ಕೇಂದ್ರೀಯ ಭಂಡಾರ, ಎನ್‌ಸಿಸಿಎಫ್‌ನಂಥ ಸಂಸ್ಥೆಗಳಿಂದ ಖರೀದಿಗೆ ಯತ್ನ, ಅಲ್ಲೂ ಸಿಗದಿದ್ದರೆ ಛತ್ತೀಸ್‌ಗಢದಿಂದ ಖರೀದಿ, ನಾಳೆ ಅಂತಿಮ ನಿರ್ಧಾರ?
ಬೆಂಗಳೂರು(ಜೂ.18): ಅನ್ನಭಾಗ್ಯ ಹೆಚ್ಚುವರಿ ಅಕ್ಕಿ ಹೊಂದಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಶನಿವಾರ ಸಂಜೆ ಮಹತ್ವದ ಸಭೆ ನಡೆದಿದ್ದು, 2 ಆಯ್ಕೆಗಳ ಬಗ್ಗೆ ಸವಿಸ್ತಾರ ಚರ್ಚೆ ನಡೆದಿದೆ. ಎಫ್‌ಸಿಐ ಹೊರತುಪಡಿಸಿ ಉಳಿದ ಕೇಂದ್ರ ಸ್ವಾಮ್ಯದ ಸಂಸ್ಥೆಗಳ ಬಳಿ ಅಕ್ಕಿ ಖರೀದಿಸುವುದು ಮೊದಲ ಆಯ್ಕೆಯಾದರೆ, ಅನ್ಯ ರಾಜ್ಯಗಳ ಬಳಿ (ಬಹುಶಃ ಛತ್ತೀಸ್‌ಗಢ) ಖರೀದಿಸುವುದು 2ನೇ ಆಯ್ಕೆಯಾಗಿದೆ. ಈ ಬಗ್ಗೆ ಸೋಮವಾರದ ಒಳಗೆ ಒಂದನ್ನು ಅಂತಿಮಗೊಳಿಸಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಅನ್ಯರಾಜ್ಯಗಳ ಬಳಿ ಅಕ್ಕಿ ಖರೀದಿಸುವ ಬಗ್ಗೆ ನಿರ್ಧರಿಸುವ ಮೊದಲು, ಭಾರತೀಯ ಆಹಾರ ನಿಗಮ (ಎಫ್‌ಸಿಐ) ಹೊರತುಪಡಿಸಿ ಇರುವ ಕೇಂದ್ರ ಅಧೀನದ ಕೇಂದ್ರೀಯ ಭಂಡಾರ, ಎನ್‌ಸಿಸಿಎಫ್‌ಗಳಂತಹ ಸಂಸ್ಥೆಗಳ ಬಳಿ ಚರ್ಚಿಸಬೇಕು. ಇದರಿಂದ ಅಕ್ಕಿ ಖರೀದಿ ಬಗ್ಗೆ ಮುಂದೆ ಯಾವುದೇ ಆರೋಪಗಳು ಸರ್ಕಾರದ ಮೇಲೆ ಬರುವುದಿಲ್ಲ ಎಂಬ ಬಗ್ಗೆ ಚರ್ಚಿಸಲಾಗಿದೆ.
ಕಾಂಗ್ರೆಸ್ ಸುಳ್ಳಿನ ಸರ್ಕಾರ ನಡೆಸುತ್ತಿದ್ದು ‘ಅಕ್ಕಿ ಆರೋಪ’ ಸುಳ್ಳು: ಸಂಸದ ತೇಜಸ್ವಿ ಸೂರ್ಯ
ಒಂದು ವೇಳೆ ಕೇಂದ್ರದ ಯಾವುದೇ ಸಂಸ್ಥೆ ಅಥವಾ ಸಹಕಾರಿ ಸಂಸ್ಥೆಗಳು ಒಪ್ಪದಿದ್ದರೆ ಛತ್ತೀಸ್‌ಗಢದಲ್ಲಿ ಲಭ್ಯವಿರುವ 1.50 ಲಕ್ಷ ಟನ್ ಅಕ್ಕಿ ಖರೀದಿ ಸಂಬಂಧ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ವ್ಯವಹಾರ ನಡೆಸಲು ಸೂಚಿಸಲಾಗಿದೆ. ಅಕ್ಕಿ ಬೆಲೆ ಹಾಗೂ ಸಾಗಣೆ ವೆಚ್ಚ ಕಡಿಮೆ ಮಾಡುವ ಬಗ್ಗೆ ಮಾತುಕತೆ ನಡೆಸಲು ಸಭೆಯಲ್ಲಿ ನಿರ್ಧರಿಸಿರುವುದಾಗಿ ತಿಳಿದುಬಂದಿದೆ. ಈ ಎರಡು ಆಯ್ಕೆಗಳಲ್ಲಿ ಯಾವುದನ್ನು ಅಂತಿಮಗೊಳಿಸಬೇಕು ಎಂಬ ಬಗ್ಗೆ ಸೋಮವಾರದ ಒಳಗಾಗಿ ನಿರ್ಧರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಬೆಂಗಳೂರಿನ ಶಕ್ತಿ ಭವನ ಹಾಗೂ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಎರಡು ಹಂತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಕೆ.ಎಚ್. ಮುನಿಯಪ್ಪ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ನೇತೃತ್ವದಲ್ಲಿ ಸಭೆ ನಡೆಸಲಾಯಿತು.
