ಹಿಂದಿನ ಸರ್ಕಾರ ಮೀಸಲಾತಿ ವಿಚಾರದಲ್ಲಿ ತರಾತುರಿಯಲ್ಲಿ ನಿರ್ಧಾರ ಕೈಗೊಂಡು ಗೊಂದಲ ಸೃಷ್ಟಿಸಿದೆ. ಮೀಸಲಾತಿ ಸಾಂವಿಧಾನಿಕವಾಗಿ ಊರ್ಜಿತ ಆಗುವುದಿಲ್ಲ ಎಂದು ಬಿಜೆಪಿಗೆ ಮೊದಲೇ ಗೊತ್ತಿತ್ತು. ಆದರೂ, ಪಂಚಮಸಾಲಿ ಸಮುದಾಯಕ್ಕೆ ಮೂಗಿಗೆ ತುಪ್ಪ ಸವರುವ ಬದಲು ಹಣೆಗೆ ತುಪ್ಪ ಸವರಿದೆ ಎಂದು ಕಿಡಿ ಕಾರಿದ ಸಿದ್ದರಾಮಯ್ಯ
ಬೆಂಗಳೂರು(ಜೂ.24): ‘ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಕುರಿತು ಬಜೆಟ್ ಅಧಿವೇಶನದ ಬಳಿಕ ಕಾನೂನು ಮತ್ತು ಸಂವಿಧಾನ ತಜ್ಞರೊಂದಿಗೆ ಸಭೆ ನಡೆಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಶುಕ್ರವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಒದಗಿಸುವಂತೆ ಕೋರಿ ಕೂಡಲಸಂಗಮ ಪಂಚಮಸಾಲಿ ಮಠದ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದ ಕಾಂಗ್ರೆಸ್ ಶಾಸಕರ ನಿಯೋಗವು ಮನವಿ ಸಲ್ಲಿಸಿತು.
ಈ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಹಿಂದಿನ ಸರ್ಕಾರ ಮೀಸಲಾತಿ ವಿಚಾರದಲ್ಲಿ ತರಾತುರಿಯಲ್ಲಿ ನಿರ್ಧಾರ ಕೈಗೊಂಡು ಗೊಂದಲ ಸೃಷ್ಟಿಸಿದೆ. ಮೀಸಲಾತಿ ಸಾಂವಿಧಾನಿಕವಾಗಿ ಊರ್ಜಿತ ಆಗುವುದಿಲ್ಲ ಎಂದು ಬಿಜೆಪಿಗೆ ಮೊದಲೇ ಗೊತ್ತಿತ್ತು. ಆದರೂ, ಪಂಚಮಸಾಲಿ ಸಮುದಾಯಕ್ಕೆ ಮೂಗಿಗೆ ತುಪ್ಪ ಸವರುವ ಬದಲು ಹಣೆಗೆ ತುಪ್ಪ ಸವರಿದೆ ಎಂದು ಕಿಡಿ ಕಾರಿದರು.
ಪಂಚಮಸಾಲಿ ಮೀಸಲಾತಿ: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ನಮಗೆ ನ್ಯಾಯ ಕೊಡಿಸಿ, ಕೂಡಲ ಶ್ರೀ
ಮುಖ್ಯಮಂತ್ರಿಗಳ ಮಾತಿಗೆ ಪ್ರತಿಕ್ರಿಯಿಸಿದ ಶಾಸಕ ವಿನಯ್ ಕುಲಕರ್ಣಿ, ಮುಸ್ಲಿಂ ಸಮುದಾಯದ ಪಾಲಿನ ಮೀಸಲಾತಿಯನ್ನು ಕಿತ್ತು ಕೊಟ್ಟಿದ್ದನ್ನು ನಾವುಗಳು ಅವತ್ತೇ ವಿರೋಧಿಸಿದ್ದೆವು ಎಂದರು.
ಸಭೆಯಲ್ಲಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಸಮುದಾಯದ 15 ಮಂದಿ ಶಾಸಕರು ಹಾಗೂ ಪಂಚಮಸಾಲಿ ಸಮುದಾಯದ ಪ್ರಮುಖರು ಉಪಸ್ಥಿತರಿದ್ದರು.
ಡಿಸಿಎಂ ಭೇಟಿ ಮಾಡಿದ ನಿಯೋಗ
ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದ ನಿಯೋಗವು ಮುಖ್ಯಮಂತ್ರಿಗಳ ಭೇಟಿ ಬಳಿಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಕುಮಾರಕೃಪ ಅತಿಥಿಗೃಹದಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿತು. ಈ ವೇಳೆ ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದ ಪಂಚಮಸಾಲಿ ಸಮುದಾಯವನ್ನು ಹಿಂದುಳಿದ ಪಂಚಮಸಾಲಿ ಪಟ್ಟಿಗೆ ಸೇರಿಸಬೇಕು ಎಂದು ಮನವಿ ಮಾಡಿದರು.
