ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ವಿಚಾರ ಇದೀಗ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಬಳಿ ತಲುಪಿದೆ. ಯೋಜನೆ ಅನುಷ್ಠಾನ ಸಂಬಂಧ ಮುಖ್ಯಮಂತ್ರಿಗಳೇ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಬಿಎಂಟಿಸಿ ಮೂಲಗಳು ತಿಳಿಸಿವೆ.
ಬೆಂಗಳೂರು : ಬೆಂಗಳೂರು ಮಹಾನಗರ ಸಾರಿಗೆ ನಿಗಮ(ಬಿಎಂಟಿಸಿ)ದ ಎಲೆಕ್ಟ್ರಿಕ್ ಬಸ್ ವಿಚಾರ ಇದೀಗ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಂಗಳ ತಲುಪಿದೆ. ಯೋಜನೆ ಅನುಷ್ಠಾನ ಸಂಬಂಧ ಮುಖ್ಯಮಂತ್ರಿಗಳೇ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಬಿಎಂಟಿಸಿ ಮೂಲಗಳು ತಿಳಿಸಿವೆ.
ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬಿಎಂಟಿಸಿಯು ಕೇಂದ್ರದ ಫಾಸ್ಟರ್ ಅಡೋಪ್ಷನ್ ಆ್ಯಂಡ್ ಮಾನ್ಯುಫಾಕ್ಚರಿಂಗ್ ಆಫ್ ಎಲೆಕ್ಟ್ರಿಕ್ ವೆಹಿಕಲ್ಸ್(ಫೇಮ್) ಯೋಜನೆಯ ಅನುದಾನ ಬಳಸಿಕೊಂಡು ಗುತ್ತಿಗೆ ಆಧಾರದಡಿ 150 ಎಲೆಕ್ಟ್ರಿಕ್ ಬಸ್ ಪಡೆಯುವ ಯೋಜನೆ ರೂಪಿಸಿತ್ತು. ಈ ಸಂಬಂಧ ಕರೆದಿದ್ದ ಟೆಂಡರ್‌ನಲ್ಲಿ ಹೈದರಾಬಾದ್ ಮೂಲದ ಗೋಲ್ಡ್ ಸ್ಟೋನ್ ಕಂಪನಿ ಅತಿ ಕಡಿಮೆ ದರ ಬಿಡ್ ಮಾಡಿ ಗುತ್ತಿಗೆ ಪಡೆದುಕೊಂಡಿತ್ತು. ಹೊಸ ಸರ್ಕಾರ ಬಂದ ನಂತರ ಯೋಜನೆ ನೆನೆಗುದಿಗೆ ಬಿದ್ದಿತ್ತು.
ಅಧಿಕಾರಿಗಳು, ಸಚಿವರ ಭಿನ್ನಾಭಿಪ್ರಾಯ:
ಗುತ್ತಿಗೆ ಆಧಾರದಡಿ ಎಲೆಕ್ಟ್ರಿಕ್ ಬಸ್ ಪಡೆಯುವ ಸಂಬಂಧ ಬಿಎಂಟಿಸಿ ಅಧಿಕಾರಿ ವರ್ಗ ಮತ್ತು ನೂತನ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ನಡುವೆ ಭಿನ್ನಾಭಿಪ್ರಾಯ ಮೂಡಿದ ಪರಿಣಾಮ ಯೋಜನೆಗೆ ಹಿನ್ನಡೆಯಾಗಿತ್ತು. ಈ ನಡುವೆ ಸಾರಿಗೆ ಸಚಿವರು ನಿಗಮದ ಅಧಿಕಾರಿಗಳ ವಿರುದ್ಧ ಲಂಚದ ಆರೋಪ ಮಾಡಿದ್ದರು. ಇತ್ತೀಚೆಗೆ ಸಿಎಂ ನೇತೃತ್ವದಲ್ಲಿ ನಡೆದ ಸಾರಿಗೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳು ಮತ್ತು ಸಾರಿಗೆ ಸಚಿವರ ನಡುವಿನ ಭಿನ್ನಾಭಿಪ್ರಾಯ ಬಹಿರಂಗವಾಗಿತ್ತು.
ಈ ವೇಳೆ ಸಿಎಂ ಕುಮಾರಸ್ವಾಮಿ ಅವರು ಬಿಎಂಟಿಸಿಯ ವ್ಯವಸ್ಥಾಪಕ ನಿರ್ದೇಶಕ ವಿ.ಪೊನ್ನುರಾಜ್ ಪರ ಮಾತನಾಡಿದ್ದರು. ಎಲೆಕ್ಟ್ರಿಕ್ ಬಸ್ ವಿಚಾರವಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ನೇತೃತ್ವದಲ್ಲಿ ಸಮಿತಿ ರಚಿಸಿ, ವರದಿ ಸಲ್ಲಿಸುವಂತೆ ಸೂಚಿಸಿದ್ದರು. ಇದೀಗ ಆ ಸಮಿತಿ ಚರ್ಚೆಯ ವಿವರ ಹಾಗೂ ಗುತ್ತಿಗೆ ಆಧಾರದಡಿ ಎಲೆಕ್ಟ್ರಿಕ್ ಬಸ್ ಪಡೆಯುವ ಕಡತಗಳನ್ನು ಸಾರಿಗೆ ಇಲಾಖೆಗೆ ಸಲ್ಲಿಸಿದೆ. ಇದನ್ನು ಆಧರಿಸಿ ಸಿಎಂ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.
