ಶಕ್ತಿ ಯೋಜನೆಯಿಂದ ನಷ್ಟ: ಖಾಸಗಿ ಸಾರಿಗೆ ಸಂಸ್ಥೆಗಳ ಜತೆ ನಾಡಿದ್ದು ಸಿಎಂ ಸಭೆ
ಶಕ್ತಿ ಯೋಜನೆ ಜಾರಿ ನಂತರ ಖಾಸಗಿ ಬಸ್, ಆಟೋ ಮತ್ತು ಕ್ಯಾಬ್‌ಗಳಿಗೆ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಅದರಿಂದ ಖಾಸಗಿ ಸಾರಿಗೆ ಉದ್ಯಮ ನಷ್ಟದಲ್ಲಿದ್ದು, ಪರಿಹಾರ ನೀಡುವಂತೆ ಸಾರಿಗೆ ಸಂಘಟನೆಗಳು ಆಗ್ರಹಿಸಿದ್ದವು. ಜತೆಗೆ ಸಾರಿಗೆ ಬಂದ್ ಮಾಡುವ ಎಚ್ಚರಿಕೆಯನ್ನೂ ನೀಡಿದ್ದವು. ಬಂದ್‌ಗೆ ಸಂಬಂಧಿಸಿದಂತೆ ಹಲವು ಗಡುವುಗಳನ್ನು ನೀಡಲಾಗಿತ್ತು.
ಬೆಂಗಳೂರು(ಆ.19): ಶಕ್ತಿ ಯೋಜನೆ ಸೇರಿದಂತೆ ವಿವಿಧ ಕಾರಣಗಳಿಂದ ಖಾಸಗಿ ಸಾರಿಗೆ ಕ್ಷೇತ್ರಕ್ಕಾಗುತ್ತಿರುವ ಸಮಸ್ಯೆಗಳ ಕುರಿತಂತೆ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಸಾರಿಗೆ ಸಂಘಟನೆಗಳ ಮುಖಂಡರೊಂದಿಗೆ ಸಭೆ ನಡೆಸಲಿದ್ದಾರೆ.
ಶಕ್ತಿ ಯೋಜನೆ ಜಾರಿ ನಂತರ ಖಾಸಗಿ ಬಸ್, ಆಟೋ ಮತ್ತು ಕ್ಯಾಬ್‌ಗಳಿಗೆ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಅದರಿಂದ ಖಾಸಗಿ ಸಾರಿಗೆ ಉದ್ಯಮ ನಷ್ಟದಲ್ಲಿದ್ದು, ಪರಿಹಾರ ನೀಡುವಂತೆ ಸಾರಿಗೆ ಸಂಘಟನೆಗಳು ಆಗ್ರಹಿಸಿದ್ದವು. ಜತೆಗೆ ಸಾರಿಗೆ ಬಂದ್ ಮಾಡುವ ಎಚ್ಚರಿಕೆಯನ್ನೂ ನೀಡಿದ್ದವು. ಬಂದ್‌ಗೆ ಸಂಬಂಧಿಸಿದಂತೆ ಹಲವು ಗಡುವುಗಳನ್ನು ನೀಡಲಾಗಿತ್ತು. ಅಂತಿಮವಾಗಿ ಆಗಸ್ಟ್ 18ರೊಳಗೆ ಪರಿಹಾರ ಕ್ರಮಗಳನ್ನು ಪ್ರಕಟಿಸುವಂತೆ ಸಾರಿಗೆ ಸಂಘಟನೆಗಳು ಸರ್ಕಾರಕ್ಕೆ ಕೋರಿದ್ದವು. ಅದರಂತೆ ಸಿದ್ದರಾಮಯ್ಯ ಅವರು ಖಾಸಗಿ ಸಾರಿಗೆ ಉದ್ಯಮಕ್ಕಾಗಿರುವ ನಷ್ಟದ ಬಗ್ಗೆ ವರದಿ ನೀಡುವಂತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದರು. ಜತೆಗೆ ಆಗಸ್ಟ್ 21ರಂದು ಸಾರಿಗೆ ಸಂಘಟನೆಗಳ ಮುಖಂಡರೊಂದಿಗೆ ಸಭೆ ನಡೆಸುವುದಾಗಿ ತಿಳಿಸಿದ್ದರು. ಇದರಂತೆ ಸಭೆ ನಡೆಯಲಿದೆ.
ಫ್ರೀ ಬಸ್ ಯೋಜನೆ ಉದ್ದೇಶ ಈಡೇರಿದೆ: ಸಿಎಂ ಸಿದ್ದರಾಮಯ್ಯ ಸಂತಸ
ಸಿಎಂ ನೀಡಿದ್ದ ಭರವಸೆ ಹಿನ್ನೆಲೆಯಲ್ಲಿ ಆಗಸ್ಟ್ 18ರಂದು ನಡೆಸಬೇಕಿದ್ದ ಸಾರಿಗೆ ಬಂದ್ ಅನ್ನು ಸಂಘಟನೆಗಳು ಕೈಬಿಟ್ಟಿದ್ದವು. ಇದೀಗ ಆಗಸ್ಟ್ 21ರಂದು ಸೋಮವಾರ ನಡೆಯಲಿರುವ ಸಭೆಯಲ್ಲಿ ಸಿದ್ದರಾಮಯ್ಯ ನೀಡಲಿರುವ ಪರಿಹಾರದ ಮೇಲೆ ಸಾರಿಗೆ ಬಂದ್ ಕುರಿತು ನಿರ್ಧಾರ ತೆಗೆದುಕೊಳ್ಳಲು ಸಂಘಟನೆ ಮುಖಂಡರು ನಿರ್ಧರಿಸಿದ್ದಾರೆ.