ಬೆಂಗಳೂರು(ಸೆ.05): ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ವಿರುದ್ಧ ಸುಳ್ಳು ಆರೋಪ ಹೊರಿಸುವ ಮೂಲಕ, ಬಿಜೆಪಿ ಶಾಸಕರ ನಕಲಿ ಸಹಿ ಬಳಸಿ ಸುಳ್ಳು ದಾಖಲೆ ಬಿಡುಗಡೆ ಮಾಡಲಾಗಿದೆ ಎಂದು ಆರೋಪಿಸಿ ವಕೀಲರೊಬ್ಬರು ವಿಧಾನಸೌಧ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ವಕೀಲ ಜಿ.ದೇವೇಗೌಡ ಎಂಬವರು ಕೊಟ್ಟ ದೂರಿನ ಮೇರೆಗೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಅವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಲಕ್ಷ್ಮಣ ಅವರು ಮೈಸೂರಿನ ಕಾಂಗ್ರೆಸ್‌ ಕಚೇರಿಯಲ್ಲಿ ಆ.26ರಂದು ಪತ್ರಿಕಾಗೋಷ್ಠಿ ನಡೆಸಿದ್ದರು. ಪತ್ರಿಕಾಗೋಷ್ಠಿಯಲ್ಲಿ ‘ಸೂಪರ್‌ ಸಿಎಂ ಬಿ.ವೈ.ವಿಜಯೇಂದ್ರ ದರ್ಬಾರ್‌’ ಎಂಬ ಐದು ಪುಟಗಳ ನಕಲಿ ದಾಖಲೆ ಬಿಡುಗಡೆ ಮಾಡಿದ್ದರು. ಇದರಲ್ಲಿ ಬಿಜೆಪಿ ಶಾಸಕರು ಸಹಿ ಮಾಡಿ, ಹೈಕಮಾಂಡ್‌ಗೆ ದೂರು ನೀಡಿದ್ದರು ಎಂದು ಸುಳ್ಳು ಆರೋಪ ಮಾಡಿದ್ದರು. ಬಿಜೆಪಿ ಶಾಸಕರದ್ದು ಎನ್ನಲಾದ ನಕಲಿ ಸಹಿ ಇರುವ ದಾಖಲೆ ಪತ್ರಗಳನ್ನು ಬಿಡುಗಡೆ ಮಾಡಿ, ವೈಯಕ್ತಿಕವಾಗಿ ವಿಜಯೇಂದ್ರ ಅವರನ್ನು ನಿಂದಿಸಿದ್ದಾರೆ. 

ಡಿಕೆ ಬ್ರದರ್ಸ್‌ಗೆ ತಿರುಗೇಟು ಕೊಟ್ಟ ಬಿವೈ ವಿಜಯೇಂದ್ರ..!

ಈ ಮೂಲಕ ವಿಜಯೇಂದ್ರ ಮತ್ತು ಬಿಜೆಪಿ ಪಕ್ಷದ ಗೌರವಕ್ಕೆ ಧಕ್ಕೆ ಉಂಟು ಮಾಡಿರುವ ಲಕ್ಷ್ಮಣ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಲಾಗುತ್ತಿದೆ ಎಂದು ವಿಧಾನಸೌಧ ಠಾಣೆ ಪೊಲೀಸರು ಮಾಹಿತಿ ನೀಡಿದರು.