ಬೆಂಗಳೂರು (ಡಿ.10):  ನಗರದ ಗಂಗೇನಹಳ್ಳಿಯ ಮಠದಹಳ್ಳಿ ಬಡಾವಣೆಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ವಶಪಡಿಸಿಕೊಂಡಿದ್ದ 1 ಎಕರೆ 11 ಗುಂಟೆ ಜಮೀನನ್ನು ಅಕ್ರಮ ಡಿ-ನೋಟಿಫಿಕೇಷನ್‌ ಮಾಡಿದ ಆರೋಪ ಸಂಬಂಧ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಿರುದ್ಧ ಲೋಕಾಯುಕ್ತಕ್ಕೆ ದಾಖಲಿಸಿದ್ದ ದೂರು ಹಿಂಪಡೆಯುವುದಾಗಿ ದೂರುದಾರರು ಹೈಕೋರ್ಟ್‌ಗೆ ಮೆಮೊ ಸಲ್ಲಿಸಿದರು. 
ಪ್ರಕರಣ ಸಂಬಂಧ ತಮ್ಮ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ 2017ರಲ್ಲಿ ಯಡಿಯೂರಪ್ಪ ಸಲ್ಲಿಸಿದ್ದ ತಕರಾರು ಅರ್ಜಿ ನ್ಯಾಯಮೂರ್ತಿ ಜಾನ್‌ ಮೈಕೆಲ್‌ ಕುನ್ಹಾ ಅವರಿದ್ದ ಏಕಸದಸ್ಯ ಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತ್ತು. ವಿಚಾರಣೆ ವೇಳೆ ದೂರುದಾರ ಜಯಕುಮಾರ್‌ ಹಿರೇಮಠ್‌ ಪರ ವಕೀಲರು ದೂರು ಹಿಂಪಡೆಯಲು ಅನುಮತಿ ನೀಡುವಂತೆ ಕೋರಿ ಮೆಮೊ ಸಲ್ಲಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಡಿ.11ರಂದು ದೂರುದಾರರು ಖುದ್ದು ಹಾಜರಾಗಿ ವಿವರಣೆ ನೀಡಬೇಕು ಎಂದು ಸೂಚಿಸಿ ವಿಚಾರಣೆ ಮುಂದೂಡಿತು.

ಅಕ್ರಮ ಆಸ್ತಿಗಳಿಕೆ ಆರೋಪ ಸಂಬಂಧ ಯಡಿಯೂರಪ್ಪ ಮತ್ತವರ ಕುಟುಂಬ ಸದಸ್ಯರ ವಿರುದ್ಧ ಹೈಕೋರ್ಟ್‌ನಲ್ಲಿ ದಾಖಲಿಸಿದ್ದ ಮೂರು ಅರ್ಜಿಗಳನ್ನು ತಾಂತ್ರಿಕ ಕಾರಣಗಳಿಂದ ಆ ಪ್ರಕರಣದ ದೂರುದಾರ ಬಿ.ವಿನೋದ್‌ ಇತ್ತೀಚೆಗೆ ಹಿಂಪಡೆದಿದ್ದರು. ಪೂರ್ವಾನುಮತಿ ಪಡೆಯದೆ ಹಿನ್ನೆಲೆಯಲ್ಲಿ ಅರ್ಜಿಗಳನ್ನು ಹಿಂಪಡೆಯಲಾಗುವುದು. ಪೂರ್ವಾನುಮತಿ ಪಡೆದು ಹೊಸದಾಗಿ ಅರ್ಜಿ ಸಲ್ಲಿಸಲಾಗುವುದು ಎಂದು ವಿನೋದ್‌ ಹೈಕೋರ್ಟ್‌ಗೆ ತಿಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಕರ್ನಾಟಕದಲ್ಲಿ ಗೋ ಹತ್ಯೆ ನಿಷೇಧ ಮಸೂದೆ ಪಾಸ್: ಇಲ್ಲಿವೆ ಕಾಯ್ದೆಯಲ್ಲಿರುವ 25 ಅಂಶಗಳು

ಪ್ರಕರಣವೇನು?

ಬಿಡಿಎಯು 1977ರಲ್ಲಿ ಗಂಗೇನಹಳ್ಳಿ ವ್ಯಾಪ್ತಿಯ ಮಠದಹಳ್ಳಿ ಬಡಾವಣೆ ವಶಪಡಿಸಿಕೊಂಡಿದ್ದ ಭೂಮಿಯ ಪೈಕಿ ಸರ್ವೇ ನಂ 7/1ಬಿ, 7/1ಸಿ ಮತ್ತು 7/ಡಿನಲ್ಲಿ ತಿಮ್ಮಾ ರೆಡ್ಡಿ, ನಾಗಪ್ಪ ಮತ್ತು ಮುನಿಸ್ವಾಮಪ್ಪಗೆ ಸೇರಿದ್ದ ಎನ್ನಲಾಗಿದ್ದ 1 ಎಕರೆ 11 ಗುಂಟೆ ಭೂಮಿಯನ್ನು 2010ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌.ಯಡಿಯೂರಪ್ಪ ಅಕ್ರಮವಾಗಿ ಡಿ-ನೋಟಿಫಿಕೇಷನ್‌ ಮಾಡಿದ್ದಾರೆ ಎಂದು ಆರೋಪಿಸಿ ಜಯಕುಮಾರ್‌ ಹೀರೆಮಠ್‌ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಲೋಕಾಯುಕ್ತ ಪೊಲೀಸರು ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸುತ್ತಿದ್ದರು. ಅದನ್ನು ರದ್ದುಪಡಿಸುವಂತೆ ಕೋರಿ ಯಡಿಯೂರಪ್ಪ 2017ರಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

- ‘ದೂರು ನೀಡುವ ಮುನ್ನ ಪೂರ್ವಾನುಮತಿ ಪಡೆದಿಲ್ಲ’