ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಕೇಸು ದಾಖಲು!
ಸಂಸದೆ ಶೋಭಾ ವಿರುದ್ಧ ಕೇರಳದಲ್ಲಿ ಕೇಸು ದಾಖಲು| ಹಿಂದೂಗಳ ಕಾಲೋನಿಗೆ ನೀರು ಸರಬರಾಜು ಸ್ಥಗಿತಗೊಳಿಸಿದ ಬಗ್ಗೆ ಟ್ವೀಟ್ ಮಾಡಿದ್ದ ಸಂಸದೆ
ತಿರುವನಂತಪುರ[ಜ.24]: ಇಲ್ಲಿನ ಮಲಪ್ಪುರಂ ವ್ಯಾಪ್ತಿಯ ಕುಟ್ಟಿಪುರಂ ಪಂಚಾಯತ್ ವ್ಯಾಪ್ತಿಯಲ್ಲಿ ಪೌರತ್ವ ಕಾಯ್ದೆ ಬೆಂಬಲಿಸಿದ ಕಾರಣಕ್ಕೆ ಹಿಂದೂಗಳ ಕಾಲೋನಿಗೆ ನೀರು ಸರಬರಾಜು ಸ್ಥಗಿತಗೊಳಿಸಿದ ಬಗ್ಗೆ ಟ್ವೀಟ್ ಮಾಡಿದ್ದ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
"
ಧರ್ಮದ ಆಧಾರದ ಮೇಲೆ ವಿವಿಧ ಕೋಮುಗಳ ನಡುವೆ ದ್ವೇಷದ ಭಾವನೆ ಹಬ್ಬಿಸಿದ ಆರೋಪವನ್ನು ಶೋಭಾ ಅವರ ಮೇಲೆ ಹೊರಿಸಲಾಗಿದೆ. ಜ.22ರಂದು ಟ್ವೀಟ್ ಮಾಡಿದ್ದ ಶೋಭಾ ಕರಂದ್ಲಾಜೆ ‘ಮತ್ತೊಂದು ಕಾಶ್ಮಿರವಾಗುವತ್ತ ಕೇರಳ ಪುಟ್ಟಪುಟ್ಟಹೆಜ್ಜೆ ಇಡುತ್ತಿದೆ. ಪೌರತ್ವ ಕಾಯ್ದೆ 2019 ಅನ್ನು ಬೆಂಬಲಿಸಿದ್ದಕ್ಕಾಗಿ ಮಲಪ್ಪುರಂನ ಕುಟ್ಟಿಪುರಂ ಪಂಚಾಯತ್‌ನ ಹಿಂದೂಗಳ ಮನೆಗಳಿಗೆ ನೀರು ಸರಬರಾಜು ಸ್ಥಗಿತಗೊಳಿಸಲಾಗಿದೆ.
ಕರಾವಳಿಯಲ್ಲಿ ಭಯೋತ್ಪಾದಕ ಚಟುವಟಿಕೆ ನಿಜ : ಶೋಭಾ ಕರಂದ್ಲಾಜೆ
ದೇವರ ಸ್ವಂತ ನಾಡಿನಲ್ಲಿ ನಡೆಯುತ್ತಿರುವ ಈ ‘ಶಾಂತಿಯುತ ಅಸಹಿಷ್ಣುತೆ‘ಯನ್ನು ದೆಹಲಿಯ ಮಾಧ್ಯಮಗಳು ಜನರ ಮುಂದೆ ತೋರಿಸುತ್ತವೆಯೇ’ ಎಂದು ಪ್ರಶ್ನಿಸಿದ್ದರು. ಜೊತೆಗೆ ಸ್ಥಳೀಯ ಹಿಂದೂಗಳಿಗೆ ಸೇವಾ ಭಾರತಿ ಸಂಸ್ಥೆಯ ಮೂಲಕ ಟ್ಯಾಂಕರ್‌ನಲ್ಲಿ ನೀರು ಸರಬರಾಜು ಮಾಡುವ ಫೋಟೋ ಅನ್ನು ಲಗತ್ತಿಸಿದ್ದರು.
ಈ ಟ್ವೀಟ್ ವಿರುದ್ಧ ಸ್ಥಳೀಯ ನಿವಾಸಿ, ಸುಪ್ರೀಂಕೋರ್ಟ್ ವಕೀಲ ಸುಭಾಷ್ ಚಂದ್ರನ್ ಅವರು ದೂರು ಸಲ್ಲಿಸಿದ್ದರು. ಈ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.