Asianet Suvarna News Asianet Suvarna News

ಶಾಲೆ ಸದ್ಯಕ್ಕಿಲ್ಲ, ಕಾಲೇಜು ಶೀಘ್ರದಲ್ಲೇ ಪುನಾರಂಭ?

* ಮೊದಲ ಹಂತದಲ್ಲಿ ಪದವಿ, ಬಿಇ, ವೈದ್ಯಕೀಯ ಕಾಲೇಜು ಆರಂಭಕ್ಕೆ ರಾಜ್ಯ ಸರ್ಕಾರದ ಒಲವು

* ಕಾಲೇಜಲ್ಲೇ 18+ನವರಿಗೆ ಲಸಿಕೆ, ನಂತರ ತರಗತಿ

* 1ರಿಂದ 10ನೇ ಕ್ಲಾಸ್‌ ಆರಂಭಕ್ಕೆ ಹಿಂದೇಟು

College campuses to open after jabs for teachers students says Karnataka CM B S Yediyurappa pod
Author
Bangalore, First Published Jun 23, 2021, 7:12 AM IST

ಬೆಂಗಳೂರು(ಜೂ.23): ಕೂಡಲೇ ಶಾಲೆ-ಕಾಲೇಜು ಆರಂಭಿಸುವಂತೆ ತಜ್ಞರ ಸಮಿತಿ ಶಿಫಾರಸು ಮಾಡಿದ್ದರೂ ರಾಜ್ಯ ಸರ್ಕಾರ ಮೊದಲಿಗೆ ಕಾಲೇಜುಗಳನ್ನು ಮಾತ್ರ ಆರಂಭಿಸುವ ಚಿಂತನೆ ಹೊಂದಿದೆ. ಅಂದರೆ, ಸದ್ಯಕ್ಕೆ 1ರಿಂದ 10ನೇ ತರಗತಿವರೆಗಿನ ಶಾಲೆ ಆರಂಭಕ್ಕೆ ಕೈ ಹಾಕುವ ಸಾಧ್ಯತೆಯಿಲ್ಲ.

ಡಾ| ದೇವಿಶೆಟ್ಟಿನೇತೃತ್ವದ ತಜ್ಞರ ಸಮಿತಿ ಶೀಘ್ರ ಶಾಲೆ-ಕಾಲೇಜು ಆರಂಭಕ್ಕೆ ಸಲಹೆ ನೀಡಿದೆ. ಆದರೆ, ಉನ್ನತ ಶಿಕ್ಷಣ ಇಲಾಖೆ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಮೂಲಗಳ ಪ್ರಕಾರ, ಮೊದಲ ಹಂತವಾಗಿ ಪದವಿ, ಎಂಜಿನಿಯರಿಂಗ್‌, ವೈದ್ಯಕೀಯ ಕಾಲೇಜುಗಳ ಆರಂಭಕ್ಕೆ ಮಾತ್ರ ಅವಕಾಶ ನೀಡಲು ಸರ್ಕಾರ ಚಿಂತನೆ ನಡೆಸಿದೆ.

ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ, 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಅವಕಾಶವಿದೆ. ಹಾಗಾಗಿ ಪದವಿ ಮತ್ತು ಮೇಲ್ಪಟ್ಟಮಕ್ಕಳೆಲ್ಲರೂ 18 ವರ್ಷ ದಾಟಿದವರಾಗಿದ್ದಾರೆ. ಅವರಿಗೆ ಕಾಲೇಜು ಹಂತದಲ್ಲೇ ಲಸಿಕೆ ನೀಡುವ ಅಭಿಯಾನ ಆರಂಭಿಸಿ ಭೌತಿಕ ತರಗತಿಗಳನ್ನೂ ಆರಂಭಿಸುವ ಚಿಂತನೆ ಸರ್ಕಾರದ ಮಟ್ಟದಲ್ಲಿದೆ ಎಂದು ತಿಳಿದು ಬಂದಿದೆ.

