ಮರಾಠರಿಗೆ 2ಎ ಮೀಸಲು ನೀಡಲು ಬದ್ಧ: ಸಿಎಂ ಬೊಮ್ಮಾಯಿ
ಬೇರೆ ಸಮುದಾಯಗಳಿಗೆ ಅನ್ಯಾಯವಾಗದಂತೆ ನೋಡಿಕೊಂಡು ಮೀಸಲಾತಿ ನೀಡಲಾಗುವುದು ಎಂದು ಅಭಯ ನೀಡಿದ ಸಿಎಂ
ಬೆಂಗಳೂರು(ಜು.20): ಮರಾಠ ಸಮುದಾಯವನ್ನು ಪ್ರವರ್ಗ 3 ‘ಬಿ’ ಯಿಂದ 2 ‘ಎ’ ಗೆ ಸೇರ್ಪಡೆ ಮಾಡಿ ಮೀಸಲಾತಿ ನೀಡುವುದಕ್ಕೆ ಸರ್ಕಾರ ಬದ್ಧವಾಗಿದೆ. ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವರದಿ ಬಂದ ನಂತರ ಸಂವಿಧಾನದ ಚೌಕಟ್ಟಿನಲ್ಲಿ ಬೇಡಿಕೆ ಈಡೇರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ. ಅರಮನೆ ಮೈದಾನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಮುದಾಯವನ್ನು 2 ‘ಎ’ಗೆ ಸೇರ್ಪಡೆ ಮಾಡಿ ಮೀಸಲಾತಿ ನೀಡಬೇಕೆಂಬುದು ಬಹಳ ದಿನಗಳ ಬೇಡಿಕೆಯಾಗಿದೆ. ಈ ಬಗ್ಗೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರ ಜೊತೆ ಚರ್ಚಿಸಿದ್ದು ವರದಿ ನೀಡುವಂತೆ ಸೂಚಿಸಲಾಗಿದೆ. ಬೇರೆ ಸಮುದಾಯಗಳಿಗೆ ಅನ್ಯಾಯವಾಗದಂತೆ ನೋಡಿಕೊಂಡು ಮೀಸಲಾತಿ ನೀಡಲಾಗುವುದು ಎಂದು ಅಭಯ ನೀಡಿದರು.
ಕೆಲವರು ದೇಶ, ಸಮಾಜಕ್ಕಾಗಿ ಹೋರಾಟ ಮಾಡಿದ್ದು ಮಿನುಗು ನಕ್ಷತ್ರಗಳಾಗಿದ್ದಾರೆ. ಹಿಂದೂ ಸಮಾಜದ ಇತಿಹಾಸ ನೋಡಿದಾಗ ಛತ್ರಪತಿ ಶಿವಾಜಿ ಮಹಾರಾಜರು ಮಿನುಗು ನಕ್ಷತ್ರವಾಗಿದ್ದಾರೆ. ಮೊಘಲ್ ಸಾಮ್ರಾಜ್ಯ ದಕ್ಷಿಣಕ್ಕೆ ವಿಸ್ತರಣೆಯಾಗದಂತೆ ನೋಡಿಕೊಂಡು ಶಿವಾಜಿ ಮಹಾರಾಜರು ಹಿಂದೂ ಸಾಮ್ರಾಜ್ಯ ಸ್ಥಾಪಿಸಿದರು. ನಾನು ಹುಟ್ಟಿಬೆಳೆದದ್ದು ಹುಬ್ಬಳ್ಳಿಯ ಮರಾಠ ಗಲ್ಲಿಗಳಲ್ಲಿ. ಸರ್ಕಾರ ಮರಾಠಿಗರ ಉತ್ತರದಾಯಿತ್ವ ಪಡೆಯುತ್ತದೆ. ಸಮುದಾಯಕ್ಕೆ ನ್ಯಾಯ ಒದಗಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಸಿಗುವರೆಗೂ ಹೋರಾಟ: ಕೂಡಲ ಶ್ರೀ
10 ಕೋಟಿ ಅನುದಾನ:
