ಮಂಗಳೂರು ಖಾಸಗಿ ಸಿಟಿ ಬಸ್ ಮಾಲೀಕರಿಗೆ ಕಮಿಷನರ್ ಖಡಕ್ ಕ್ಲಾಸ್: ಸಭೆಯಲ್ಲಿ ನಡೆದಿದ್ಧೇನು?
ನಗರದಲ್ಲಿ ಸಿಟಿ ಬಸ್ ಅತೀ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದ ಹೆಚ್ಚುತ್ತಿರುವ ಅಪಘಾತ ಪ್ರಕರಣಗಳ ಬೆನ್ನಲ್ಲೇ ಸಿಟಿ ಬಸ್ ಮಾಲೀಕರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳ ಜೊತೆ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತುರ್ತು ಸಭೆ ನಡೆಸಿದ್ದು, ಸಭೆಯಲ್ಲಿ ಬಸ್ ಮಾಲೀಕರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು
ಮಂಗಳೂರು (ಸೆ.27): ನಗರದಲ್ಲಿ ಸಿಟಿ ಬಸ್ ಅತೀ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದ ಹೆಚ್ಚುತ್ತಿರುವ ಅಪಘಾತ ಪ್ರಕರಣಗಳ ಬೆನ್ನಲ್ಲೇ ಸಿಟಿ ಬಸ್ ಮಾಲೀಕರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳ ಜೊತೆ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತುರ್ತು ಸಭೆ ನಡೆಸಿದ್ದು, ಸಭೆಯಲ್ಲಿ ಬಸ್ ಮಾಲೀಕರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಮಂಗಳೂರಿನ ಕಣ್ಣೂರು ಬಳಿ ಬಸ್ ನಿರ್ವಾಹಕನ ಮೇಲೆ ಹಲ್ಲೆ ಪ್ರಕರಣ ಹಾಗೂ ಖಾಸಗಿ ಬಸ್ ಅಪಘಾತ ಸಂಖ್ಯೆ ಹೆಚ್ಚಳ ಹಿನ್ನೆಲೆಯಲ್ಲಿ ಮಂಗಳೂರು ಕಮಿಷನರ್ ಕಚೇರಿಯಲ್ಲಿ ಖಾಸಗಿ ಬಸ್ ಮಾಲೀಕರ ತುರ್ತು ಸಭೆ ಕರೆಯಲಾಗಿತ್ತು. ಟೈಮಿಂಗ್ ವಿಚಾರ ಸಂಬಂಧ ಕಮಿಷನರ್ ಕಚೇರಿಯಲ್ಲಿ ಮಂಗಳೂರು ಕಮಿಷನರ್ ಅನುಪಮ್ ಅಗರ್ವಾಲ್ ನೇತೃತ್ವದಲ್ಲಿ ಸಭೆ ನಡೆದಿದೆ.
ಮಂಗಳೂರಿನ ಖಾಸಗಿ ಸಿಟಿ ಬಸ್ ಗಳ ಮಾಲೀಕರು ಭಾಗಿಯಾದ ಈ ಸಭೆಯಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು, ಸ್ಮಾರ್ಟ್ ಸಿಟಿ, ಪಾಲಿಕೆ ಅಧಿಕಾರಿಗಳು ಹಾಗೂ ಟ್ರಾಫಿಕ್ ಡಿಸಿಪಿ ದಿನೇಶ್ ಕುಮಾರ್ ಸೇರಿ ಎಸಿಪಿ, ಇನ್ಸ್‌ಪೆಕ್ಟರ್ ಗಳು ಭಾಗಿಯಾಗಿದ್ದರು. ಈ ವೇಳೆ ವಿವಿಧ ಭೀಕರ ಅಪಘಾತಗಳ ವಿಡಿಯೋ ತೋರಿಸಿ ಬಸ್ ಮಾಲೀಕರಿಗೆ ಕಮಿಷನರ್ ಕ್ಲಾಸ್ ತೆಗೆದುಕೊಂಡರು. ರ್ಯಾಶ್ ಡ್ರೈವಿಂಗ್, ಅತಿವೇಗ ಹಾಗೂ ಸಂಚಾರ ನಿಯಮಗಳ ಉಲ್ಲಂಘನೆ ಬಗ್ಗೆ ಎಚ್ಚರಿಕೆ ನೀಡಿದರು. ಖಾಸಗಿ ಬಸ್ ಗಳ ಆರ್ಭಟಕ್ಕೆ ಅನೇಕ ಜೀವಗಳು ಬಲಿಯಾಗಿದ್ದು, ಮಂಗಳೂರು ಹೃದಯ ಭಾಗಗಳಲ್ಲೇ ಭೀಕರ ಅಪಘಾತಗಳು ನಡೆದಿವೆ. ಬಸ್ ಟೈಮಿಂಗ್ ಹಾಗೂ ಚಾಲಕರ ನಡುವಿನ ಪೈಪೋಟಿಯಿಂದ ಅಪಘಾತಗಳು ಹೆಚ್ಚುತ್ತಿದ್ದು, ಬಸ್ ಟೈಮಿಂಗ್ ನಿಗದಿ ಮಾಡುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಅತೀ ವೇಗ ಹಾಗೂ ನಿರ್ಲಕ್ಷ್ಯತನದ ಚಾಲನೆಗೆ ಕಡಿವಾಣ ಹಾಕುವಂತೆ ಕಮಿಷನರ್ ಅನುಪಮ್ ಅಗರ್ವಾಲ್ ಸೂಚಿಸಿದರು.
ಕಾವೇರಿ ವಿಚಾರದಲ್ಲಿ ಒಗ್ಗಟ್ಟಿಂದ ಮಾತನಾಡಿ: ಸಚಿವ ದಿನೇಶ್ ಗುಂಡೂರಾವ್
ಬಸ್ ಚಾಲಕರ ಲೈಸೆನ್ಸ್ ರದ್ದು, ಕಮಿಷನರ್ ವಾರ್ನಿಂಗ್!: ಈ ಸಂದರ್ಭ ಪ್ರತಿಕ್ರಿಯಿಸಿದ ಮಂಗಳೂರು ಕಮಿಷನರ್ ಅನುಪಮ್ ಅಗರ್ವಾಲ್, ಬಸ್ ಮಾಲೀಕರು ತಮ್ಮ ಚಾಲಕ ಹಾಗೂ ನಿರ್ವಾಹಕರಿಗೆ ಸ್ಪಷ್ಟ ಎಚ್ಚರಿಕೆ ನೀಡಬೇಕು. ಇಲ್ಲವಾದಲ್ಲಿ ಚಾಲಕರ ಚಾಲನ ಪರವಾನಿಗೆ ರದ್ದು ಮಾಡಲಾಗುವುದು. ಈಗಾಗಲೇ ಈ ವರ್ಷದಲ್ಲಿ ಸುಮಾರು 90 ಮಂದಿಯ ಚಾಲನ ಪರವಾನಿಗೆ ರದ್ದಾಗಿದೆ. ಹಾಗಾಗಿ ಮುಂದೆ ಈ ರೀತಿ ಘಟನೆಗಳು ಸಂಭವಿಸದಂತೆ ಎಲ್ಲರೂ ಎಚ್ಚರಿಕೆ ವಹಿಸಬೇಕು. ಫುಟ್ ಬೋರ್ಡ್ ಮೇಲೆ ಪ್ರಯಾಣಿಕರು ನಿಲ್ಲಲು ಅವಕಾಶ ನೀಡಬಾರದು. ಸಾರ್ವಜನಿಕರಲ್ಲೂ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಕೆಲವು ಚಾಲಕರು ಕಿವಿಗೆ ಇಯರ್ ಫೋನ್ ಹಾಕಿ ಬಸ್ ಡ್ರೈವ್ ಮಾಡುತ್ತಾರೆ. ಅಂಥವರಿಗೆ ಸುತ್ತಮುತ್ತಲಿನ ಪರಿಸ್ಥಿತಿಯ ಅರಿವಿರೋದಿಲ್ಲ. ಇಂತಹ ಅಜಾಗರೂಕತೆಯಿಂದ ಅಪಘಾತಗಳು ಸಂಭವಿಸುತ್ತೆ. ಮುಂದಿನ ತಿಂಗಳು ಮತ್ತೆ ಸಭೆ ಕರೆದು ಪರಿಶೀಲಿಸಲಾಗುವುದು. ಆದಷ್ಟು ಬೇಗ ಇಂದು ನಿರ್ಣಯಿಸಿದ ವಿಚಾರ ತುರ್ತು ಕಾರ್ಯರೂಪಕ್ಕೆ ಬರುವಂತಾಗಬೇಕು. ಬಸ್ ಮಾಲೀಕರಿಗೆ ಅವಶ್ಯವಿರುವ ಕಡೆಗೆ ನಾವೇ ಹೋಮ್ ಗಾರ್ಡ್ ನೀಡುತ್ತೇವೆ. ಸಾರ್ವಜನಿಕರಿಗೂ ಎಚ್ಚರಿಕೆ ನೀಡಲಾಗುವುದು ಎಂದರು.