2 ಮಾರ್ಗಗಳ ಬಗ್ಗೆ ಚರ್ಚೆ:
ಎರಡನೇ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎಚ್.ಮುನಿಯಪ್ಪ, ‘ಕೇಂದ್ರದ ಬಳಿ ಸಾಕಷ್ಟುದಾಸ್ತಾನು ಇದ್ದರೂ ರಾಜಕೀಯ ಕಾರಣಗಳಿಗಾಗಿ ರಾಜ್ಯಕ್ಕೆ ಅಕ್ಕಿ ನೀಡಲು ಒಪ್ಪುತ್ತಿಲ್ಲ. ಆದರೆ ನಾವು ಮುಕ್ತ ಮಾರುಕಟ್ಟೆಯಲ್ಲಿ ಖರೀದಿ ಮಾಡಲು ಸಿದ್ಧರಿಲ್ಲ. ಹೀಗಾಗಿ ನಮ್ಮ ಮುಂದೆ ಎರಡು ಆಯ್ಕೆಗಳನ್ನು ಇಟ್ಟುಕೊಂಡು ಸಭೆ ನಡೆಸಿದ್ದೇವೆ’ ಎಂದರು.
‘ಮೊದಲನೆಯಾದಾಗಿ ಕೇಂದ್ರ ಸ್ವಾಮ್ಯದ ಸಂಸ್ಥೆಗಳ ಜತೆ ಸಂಪರ್ಕದಲ್ಲಿದ್ದೇವೆ. ಎನ್‌ಸಿಸಿಎಫ್, ಕೇಂದ್ರ ಆಹಾರ ಭಂಡಾರ ಜತೆಗೂ ಮಾತನಾಡುವುದು ಮೊದಲ ಆಯ್ಕೆಯಾಗಿದೆ. ಎರಡನೆಯ ಆಯ್ಕೆಯೆಂದರೆ ಅನ್ಯ ರಾಜ್ಯಗಳೊಂದಿಗೆ ಅಕ್ಕಿ ಖರೀದಿಸುವುದು. ಈಗಾಗಲೇ ಛತ್ತೀಸ್‌ಗಢ, ತೆಲಂಗಾಣ ಹಾಗೂ ಆಂಧ್ರಪ್ರದೇಶದ ಜತೆ ಚರ್ಚಿಸಿದ್ದು, ಛತ್ತೀಸ್‌ಗಢದಲ್ಲಿ ಅಕ್ಕಿ ಸಂಗ್ರಹ ಇದೆ. ಅಕ್ಕಿಗೆ ಅಗತ್ಯ ಹಣಕಾಸನ್ನು ಮುಖ್ಯಮಂತ್ರಿಗಳು ಮೀಸಲಿಟ್ಟಿದ್ದಾರೆ. ಹೀಗಾಗಿ ಅಕ್ಕಿ ಪ್ರಮಾಣ ಹಾಗೂ ದರದ ಬಗ್ಗೆ ಛತ್ತೀಸ್‌ಗಢ ರಾಜ್ಯದ ಅಧಿಕಾರಿಗಳೊಂದಿಗೆ ಮುಖ್ಯ ಕಾರ್ಯದರ್ಶಿಗಳು ಪತ್ರ ವ್ಯವಹಾರ ನಡೆಸಲಿದ್ದಾರೆ’ ಎಂದು ಹೇಳಿದರು.
‘ಇನ್ನು ಎಲ್ಲಾ ರಾಜ್ಯಗಳೊಂದಿಗೆ ಮುಖ್ಯ ಕಾರ್ಯದರ್ಶಿಗಳೇ ಪತ್ರ ವ್ಯವಹಾರ ಮಾಡಲಿದ್ದಾರೆ. ನಾನು ಖುದ್ದಾಗಿ ಬೇರೆ ರಾಜ್ಯದ ಪ್ರವಾಸ ಮಾಡುವ ಅಗತ್ಯವಿಲ್ಲ. ಆದಷ್ಟು ಬೇಗ ಅಕ್ಕಿ ಕೊಡುವುದಷ್ಟೇ ನಮ್ಮ ಗುರಿ’ ಎಂದು ಹೇಳಿದರು.
‘ಅಕ್ಕಿ ಬದಲಿಗೆ ರಾಗಿ ಅಥವಾ ಜೋಳ ವಿತರಿಸುವ ಬಗ್ಗೆ ಕೇಳಿದ ಪ್ರಶ್ನೆಗೆ, 10 ಕೆ.ಜಿ. ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದೆವು. ಅದನ್ನು ಕೊಡಲು ಪ್ರಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಉಳಿದ ವಿಚಾರಗಳ ಬಗ್ಗೆ ಭಾನುವಾರ ಅಥವಾ ಸೋಮವಾರ ಅಂತಿಮ ನಿರ್ಧಾರ ತಿಳಿಸುತ್ತೇವೆ’ ಎಂದಷ್ಟೇ ಹೇಳಿದರು.
