ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ದೇಶದ 15 ರಾಜ್ಯಗಳಲ್ಲಿ ಮೇ ವರೆಗೆ ತಾಪಮಾನ ಹೆಚ್ಚಾಗಲಿದೆ. ಕರಾವಳಿ ಕರ್ನಾಟಕದಲ್ಲಿ ಈಗಾಗಲೇ ಬಿಸಿಲಿನ ತಾಪ ಹೆಚ್ಚಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಅತಿ ಹೆಚ್ಚು, 40.1°C ತಾಪಮಾನ ದಾಖಲಾಗಿದೆ. ಮಾರ್ಚ್ 1 ಮತ್ತು 2 ರಂದು ಕರಾವಳಿ ಕರ್ನಾಟಕದಲ್ಲಿ ಬಿಸಿಗಾಳಿಯ ಎಚ್ಚರಿಕೆ ನೀಡಲಾಗಿದೆ. 2025ರ ಫೆಬ್ರವರಿ ತಿಂಗಳು ಅತಿ ಬಿಸಿಯಾದ ತಿಂಗಳು ಎಂದು ವರದಿಯಾಗಿದೆ.

ಕಳೆದ ಫ್ರೆಬ್ರವರಿಯಲ್ಲೇ ಈ ವರ್ಷ ರಣಭೀಕರ ಬಿಸಿಲು ಈ ಭೂಮಿಯನ್ನು ಸುಡಲಿದೆ ಎಂದು ವರದಿ ಹೇಳಿತ್ತು. ಇದರ ಬ್ಎನ್ನಲ್ಲೇ ದೇಶದಲ್ಲಿ ಬಿಸಿಲಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗುತ್ತಿದೆ. ದೇಶದ 15 ರಾಜ್ಯಗಳು ಮೇವರೆಗೆ ಅತಿಯಾದ ತಾಪಮಾನದಿಂದ ವಿಪರೀತವಾಗಿ ಬಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಉಷ್ಣ ಅಲೆಯ ಪರಿಣಾಮ ಬೆಳೆ ಮತ್ತು ಜನ, ಜಾನುವಾರುಗಳ ಮೇಲೆ ಗಂಭೀರ ಪರಿಣಾಮ ಬೀಳಲಿದೆ ಎಂದು ಕೂಡ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಇದರ ಮಧ್ಯೆ ಕರಾವಳಿ ಕರ್ನಾಟಕದ ಭಾಗದಲ್ಲಿ ಈಗಾಗಲೇ ಬಿಸಿಲ ಝಳಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಸಿ ಮತ್ತು ಆರ್ದ್ರತೆಯ ವಾತಾವರಣ ಮುಂದುವರೆದಿದ್ದು, ಪ್ರದೇಶದಾದ್ಯಂತ ತಾಪಮಾನ ಏರುತ್ತಿದೆ. 

 ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಪ್ರಕಾರ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಫೆಬ್ರವರಿ 28 ರಿಂದ ಮಾರ್ಚ್ 1 ರವರೆಗೆ ಬೆಳಿಗ್ಗೆ 8.30 ರ ನಡುವೆ ರಾಜ್ಯದಲ್ಲಿ ಅತಿ ಹೆಚ್ಚು ಗರಿಷ್ಠ ತಾಪಮಾನ 40.1°C ದಾಖಲಾಗಿದೆ. ಬೆಳ್ತಂಗಡಿ ತಾಲೂಕಿನ ಕೊಕ್ಕಡದಲ್ಲಿ ಕೂಡ ಗುರುವಾರ 40.4 ಡಿಗ್ರಿ ಸೆಲ್ಸಿಯಸ್‌ ಬಿಸಿಲಿನ ತಾಪ ದಾಖಲಾಗಿತ್ತು.