ಮರಾಠ ಅಭಿವೃದ್ಧಿ ನಿಮಗಮಕ್ಕೆ ಈಗಾಗಲೇ 100 ಕೋಟಿ ರು. ಅನುದಾನ ನೀಡಲಾಗಿದೆ. ಇದನ್ನು ಸಮರ್ಪಕವಾಗಿ ವಿನಿಯೋಗಿಸಿದರೆ ಮತ್ತಷ್ಟುಅನುದಾನ ನೀಡಲಾಗುವುದು. ಮರಾಠ ಸಮುದಾಯದ ಮಹನೀಯರ ಸಮಾಧಿಗಳು, ಐತಿಹಾಸಿಕ ಸ್ಥಳಗಳ ಅಭಿವೃದ್ಧಿಗೆ ವಿಸ್ತೃತ ಯೋಜನಾ ವರದಿ(ಡಿಪಿಆರ್) ತಯಾರಿಸಲು 10 ಕೋಟಿ ರು. ವಿಶೇಷ ಅನುದಾನ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಮರಾಠ ಸಮುದಾಯದ ಬೆಂಬಲದಿಂದ ನಾನು ಮತ್ತು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದೇವೆ. ನಿಮ್ಮಿಂದಾಗಿ ಅಧಿಕಾರ ಸಿಕ್ಕಿದೆ. ಪ್ರವರ್ಗ 2 ಎಗೆ ಸೇರಿಸುವ ಬಗ್ಗೆ ಬಸವರಾಜ ಬೊಮ್ಮಾಯಿ ಕ್ರಮ ಕೈಗೊಳ್ಳಬೇಕು, ಕೈಗೊಳ್ಳುತ್ತಾರೆ. ನೀವು ಹೋರಾಟ ನಡೆಸಲು ಬಿಡುವುದಿಲ್ಲ ಎಂದು ಭರವಸೆ ನೀಡಿದರು.
ಗೋಸಾಯಿ ಸಂಸ್ಥಾನ ಮಠದ ಮಂಜುನಾಥ ಭಾರತಿ ಸ್ವಾಮೀಜಿ, ಸಚಿವರಾದ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಶಶಿಕಲಾ ಜೊಲ್ಲೆ, ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಶಾಸಕರಾದ ರೇಣುಕಾಚಾರ್ಯ, ಅನಿಲ ಬೆನಕೆ, ಅಂಜಲಿ ನಿಂಬಾಳ್ಕರ್, ರೂಪಾಲಿ ನಾಯ್ಕ, ಶ್ರೀಮಂತ ಪಾಟೀಲ, ಮರಾಠ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಎಂ.ಜಿ.ಮುಳೆ ಮತ್ತಿತರರು ಉಪಸ್ಥಿತರಿದ್ದರು.
ಪಂಚಮಸಾಲಿ ಮೀಸಲಾತಿ: ನನ್ನದು ತಂತಿ ಮೇಲಿನ ನಡಿಗೆ ಸ್ಥಿತಿಯಾಗಿದೆ, ಸಚಿವ ಸಿ.ಸಿ.ಪಾಟೀಲ
ಇಬ್ಬರಿಗೆ ಸಚಿವ ಸ್ಥಾನ ನೀಡಿ
ಈ ಹಿಂದಿನ ಎಲ್ಲ ಸರ್ಕಾರಗಳಲ್ಲೂ ಮರಾಠ ಸಮುದಾಯದವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಲಾಗಿತ್ತು. ಆದರೆ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಮಾರಾಟ ಸಮುದಾಯದವರಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ. ಆದ್ದರಿಂದ ಇಬ್ಬರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ಕಾಂಗ್ರೆಸ್ ಶಾಸಕ ಶ್ರೀನಿವಾಸ ಮಾನೆ ಒತ್ತಾಯಿಸಿದರು.
ಅರಮನೆ ಮೈದಾನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಗೋಸಾಯಿ ಸಂಸ್ಥಾನ ಮಠದ ಮಂಜುನಾಥ ಭಾರತಿ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವರಾದ ಅಶ್ವತ್ಥ ನಾರಾಯಣ, ಶಶಿಕಲಾ ಜೊಲ್ಲೆ ಮತ್ತಿತರರು ಹಾಜರಿದ್ದರು.