ಮಂಗಳೂರು [ಜ.31]: ಸ್ಪರ್ಧಾತ್ಮಕ ಪರೀಕ್ಷೆ ವೇಳೆ ಕನ್ನಡ ಹಾಗೂ ಕನ್ನಡಿಗರ ಮೇಲೆ ಸವಾರಿ ನಡೆಸಿದ ಕೇರಳ ಲೋಕಸೇವಾ ಆಯೋಗ(ಪಿಎಸ್‌ಸಿ)ದ ನಿಲುವು ಪ್ರಶ್ನಿಸಿದ್ದ ಕನ್ನಡಿಗರಿಗೆ ಮಹತ್ವದ ಗೆಲುವು ಸಿಕ್ಕಿದೆ. ಕೇರಳ ಹೈಕೋರ್ಟ್‌ ಕನ್ನಡಿಗರ ಪರ ತೀರ್ಪು ನೀಡಿದೆ. ಗಡಿನಾಡ ಕನ್ನಡಿಗರ ಬದಲು ಕೇವಲ ಮಲಯಾಳಿಗಳಿಗೇ ಅನುಕೂಲವಾಗುವಂಥ ನಿಯಮ ರೂಪಿಸಿದ್ದ ನಿಯಮ ರೂಪಿಸಿದ್ದ ಅಲ್ಲಿನ ಲೋಕಸೇವಾ ಆಯೋಗಕ್ಕೆ ಭಾರೀ ಹಿನ್ನಡೆಯಾಗಿದೆ.

ಏನಿದು ಪ್ರಕರಣ?:  2016ರಲ್ಲಿ ಕಾಸರಗೋಡು ಜಿಲ್ಲೆಯ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಎಲ್‌ಡಿ(ಎಲ್‌ಡಿ(ಲೋವರ್‌ ಡಿವಿಜನ್‌) ಕ್ಲರ್ಕ್ ಹುದ್ದೆ ನೇಮಕಾತಿಗೆ ನೋಟಿಫಿಕೇಷನ್‌ ಹೊರಡಿಸಿತ್ತು. ಅದರಂತೆ ಕೇರಳ ಪಿಎಸ್‌ಸಿ 2019ರ ಅಕ್ಟೋಬರ್‌ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿತ್ತು. ಇದರಲ್ಲಿ 40: 40 ಅಂದರೆ, 40 ಅಂಕ ಮಲಯಾಳಂ ಹಾಗೂ 40 ಅಂಕ ಕನ್ನಡ, ಉಳಿದ 20 ಅಂಕ ಆಂಗ್ಲ ಪ್ರಶ್ನೆಗೆ ಸೇರಿ ಒಟ್ಟು 100 ಅಂಕಕ್ಕೆ ಪರೀಕ್ಷೆ ನಡೆಸಲಾಗುತ್ತದೆ. ಆದರೆ ಅ.22ರಂದು ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 40: 40ರ ಬದಲು 60 ಅಂಕ ಮಲಯಾಳಂ ಮತ್ತು ಕನ್ನಡಕ್ಕೆ ಕೇವಲ 20 ಅಂಕ ನಿಗದಿಪಡಿಸಿ ಪ್ರಶ್ನೆ ನೀಡಲಾಗಿತ್ತು. ಈ ಮೂಲಕ ಮಲಯಾಳಂ ಬಲ್ಲ ಅಭ್ಯರ್ಥಿಗಳಿಗಷ್ಟೇ ಪರೀಕ್ಷೆಯಲ್ಲಿ ತೇರ್ಗಡೆಯಾಗುವಂತೆ ನೋಡಲಾಗಿತ್ತು. ಇದು ಕನ್ನಡಿಗ ಅಭ್ಯರ್ಥಿಗಳಿಗೆ ಮಾಡಿದ ಅನ್ಯಾಯ ಎಂದು ಆರೋಪಿಸಿ ಸಂತ್ರಸ್ತರು ಕೇರಳ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿಯಲ್ಲಿ ವಿವಿಧ ಹುದ್ದೆ ನೇಮಕಾತಿ...

ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ ಇದೀಗ ಕನ್ನಡಿಗರ ಪರವಾಗಿ ತೀರ್ಪು ನೀಡಿದೆ. ಈಗಾಗಲೇ ನಡೆಸಿದ ಪ್ರಾಥಮಿಕ ಪರೀಕ್ಷೆಯಲ್ಲಿ ಒಎಂಆರ್‌ ಪರೀಕ್ಷೆಯ ಅಂಕದಲ್ಲಿ ಯಾವುದೇ ಕಟ್‌ಆಫ್‌ ಮಾಡುವಂತಿಲ್ಲ. ಸಂತ್ರಸ್ತ ಅಭ್ಯರ್ಥಿಗಳೆಲ್ಲರೂ ಲಿಖಿತ ಪರೀಕ್ಷೆಗೆ ಹಾಜರಾಗುವ ಅರ್ಹತೆ ಹೊಂದಿದ್ದಾರೆ ಎಂದು ಹೈಕೋರ್ಟ್‌ ತನ್ನ ತೀರ್ಪಿನಲ್ಲಿ ತಿಳಿಸಿದೆ.

ಸಂತ್ರಸ್ತ ಕನ್ನಡಿಗರ ಪರವಾಗಿ ಅಭ್ಯರ್ಥಿಗಳೇ ಸೇರಿ ಹೋರಾಟ ಸಮಿತಿ ರಚಿಸಿದ್ದರು. ಹೋರಾಟ ಸಮಿತಿ ಅಧ್ಯಕ್ಷ ಪ್ರಸನ್ನ ಕುಮಾರ್‌ ಮತ್ತು ಕಾರ್ಯದರ್ಶಿ ವಿಷ್ಣು ಪ್ರಕಾಶ್‌ ನವೆಂಬರ್‌ನಲ್ಲಿ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು.

ಕನ್ನಡಿಗರ ಬೇಡಿಕೆಗಳನ್ನು ಸತತವಾಗಿ ತಿರಸ್ಕರಿಸಿರುವ ಪಿಎಸ್‌ಸಿಗೆ ಇದು ಕೋರ್ಟ್‌ ನೀಡಿದ ಹೊಡೆತವಾಗಿದೆ. ಮುಂದಿನ ದಿನಗಳಲ್ಲಿ ಕನ್ನಡಿಗ ಉದ್ಯೋಗಾರ್ಥಿಗಳಿಗೆ ಅನ್ಯಾಯವಾದಲ್ಲಿ ಹೋರಾಟ ಮುಂದುವರಿಯಲಿದೆ.

-ವಿಷ್ಣುಪ್ರಕಾಶ್‌, ಕಾರ್ಯದರ್ಶಿ, ಹೋರಾಟ ಸಮಿತಿ