ಈ ಸಲದ ಬೇಸಿಗೆ ರಣಭೀಕರ: ಉ.ಕರ್ನಾಟಕಕ್ಕೆ ಈ ಬಾರಿ ಸುಡುಬಿಸಿಲು, ಉಷ್ಣ ಅಲೆ

ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಹಲವಾರು ಸ್ಥಳಗಳಲ್ಲಿಯೂ ತೀವ್ರ ತಾಪಮಾನ ದಾಖಲಾಗಿದೆ. ದಕ್ಷಿಣ ಕನ್ನಡ, ಪಾಣೆಮಂಗಳೂರು (ಬಂಟ್ವಾಳ) 39.1°C, ಉಪ್ಪಿನಂಗಡಿ 39.5°C ಮತ್ತು ಕಡಬ 39°C ದಾಖಲಾಗಿದೆ. ಅದೇ ರೀತಿ, ಉತ್ತರ ಕನ್ನಡ ಜಿಲ್ಲೆಯಲ್ಲಿ, ಸಾವಂತವಾಡ (ಕಾರವಾರ) 39.9°C, ಮಾವಿನಕುರ್ವೆ (ಹೊನ್ನಾವರ) 39.5°C ಮತ್ತು ಘಡಸಾಯ (ಕಾರವಾರ) 39.8°C ಗರಿಷ್ಠ ತಾಪಮಾನವನ್ನು ದಾಖಲಾಗಿದೆ.

ದಕ್ಷಿಣ ಕನ್ನಡದ ನಾಲ್ಕು ಸ್ಥಳಗಳಲ್ಲಿ ಮತ್ತು ಉತ್ತರ ಕನ್ನಡದ ಮೂರು ಸ್ಥಳಗಳಲ್ಲಿ KSNDMC (ಪ್ರಾಕೃತಿಕ ವಿಕೋಪ ಮಾನಿಟರಿಂಗ್‌ ಸೆಂಟರ್‌) ಪ್ರಕಾರ 39°C ಗಿಂತ ಹೆಚ್ಚಿನ ತಾಪಮಾನವನ್ನು ದಾಖಲಿಸಿದೆ. ಆದಾಗ್ಯೂ, ರಾಜ್ಯಾದ್ಯಂತ ಗರಿಷ್ಠ ತಾಪಮಾನವು ಸಾಮಾನ್ಯಕ್ಕೆ (-1.5°C ನಿಂದ 1.5°C) ಹತ್ತಿರದಲ್ಲಿದೆ.

ಮಾರ್ಚ್ 1 ಮತ್ತು 2 ರಂದು ಕರಾವಳಿ ಕರ್ನಾಟಕದಲ್ಲಿ ಬಿಸಿ ಅಲೆಯ ಎಚ್ಚರಿಕೆ ನೀಡಿದ ಭಾರತ ಹವಾಮಾನ ಇಲಾಖೆ ಮಾರ್ಚ್ 3 ರಂದು ಬಿಸಿ ಮತ್ತು ಆರ್ದ್ರ ವಾತಾವರಣ ಮುಂದುವರಿಯಲಿದೆ ಎಂದು ವರದಿ ನೀಡಿದೆ.

ಸೆಖೆಯಿಂದ ಬೆವರುತ್ತಲೇ ಇರುವ ಕರಾವಳಿಗೆ ಎರಡು ದಿನ ಬಿಸಿ ಗಾಳಿ ಭೀತಿ: ಹವಾಮಾನ ಇಲಾಖೆ

ಸಾಪೇಕ್ಷ ಆರ್ದ್ರತೆ 40-50% ಮತ್ತು ಗರಿಷ್ಠ ಗಾಳಿಯ ಉಷ್ಣತೆಯು 37-38°C ನಡುವೆ ಇರುವುದರಿಂದ, ಮಾನವ ದೇಹಕ್ಕೆ ಗ್ರಹಿಕೆಯ ತಾಪಮಾನವು 40-50°C ನಡುವೆ ಇರಬೇಕು. ಇದೀಗ ಬಿಸಿಲ ಝಳ ದೇಹದ ಅಸ್ವಸ್ಥತೆಯ ಮಟ್ಟವನ್ನು ಗಮನಾರ್ಹವಾಗಿ ಏರಿಕೆಯತ್ತ ಕೊಂಡೊಯ್ಯಲಿದೆ.

