ಬೆಂಗಳೂರು [ಮಾ.01]:  ಶಾಲೆಗಳಲ್ಲಿ ವಿದ್ಯಾರ್ಥಿ, ಶಿಕ್ಷಕ ಅಥವಾ ಸಿಬ್ಬಂದಿ ಶೀತ, ಜ್ವರ ಅಥವಾ ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದರೆ ಅಂತಹವರಿಗೆ ಕಡ್ಡಾಯ ರಜೆ ನೀಡುವಂತೆ ಶಾಲಾಡಳಿತ ಮಂಡಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯು ನಿರ್ದೇಶಿಸಿದೆ.

ಕೊರೋನಾ ವೈರಸ್‌ ಜಗತ್ತಿನಾದ್ಯಂತ ಹರಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ. ಶಾಲೆಗಳಲ್ಲಿ ಕೊರೋನಾ ವೈರಸ್‌ ಕುರಿತು ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವ ಬಗ್ಗೆ ಸುತ್ತೋಲೆ ಹೊರಡಿಸಿ ಸೂಚನೆ ನೀಡಿದೆ.

ಯಾವುದೇ ವಿದ್ಯಾರ್ಥಿ, ಶಿಕ್ಷಕ ಅಥವಾ ಸಿಬ್ಬಂದಿ ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದರೆ, ಅಂತವರು ಶಾಲೆಗೆ ಹಾಜರಾಗದಂತೆ ಕಡ್ಡಾಯವಾಗಿ ತಿಳಿಸಲು ಸೂಚಿಸಿದೆ. ಅಲ್ಲದೇ, ವೈದ್ಯರಿಂದ ಕಾಯಿಲೆ ಗುಣಮುಖವಾಗಿದ್ದನ್ನು ಖಚಿತಪಡಿಸಿಕೊಂಡ ನಂತರವೇ ಶಾಲೆಗೆ ಬರಲು ತಿಳಿಸಿದೆ. ಶಾಲೆಗಳಲ್ಲಿ ವಿದ್ಯಾರ್ಥಿಗೆ ರೋಗ ಲಕ್ಷಣ ಕಾಣಿಸಿಕೊಂಡ ಕೂಡಲೇ ಮನೆಗೆ ಕಳುಹಿಸಬೇಕು. ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ರೋಗ ಲಕ್ಷಣ ಕಾಣಿಸಿಕೊಂಡಲ್ಲಿ ವಿದ್ಯಾರ್ಥಿ ನಿಲಯದಲ್ಲಿ ಪ್ರತ್ಯೇಕವಾಗಿರಿಸಬೇಕು ಎಂದು ತಿಳಿಸಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮಕ್ಕಳು ವೈರಾಣುಗಳ ಸೋಂಕಿಗೆ ಶೀಘ್ರವಾಗಿ ತುತ್ತಾಗುವ ಸಾಧ್ಯತೆ ಇದೆ. ಇಂತಹ ವೈರಾಣುಗಳಿಂದ ಹರಡುವ ರೋಗಗಳು ಮತ್ತು ಆರೋಗ್ಯದ ಮೇಲಾಗುವ ದುಷ್ಪರಿಣಾಮ ಕುರಿತು ಅರಿವು ಅಗತ್ಯ. ಹೀಗಾಗಿ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಕೊರೋನಾ ಸೋಂಕು ರಾಜ್ಯದಲ್ಲಿ ಹರಡದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲು ಎಲ್ಲಾ ಶಾಲೆಗಳಿಗೆ ನಿರ್ದೇಶಿಸಲಾಗಿದೆ.

ಚೀನಾದ ವುಹಾನ್‌ ಪ್ರದೇಶದಿಂದ ವಿದ್ಯಾರ್ಥಿ, ಶಿಕ್ಷಕ ಅಥವಾ ಸಿಬ್ಬಂದಿ ರಾಜ್ಯಕ್ಕೆ ಬಂದಿದ್ದರೆ, ವೈರಸ್‌ ತಪಾಸಣೆ ಆಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು, ವಿದ್ಯಾರ್ಥಿಗಳು ಬಾಧಿತ ವ್ಯಕ್ತಿಯ ಸಂಪರ್ಕಕ್ಕೆ ಹೋಗದಂತೆ ಎಚ್ಚರ ವಹಿಸಬೇಕು. ಕೊರೋನಾ ವೈರಸ್‌ ಬಾಧಿತ ವ್ಯಕ್ತಿಗಳ ಸಂಪರ್ಕದಲ್ಲಿ ಯಾವುದಾದರೂ ವಿದ್ಯಾರ್ಥಿ ಇರುವುದು ಕಂಡುಬಂದಲ್ಲಿ, ಅಂತಹ ವಿದ್ಯಾರ್ಥಿಯನ್ನು ಮನೆಯಲ್ಲಿ ಪ್ರತ್ಯೇಕವಾಗಿರಿಸಬೇಕು. ಆಗಾಗ್ಗೆ ಕೊರೋನಾ ವೈರಸ್‌ ಜಾಗೃತಿ ಕಾರ್ಯಕ್ರಮ ನಡೆಸುತ್ತಿರಬೇಕು ಎಂದು ಸೂಚಿಸಿದೆ.