ಚೈತ್ರಾ ಕುಂದಾಪುರ ವಿರುದ್ಧ ಮತ್ತೊಂದು ಕೇಸ್: ಬಟ್ಟೆ ಅಂಗಡಿ ಹಾಕಿಸಿಕೊಡುತ್ತೇನೆಂದು 5 ಲಕ್ಷ ವಂಚನೆ
ಟೈಮಿಂಗ್ ಕಾರಣಕ್ಕೆ ನಿರ್ವಾಹಕನಿಗೆ ಹಲ್ಲೆ, ಬಸ್ ಬಂದ್ ಪ್ರತಿಭಟನೆ: ಈ ನಡುವೆ ನಿನ್ನೆ ಬಸ್ ನಿರ್ವಾಹಕನ ಮೇಲೆ ಯುವಕರ ತಂಡದಿಂದ ಹಲ್ಲೆ ನಡೆದ ಘಟನೆ ಮಂಗಳೂರು ಹೊರವಲಯದ ಕಣ್ಣೂರು ಎಂಬಲ್ಲಿ ನಡೆದಿದೆ. ನಿನ್ನೆ ರಾತ್ರಿ ವೇಳೆ ಬಸ್ ನಿಲ್ಲಿಸದ್ದಕ್ಕೆ ಚಾಲಕನ ಎಳೆದು ಹಾಕಿ ಹಲ್ಲೆ ನಡೆಸಿದ ಆರೋಪ ವ್ಯಕ್ತವಾಗಿದ್ದು, ಕಣ್ಣೂರು ಬಳಿ ಬಸ್ ನಿಲ್ಲಿಸದ್ದಕ್ಕೆ ಎಸ್.ಕೆ.ಟ್ರಾವೆಲ್ ಹೆಸರಿನ ಬಸ್ ನಿರ್ವಾಹಕ ಯಶವಂತ್ ಮೇಲೆ ಹಲ್ಲೆಯಾಗಿದೆ. ಗಂಭೀರ ಗಾಯಗೊಂಡ ನಿರ್ವಾಹಕ ಯಶವಂತ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಟೈಮಿಂಗ್ ಹಿನ್ನೆಲೆ ಕಣ್ಣೂರು ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸದ ಚಾಲಕ ಎದುರು ನಿಲ್ಲಿಸಿದ್ದ. ಹೀಗಾಗಿ ಬಸ್ ನಲ್ಲಿದ್ದ ಪ್ಯಾಸೆಂಜರ್ ಒಬ್ಬನಿಂದ ಹಲ್ಲೆ ಆರೋಪ ವ್ಯಕ್ತವಾಗಿದ್ದು, ಆ ಬಳಿಕ ಮತ್ತೆ ಹತ್ತಾರು ಜನ ನಿರ್ವಾಹಕನ ಎಳೆದು ಹಾಕಿ ಹಲ್ಲೆ ಆರೋಪಿಸಲಾಗಿದೆ. ಸದ್ಯ ಎರಡೂ ಕಡೆಯವರಿಂದ ಕಂಕನಾಡಿ ನಗರ ಠಾಣೆಗೆ ದೂರು ನೀಡಿದ್ದು, ಬಸ್ ನಿರ್ವಾಹಕನ ಮೇಲೆ ಹಲ್ಲೆ ಖಂಡಿಸಿ ಇಂದು ಅಡ್ಯಾರ್, ಕಣ್ಣೂರು ಭಾಗದ ಸಿಟಿ ಬಸ್ ಸಂಚಾರ ಸಂಪೂರ್ಣ ಬಂದ್ ಆಗಿತ್ತು.