ಮುಂದಿನ ಐದು ದಿನಗಳವರೆಗೆ ದಕ್ಷಿಣ ಒಳನಾಡಿನಾದ್ಯಂತ ಗರಿಷ್ಠ ಮತ್ತು ಕನಿಷ್ಠ ತಾಪಮಾನದಲ್ಲಿ ಯಾವುದೇ ಪ್ರಮುಖ ಬದಲಾವಣೆಗಳಿಲ್ಲ ಎಂದು ಐಎಂಡಿ ವರದಿ ತಿಳಿಸಿದ್ದು. ಕರ್ನಾಟಕದ ಉತ್ತರ ಒಳನಾಡಿನಲ್ಲಿ ಮುಂದಿನ ಮೂರು ದಿನಗಳವರೆಗೆ ತಾಪಮಾನವು ಸ್ಥಿರವಾಗಿರುತ್ತದೆ. ಆ ಬಳಿಕ ಕ್ರಮೇಣ ಇಳಿಕೆಯಾಗುತ್ತದೆ ಎಂದಿದೆ. 

1901ರ ನಂತರದ ಫೆಬ್ರವರಿ 2025 ಅತ್ಯಂತ ಬಿಸಿಯಾದ ತಿಂಗಳು ಎಂದು ಐಎಂಡಿ ಗಮನಿಸಿದೆ. ಸರಾಸರಿ ತಾಪಮಾನವು 20.7 ° C ಗೆ ಹೋಲಿಸಿದರೆ 22.04 ° C ನಲ್ಲಿ ದಾಖಲಾಗಿದೆ. ಇದು 1901 ರ ನಂತರದ ಎರಡನೇ ಅತಿ ಹೆಚ್ಚು ಗರಿಷ್ಠ ತಾಪಮಾನ ಮತ್ತು ಕನಿಷ್ಠ ತಾಪಮಾನ ಎಂದು ಐಎಂಡಿ ಹೇಳಿದೆ.

ಜನವರಿ ಮತ್ತು ಫೆಬ್ರವರಿ ನಡುವೆ ದೇಶದಲ್ಲಿ ಶೇ. 59 ರಷ್ಟು ಮಳೆ ಕೊರತೆ ದಾಖಲಾಗಿದೆ. ಮಧ್ಯ ಭಾರತದಲ್ಲಿ ಶೇ. 89 ರಷ್ಟು ಮಳೆ ಕೊರತೆಯಿದ್ದರೆ, ವಾಯುವ್ಯ ಭಾರತದಲ್ಲಿ ಶೇ. 64 ರಷ್ಟು ಮಳೆ ಕೊರತೆ ಕಂಡುಬಂದಿದೆ.

ಈಶಾನ್ಯ ಭಾರತ, ತೀವ್ರ ಉತ್ತರ ಭಾರತ ಮತ್ತು ಪರ್ಯಾಯ ದ್ವೀಪದ ನೈಋತ್ಯ ಮತ್ತು ದಕ್ಷಿಣ ಭಾಗಗಳನ್ನು ಹೊರತುಪಡಿಸಿ ದೇಶದ ಹೆಚ್ಚಿನ ಭಾಗಗಳಲ್ಲಿ ಮಾರ್ಚ್ ನಿಂದ ಮೇ 2025 ರವರೆಗೆ ತಾಪಮಾನ ಮತ್ತು ಶಾಖದ ಅಲೆ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಇರಲಿದ್ದು, ಕೃಷಿ, ಜನ-ಜಾನುವಾರುಗಳಿಗೆ ತೊಂದರೆ ಆಗಬಹುದು ಎಂದು ವರದಿ ಹೇಳಿದೆ.