ಛತ್ತೀಸ್‌ಗಢದಲ್ಲಿ 1.50 ಲಕ್ಷ ಟನ್ ಅಕ್ಕಿ ಲಭ್ಯ: ಸಿಎಂ
ಅನ್ನಭಾಗ್ಯ ಯೋಜನೆಗೆ ಛತ್ತೀಸ್‌ಗಢ ರಾಜ್ಯದಲ್ಲಿ 1.50 ಲಕ್ಷ ಟನ್ ಅಕ್ಕಿ ಲಭ್ಯವಿದೆ. ಆದರೆ ಸಾರಿಗೆ ವೆಚ್ಚ ಹೆಚ್ಚಾಗಲಿದೆ. ತೆಲಂಗಾಣದ ಮುಖ್ಯಮಂತ್ರಿಗಳೊಂದಿಗೆ ಖುದ್ದಾಗಿ ಮಾತನಾಡಿದ್ದು, ಅಲ್ಲಿ ಅಕ್ಕಿ ಲಭ್ಯವಿಲ್ಲ ಎಂದು ತಿಳಿಸಿದ್ದಾರೆ. ಆಂಧ್ರಪ್ರದೇಶದವರೊಂದಿಗೆ ನಮ್ಮ ಮುಖ್ಯ ಕಾರ್ಯದರ್ಶಿಗಳು ಮಾತನಾಡುತ್ತಿದ್ದಾರೆ. ಛತ್ತೀಸ್‌ಗಢ ಸರ್ಕಾರದೊಂದಿಗೆ ಅಕ್ಕಿ ಬೆಲೆಯ ಬಗ್ಗೆಯೂ ಚರ್ಚಿಸಲಾಗುವುದು ಎಂದರು.
ಅನ್ನಭಾಗ್ಯ ಯೋಜನೆಗೆ ಮತ್ತೆ ಹಿನ್ನಡೆ: ಅಕ್ಕಿ ಸರಬರಾಜು ಸಾಧ್ಯವಿಲ್ಲವೆಂದ ತೆಲಂಗಾಣ ಸರ್ಕಾರ
ರಾಜ್ಯದಲ್ಲಿ ಸಿಕ್ಕರೆ ಅಕ್ಕಿ ಕೊಡಿಸಲಿ: ವಿಜಯೇಂದ್ರಗೆ ಟಾಂಗ್
‘ರಾಜ್ಯದಲ್ಲಿಯೇ ಅಕ್ಕಿ ಲಭ್ಯವಿದೆ. ಕಮಿಷನ್ ಅಸೆಗೆ ಹೊರರಾಜ್ಯಗಳಿಂದ ಅಕ್ಕಿ ಖರೀದಿಸಲಾಗುತ್ತಿದೆ’ ಎಂಬ ಬಿಜೆಪಿ ಶಾಸಕ ಬಿ.ವೈ.ವಿಜಯೇಂದ್ರ ಅವರು ಮಾಡಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ರಾಜ್ಯದಲ್ಲಿಯೇ ದೊರೆಯುವುದಾದರೆ ಕೊಡಿಸಲಿ’ ಎಂದು ತಿರುಗೇಟು ನೀಡಿದರು.
ಛತ್ತೀಸ್‌ಗಢದ ಜತೆ ಬೆಲೆಯ ಬಗ್ಗೆ ಚರ್ಚೆ
ಅನ್ನಭಾಗ್ಯ ಯೋಜನೆಗೆ ಛತ್ತೀಸ್‌ಗಢದಲ್ಲಿ 1.50 ಲಕ್ಷ ಟನ್ ಅಕ್ಕಿ ಲಭ್ಯವಿದೆ. ಆದರೆ ಸಾರಿಗೆ ವೆಚ್ಚ ಹೆಚ್ಚಾಗಲಿದೆ. ಅಲ್ಲಿನ ಸರ್ಕಾರದ ಜೊತೆ ಅಕ್ಕಿ ಬೆಲೆ ಬಗ್ಗೆ ಚರ್ಚಿಸುತ್ತೇವೆ. ತೆಲಂಗಾಣದ ಸಿಎಂ ಬಳಿ ನಾನು ಖುದ್ದಾಗಿ ಕೇಳಿದಾಗ ತಮ್ಮಲ್ಲಿ ಅಕ್ಕಿ ಇಲ್ಲ ಎಂದಿದ್ದಾರೆ. ಆಂಧ್ರದ ಜೊತೆ ಮುಖ್ಯ ಕಾರ‍್ಯದರ್ಶಿ ಮಾತನಾಡುತ್ತಿದ್ದಾರೆ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
