ಲೋಕಸಭಾ ಚುನಾವಣೆ ಬಳಿಕ ಅಧಿಕಾರದಿಂದ ಕೆಳಗೆ ಇಳಿಸಬೇಕು. ಇದಕ್ಕಿಂತ ಒಳ್ಳೆ ಸಮಯ ಬೇರೆ ಇಲ್ಲ.

-ಆರ್‌.ಅಶೋಕ್‌, ವಿಧಾನಸಭಾ ವಿಪಕ್ಷ ನಾಯಕ.

Follow Us:
Download App:
  • android
  • ios