ಈಗಾಗಲೇ ಹೇಳಿರುವಂತೆ 2022-23ನೇ ಶೈಕ್ಷಣಿಕ ವರ್ಷದಲ್ಲಿ ಉತ್ತೀರ್ಣರಾದ ಪದವೀಧರರಿಗೆ ಆರು ತಿಂಗಳೊಳಗೆ ಕೆಲಸ ಸಿಗದಿದ್ದರೆ ರಾಜ್ಯ ಸರ್ಕಾರ ನಿರುದ್ಯೋಗ ಭತ್ಯೆಯಾಗಿ ಪದವೀಧರರಿಗೆ ತಲಾ 3 ಸಾವಿರ ರು. ಮತ್ತು ಡಿಪ್ಲೋಮಾ ಮಾಡಿದವರಿಗೆ ತಲಾ 1500 ರು.ಗಳನ್ನು ಯುವನಿಧಿ ಯೋಜನೆಯಡಿ ಕೊಡಲಿದೆ. 

ಬೆಂಗಳೂರು(ಜು.11): ರಾಜ್ಯ ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿಗಳಲ್ಲಿ ಒಂದಾದ ‘ಯುವ ನಿಧಿ’ ಯೋಜನೆಯನ್ನು ನವೆಂಬರ್‌ ಅಥವಾ ಡಿಸೆಂಬರ್‌ನಲ್ಲಿ ಜಾರಿಗೆ ತರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದರು.

ಈಗಾಗಲೇ ಹೇಳಿರುವಂತೆ 2022-23ನೇ ಶೈಕ್ಷಣಿಕ ವರ್ಷದಲ್ಲಿ ಉತ್ತೀರ್ಣರಾದ ಪದವೀಧರರಿಗೆ ಆರು ತಿಂಗಳೊಳಗೆ ಕೆಲಸ ಸಿಗದಿದ್ದರೆ ರಾಜ್ಯ ಸರ್ಕಾರ ನಿರುದ್ಯೋಗ ಭತ್ಯೆಯಾಗಿ ಪದವೀಧರರಿಗೆ ತಲಾ 3 ಸಾವಿರ ರು. ಮತ್ತು ಡಿಪ್ಲೋಮಾ ಮಾಡಿದವರಿಗೆ ತಲಾ 1500 ರು.ಗಳನ್ನು ಯುವನಿಧಿ ಯೋಜನೆಯಡಿ ಕೊಡಲಿದೆ. ನವೆಂಬರ್‌ ಅಥವಾ ಡಿಸೆಂಬರ್‌ ತಿಂಗಳಿಂದ ನೀಡುತ್ತದೆ. ಆ ಸಮಯಕ್ಕೆ ಯಾರಿಗೆ ಕೆಲಸ ಸಿಕ್ಕಿರುವುದಿಲ್ಲವೋ ಅವರಿಗೆ ಅಂದಿನಿಂದ 24 ತಿಂಗಳವರೆಗೆ ಪ್ರತಿ ತಿಂಗಳು ನಿಗದಿತ ಹಣ ಕೊಡುತ್ತೇವೆ ಎಂದರು.

ಭ್ರಷ್ಟತನಿಖೆ 2013ರಿಂದಲೂ ಮಾಡಿ: ರಾಜ್ಯ ಸರ್ಕಾರಕ್ಕೆ ಬೊಮ್ಮಾಯಿ ಸವಾಲು!

ಬಿಎ, ಬಿಎಸ್ಸಿ, ಬಿಕಾಂ, ಎಂಎ, ಎಎಸ್ಸಿ, ಎಂಕಾಂ, ಬಿಇ, ಎಂಬಿಬಿಎಸ್‌ ಸೇರಿದಂತೆ ತಾಂತ್ರಿಕ ಶಿಕ್ಷಣ ಪಡೆದವರಿಗೂ ಯುವ ನಿಧಿ ಯೋಜನೆಯಡಿ ಹಣ ಕೊಡುತ್ತೇವೆ. ಈವರೆಗೂ ನಾವು ನುಡಿದಂತೆ ನಡೆದಿದ್ದೇವೆ. ಮುಂದೆಯೂ ನಡೆಯುತ್ತೇವೆ. ಯುವ ನಿಧಿ ಯೋಜನೆಯಡಿ ಅರ್ಹರಾಗುವ ಯುವಜನರಿಗೆ ಹಣವನ್ನು ನಾವು ಶೇಕಡ ನೂರರಷ್ಟು ಕೊಟ್ಟೇ ಕೊಡುತ್ತೇವೆ ಎಂದು ಹೇಳಿದರು.

ಆ.16ಕ್ಕೆ ಗೃಹಲಕ್ಷ್ಮಿ:

ಇನ್ನು ಗೃಹಲಕ್ಷ್ಮಿ ಯೋಜನೆಯನ್ನು ಆಗಸ್ಟ್‌ 16ರಂದು ಜಾರಿ ಮಾಡಲು ಸಮಯ ನಿಗದಿ ಮಾಡಿದ್ದೇವೆ. ಕುಟುಂಬದ ಯಾವ ಯಜಮಾನಿಗೆ ಹಣ ಸಂದಾಯ ಮಾಡಬೇಕು ಎಂದು ನಿರ್ಧಾರವಾಗಲು ಸಮಯಾವಕಾಶ ಬೇಕಿದೆ. ಅರ್ಜಿ ಕರೆಯುವುದು, ನೋಂದಣಿ ಮಾಡಿಕೊಳ್ಳಲು ಸಮಯ ಬೇಕು. ಆದ್ದರಿಂದ ಆಗಸ್ಟ್‌ 16ರಿಂದ ಕುಟುಂಬದ ಯಜಮಾನಿಗೆ 2 ಸಾವಿರ ರು.ನಂತೆ ಹಣ ಕೊಡುತ್ತೇವೆ ಎಂದರು.

ಜೂನ್‌ 11ರಿಂದ ಶಕ್ತಿ ಯೋಜನೆ ಜಾರಿಗೆ ಬಂದಿದೆ. ಜುಲೈ 1ರಿಂದ ಅನ್ನಭಾಗ್ಯ ಮತ್ತು ಗೃಹಜ್ಯೋತಿ ಯೋಜನೆಗಳು ಜಾರಿಗೊಂಡಿವೆ. ಈ ಮೂಲಕ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಹೇಳಿದಂತೆ ಕೊಟ್ಟಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ನುಡಿದಂತೆ ನಡೆದಿದೆ ಎಂದು ಹೇಳಿದರು.