ಬಿಜೆಪಿ ನಾಯಕರು ಕೇಳುತ್ತಿರುವ ಭಾರತೀಯ ಆಹಾರ ನಿಗಮದ ಒಪ್ಪಿಗೆ ಪತ್ರ ಇಲ್ಲಿದೆ’ ಎಂದು ಹೇಳಿ ಎಫ್‌ಸಿಐ ರಾಜ್ಯ ಸರ್ಕಾರಕ್ಕೆ ಬರೆದಿದ್ದ ಎರಡೂ ಪತ್ರಗಳನ್ನೂ ಟ್ವೀಟರ್‌ನಲ್ಲಿ ಹಂಚಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ 

ಬೆಂಗಳೂರು(ಜೂ.17):  ಭಾರತೀಯ ಆಹಾರ ನಿಗಮವು ರಾಜ್ಯಕ್ಕೆ ಅಕ್ಕಿ ನೀಡುವುದಾಗಿ ಹೇಳಿದ್ದ ಒಪ್ಪಿಗೆ ಪತ್ರ (ಕಮಿಟ್‌ಮೆಂಟ್‌) ತೋರಿಸಲಿ ಎಂದು ಬಿಜೆಪಿಯ ಸಿ.ಟಿ. ರವಿ ಸವಾಲು ಹಾಕಿದ್ದಾರೆ. ಇಂತಹ ಬೇಜವಾಬ್ದಾರಿ ಹೇಳಿಕೆಗಳಿಂದಲೇ ರಾಜ್ಯದ ಪ್ರಜ್ಞಾವಂತ ಮತದಾರರು ಇಂತಹ ನಾಯಕರನ್ನು ಸೋಲಿಸಿ ಮನೆಗೆ ಕಳುಹಿಸಿರುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ‘ಬಿಜೆಪಿ ನಾಯಕರು ಕೇಳುತ್ತಿರುವ ಭಾರತೀಯ ಆಹಾರ ನಿಗಮದ ಒಪ್ಪಿಗೆ ಪತ್ರ ಇಲ್ಲಿದೆ’ ಎಂದು ಹೇಳಿ ಎಫ್‌ಸಿಐ ರಾಜ್ಯ ಸರ್ಕಾರಕ್ಕೆ ಬರೆದಿದ್ದ ಎರಡೂ ಪತ್ರಗಳನ್ನೂ ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದಾರೆ.

‘ಬೇಜವಾಬ್ದಾರಿ ಹೇಳಿಕೆ, ಸುಳ್ಳು ಮತ್ತು ಅಪಪ್ರಚಾರದ ಗೀಳಿಗಾಗಿಯೇ ರಾಜ್ಯದ ಪ್ರಜ್ಞಾವಂತ ಮತದಾರರು ಬಿಜೆಪಿಯ ಇಂತಹ ನಾಯಕರನ್ನು ಸೋಲಿಸಿ ಮನೆಗೆ ಕಳುಹಿಸಿರುವುದು. ಸಿ.ಟಿ. ರವಿ ಮತ್ತಿತರ ಬಿಜೆಪಿ ನಾಯಕರು ಮೊದಲು ಕೇಂದ್ರ ಬಿಜೆಪಿ ಸರ್ಕಾರದ ಮೇಲೆ ಒತ್ತಡ ಹೇರಿ ಬಡವರ ಹಸಿವು ನೀಗಿಸುವ ಅನ್ನಭಾಗ್ಯ ಯೋಜನೆಗೆ ಬೇಕಾಗುವ ಅಕ್ಕಿ ಪೂರೈಸುವಂತೆ ಮಾಡಬೇಕು. ಅದನ್ನು ಬಿಟ್ಟು ಬಡವರ ಹೊಟ್ಟೆಗೆ ಹೊಡೆಯುವ ಕೇಂದ್ರ ಸರ್ಕಾರದ ಜನ ವಿರೋಧಿ ನಿಲುವನ್ನು ಬೆಂಬಲಿಸುವುದು ತರವಲ್ಲ’ ಎಂದು ಕಿಡಿ ಕಾರಿದರು.

ಕಾಂಗ್ರೆಸ್‌ನಿಂದ ಮುಂದುವರೆದ ದೋಖಾ ಸಿರೀಸ್: ಸರ್ಕಾರದ ವಿರುದ್ಧ ಮಾಜಿ ಸಿಎಂ ಬೊಮ್ಮಾಯಿ‌ ವಾಗ್ದಾಳಿ

ಪತ್ರದಲ್ಲಿ ಏನಿದೆ?:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೋಸ್ಟ್‌ ಮಾಡಿರುವ ಪತ್ರದಲ್ಲಿ ಭಾರತೀಯ ಆಹಾರ ನಿಗಮವು ರಾಜ್ಯಕ್ಕೆ ಮುಕ್ತ ಮಾರುಕಟ್ಟೆಆಧಾರದ ಮೇಲೆ 2.08 ಲಕ್ಷ ಟನ್‌ ಅಕ್ಕಿ ಮಾರಾಟ ಮಾಡಲು ಒಪ್ಪಿಗೆ ನೀಡಿದೆ. 3,400 ರು. ಪ್ರತಿ ಕ್ವಿಂಟಾಲ್‌ನಂತೆ ಹಾಗೂ ಪ್ರತಿ ಕೆ.ಜಿ.ಗೆ 2.60 ರು. ಸಾಗಣೆ ವೆಚ್ಚದಂತೆ ಮಾರಾಟ ಮಾಡಲಾಗುವುದು. ಪತ್ರ ವ್ಯವಹಾರದ 15 ದಿನಗಳೊಳಗಾಗಿ ಅಕ್ಕಿ ಪೂರೈಸುವುದಾಗಿ ಆಹಾರ ನಿಗಮ ಹೇಳಿದೆ. ಮತ್ತೊಂದು ಪತ್ರದಲ್ಲಿ 13 ಸಾವಿ​ರ ಟನ್‌ ಅಕ್ಕಿ ಪೂರೈಕೆಗೆ ಒಪ್ಪಿಗೆ ನೀಡಿರುವುದಾಗಿ ಹೇಳಲಾಗಿದೆ.