ಬೆಂಗಳೂರು[ಫೆ.13]: ತಿರುಪತಿ ದೇವಾಲಯದ ಬಳಿ ರಾಜ್ಯದ ಭಕ್ತರಿಗೆ ಅನುಕೂಲವಾಗಲು ನಿರ್ಮಿಸಲುದ್ದೇಶಿಸಿರುವ ವಸತಿ ಗೃಹಗಳ ಅಭಿವೃದ್ಧಿ ಯೋಜನಾ ವರದಿಯನ್ನು ತಿರುಪತಿ ತಿರುಮಲ ದೇವಾಲಯ ಮಂಡಳಿಗೆ ಸಲ್ಲಿಸಲಾಗಿದ್ದು, ವರದಿಗೆ ಕಾನೂನಾತ್ಮಕ ಅನುಮೋದನೆ ನೀಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಆಂಧ್ರಪ್ರದೇಶ ಸರ್ಕಾರವನ್ನು ಕೋರಿದ್ದಾರೆ.

ಈ ಸಂಬಂಧ ಯಡಿಯೂರಪ್ಪ ಅವರು ಇತ್ತೀಚೆಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್‌ಮೋಹನ್‌ ರೆಡ್ಡಿ ಅವರಿಗೆ ಪತ್ರ ಬರೆದಿದ್ದಾರೆ.

ಹಳೆಯ ಕಟ್ಟಡ, ವಸತಿ ಗೃಹಗಳ ಕಟ್ಟಡಗಳನ್ನು ನೆಲಸಮಗೊಳಿಸಿದ್ದು, ಅಲ್ಲಿ ಸುಸಜ್ಜಿತವಾದ ಕಟ್ಟಡ ನಿರ್ಮಿಸಲು ಮುಂದಾಗಿದೆ. ಕರ್ನಾಟಕ ರಾಜ್ಯ ಚಾರಿಟಿಯ ಉಸ್ತುವಾರಿಯಲ್ಲಿಯೇ ಇದು ನಡೆದಿದೆ. ಆದರೆ, ಖಾಸಗಿ ವ್ಯಕ್ತಿಯೊಬ್ಬರು ಇದನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಲಯವು ಸಹ ವಿಚಾರಣೆ ನಡೆಸಿ ಅರ್ಜಿಯನ್ನು ತಿರಸ್ಕರಿಸಿದೆ. ಸುಸಜ್ಜಿತ ಕಟ್ಟಡ ನಿರ್ಮಾಣ ಸಂಬಂಧ ರಾಜ್ಯ ಸರ್ಕಾರ ಮತ್ತು ಟಿಟಿಡಿ ನಡುವೆ ಒಪ್ಪಂದ ಕೂಡ ಮಾಡಿಕೊಳ್ಳಲಾಗಿದೆ. ರಾಜ್ಯದ ಭಕ್ತರ ಅನುಕೂಲಕ್ಕಾಗಿ ನಿರ್ಮಾಣ ಮಾಡಲು ತೀರ್ಮಾನಿಸಿರುವ ಕಟ್ಟಡಗಳಿಗೆ ಅನುಮೋದನೆ ನೀಡಬೇಕು ಎಂದು ಮನವಿ ಮಾಡಲಾಗಿದೆ.

ಮೈಸೂರು ಮಹಾರಾಜರು ಸಹ ತಿರುಪತಿ ದೇವಾಲದ ಆವರಣದಲ್ಲಿ ನಾಡಿನ ಭಕ್ತರ ಅನುಕೂಲಕ್ಕಾಗಿ ಕಲ್ಯಾಣ ಮಂಟಪ ಮತ್ತು ವಸತಿ ಗೃಹಗಳನ್ನು ನಿರ್ಮಿಸಿದ್ದರು. ಆಗಿನಿಂದಲೂ ರಾಜ್ಯ ಮತ್ತು ಟಿಟಿಡಿ ನಡುವೆ ಅವಿನಾಭಾವ ಸಂಬಂಧವಿದ್ದು, ಅದನ್ನು ಮುಂದುವರಿಸಿಕೊಂಡು ಹೋಗಲಾಗುತ್ತಿದೆ ಎಂದು ತಿಳಿಸಿದ್ದಾರೆ.