ಈ ಕಾಲೇಜುಗಳ ಆರಂಭದ ಬಳಿಕ ಕೋವಿಡ್‌ ಮತ್ತಷ್ಟುತಹಬಂದಿಗೆ ಬಂದರೆ ಮಾತ್ರ ಪದವಿ ಪೂರ್ವ ಕಾಲೇಜುಗಳನ್ನು ಆರಂಭಿಸುವ ಆಲೋಚನೆ ಸರ್ಕಾರದ್ದಾಗಿದೆ. ಆದರೆ, 1ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ ಶಾಲೆ ಆರಂಭಿಸುವ ಆತುರದ ನಿರ್ಧಾರ ತೆಗೆದುಕೊಳ್ಳದಿರಲು ತೀರ್ಮಾನಿಸಿದೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.

ವಿದೇಶಗಳಂತೆ ಭಾರತದಲ್ಲೂ 12 ವರ್ಷ ಮೇಲ್ಪಟ್ಟಮಕ್ಕಳಿಗೆ ಲಸಿಕೆ ನೀಡಲು ಕೇಂದ್ರ ಸರ್ಕಾರದಿಂದ ಅನುಮತಿ ದೊರೆತರೆ ಆ ಮಕ್ಕಳಿಗೂ ಲಸಿಕೆ ನೀಡಿಕೆ ಆರಂಭಿಸಿ ಹಂತ ಹಂತವಾಗಿ ಬರುವ ದಿನಗಳಲ್ಲಿ ಶಾಲೆ ಆರಂಭಿಸುವ ಕುರಿತು ಸರ್ಕಾರದಲ್ಲಿ ಗಂಭೀರ ಚರ್ಚೆಗಳು ನಡೆದಿವೆ. ಆದರೆ, ಅಲ್ಲಿಯವರೆಗಂತೂ ಸಣ್ಣ ಮಕ್ಕಳಿಗೆ ಭೌತಿಕವಾಗಿ ಶಾಲೆ ಆರಂಭಿಸಬಾರದೆಂಬ ಆಲೋಚನೆ ಸರ್ಕಾರದ್ದಾಗಿದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ಚಿಂತನೆ ಏನು?

- 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಅವಕಾಶವಿದೆ

- ಕಾಲೇಜಿಗೆ ಹೋಗುವವರೆಲ್ಲ 18 ವರ್ಷ ಮೇಲ್ಪಟ್ಟವರು

- ಅವರಿಗೆ ಕಾಲೇಜಿನಲ್ಲೇ ಲಸಿಕೆ ನೀಡಿ ತರಗತಿ ಆರಂಭಿಸಬಹುದು

- ನಂತರ ಕೋವಿಡ್‌ ಕಮ್ಮಿಯಾದರೆ ಪಿಯುಸಿ ಆರಂಭಿಸಬಹುದು

- 12 ವರ್ಷ ಮೇಲ್ಪಟ್ಟವರಿಗೂ ಲಸಿಕೆ ಬಂದರೆ ಹೈಸ್ಕೂಲ್‌ ಆರಂಭ

ಹಂತ ಹಂತವಾಗಿ ಆರಂಭಕ್ಕೆ ಚಿಂತನೆ

ಡಾ| ದೇವಿಶೆಟ್ಟಿಅವರ ನೇತೃತ್ವದ ಸಮಿತಿಯು 3ನೇ ಅಲೆ ತಡೆಗೆ ಹಲವು ಶಿಫಾರಸುಗಳ ಮಧ್ಯಂತರ ವರದಿ ಸಲ್ಲಿಸಿದೆ. ಶಾಲಾ- ಕಾಲೇಜುಗಳನ್ನು ಹಂತ ಹಂತವಾಗಿ ಆರಂಭಿಸಲು ಕೂಡ ಸಲಹೆ ನೀಡಿದೆ. 18 ವಯಸ್ಸಿನ ಮೇಲಿನ ಮಕ್ಕಳಿಗೆ ಲಸಿಕೆ ನೀಡುವ ವ್ಯವಸ್ಥೆ ಮಾಡಿ ಹಂತ ಹಂತವಾಗಿ ಶಾಲೆ-ಕಾಲೇಜುಗಳನ್ನು ಪ್ರಾರಂಭಿಸುವ ಚಿಂತನೆ ನಡೆಸಲಾಗಿದೆ.

- ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

Follow Us:
Download App:
  • android
  • ios