2ಎಗೆ ಮನವಿ
2ಎ ಮೀಸಲಾತಿಗೆ ಸೂಕ್ತ ಕ್ರಮಕ್ಕೆ ಮನವಿ ಮಾಡಿದ್ದೇವೆ. ಬಿಜೆಪಿ ಸರ್ಕಾರ ಮಾಡಿದ ರೀತಿ ಮಾಡದಂತೆ ಕೋರಿದ್ದೇವೆ. ಬಜೆಟ್ ಅಧಿವೇಶನದ ಬಳಿಕ ಕಾನೂನು ತಜ್ಞರೊಂದಿಗೆ ಮಾತನಾಡುವುದಾಗಿ ಹೇಳಿದ್ದಾರೆ ಅಂತ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.
ಕೇವಲ ಚುನಾವಣಾ ಲಾಭ ಪಡೆಯಲು ತರಾತುರಿಯಲ್ಲಿ ಅವೈಜ್ಞಾನಿಕ ಹಾಗೂ ಅಸಂವಿಧಾನಿಕವಾಗಿ ಶೇ.4 ರಷ್ಟುಮೀಸಲಾತಿ ಹೊಂದಿದ್ದ ಒಕ್ಕಲಿಗರನ್ನು 3ಎ ಬದಲು 2ಸಿ ಎಂದು ಶೇ.6 ರಷ್ಟುಮೀಸಲಾತಿ ಹಾಗೂ 3ಬಿ ಅಡಿ ಶೇ.5 ರಷ್ಟುಮೀಸಲಾತಿ ಹೊಂದಿದ್ದ ಲಿಂಗಾಯತರಿಗೆ 2ಡಿ ಹೆಸರಿನಲ್ಲಿ ಶೇ.7 ರಷ್ಟುಮೀಸಲಾತಿ ಕಲ್ಪಿಸುವುದಾಗಿ ಆದೇಶ ಮಾಡಿತ್ತು. ಇದಕ್ಕೆ ಅಗತ್ಯವಿದ್ದ ಶೇ.4 ರಷ್ಟುಮೀಸಲಾತಿಯನ್ನು ಅಲ್ಪಸಂಖ್ಯಾತರಿಂದ ಕಿತ್ತು ನೀಡಿತ್ತು. ಇದಕ್ಕೆ ಕಾನೂನಾತ್ಮಕ ರಕ್ಷಣೆ ಇಲ್ಲದ ಕಾರಣ ಕೋರ್ಚ್‌ನಲ್ಲಿ ತಾವೇ ಹೋಗಿ ಇದನ್ನು ಮಾಡುವುದಿಲ್ಲ ಎಂದು ಹೇಳಿ ಬಿಜೆಪಿಯರು ನಗೆಪಾಟಲಿಗೆ ಈಡಾಗಿದ್ದರು ಎಂದು ಹೇಳಿದರು.
ಪಂಚಮಸಾಲಿ ಮೀಸಲು ವರದಿ ಪ್ರತಿ ನೀಡಿ: ಹೈಕೋರ್ಟ್
ನಾವು ಇಂತಹ ಸ್ವಾರ್ಥದ ನಿರ್ಧಾರಗಳನ್ನು ಮಾಡುವುದಿಲ್ಲ. ಮೀಸಲಾತಿ ವಿಚಾರವಾಗಿ ಆತುರದ ನಿರ್ಧಾರ ಸಲ್ಲದು. ಸಂವಿಧಾನಾತ್ಮಕ ಹಾಗೂ ಕಾನೂನಿನ ಚೌಕಟ್ಟಿನಲ್ಲಿ ತೀರ್ಮಾನ ಮಾಡಬೇಕು. ಹಾಗಾಗಿ ಸಭೆ ಕರೆದು ಕೂಲಂಕಷವಾಗಿ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು ಎಂದು ಮೂಲಗಳು ತಿಳಿಸಿವೆ.
ಈ ವೇಳೆ ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದ ಪಂಚಮಸಾಲಿ ಸಮುದಾಯವನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಿದಲ್ಲಿ ಅವರೂ ಮುಖ್ಯ ವಾಹಿನಿಗೆ ಬರಲು ಅನುಕೂಲವಾಗುತ್ತದೆ. ನುಡಿದಂತೆ ನಡೆದ ಮುಖ್ಯಮಂತ್ರಿಗಳು ನೀವು. ಬಸವಣ್ಣ ಅವರ ಭಾವಚಿತ್ರವನ್ನು ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯಗೊಳಿಸಿದವರು, ರಾಣಿ ಚನ್ನಮ್ಮ ಜಯಂತಿಯನ್ನು ಮೊದಲ ಬಾರಿಗೆ ಆಚರಿಸಿದವರು. ಹೀಗಾಗಿ ಈ ಬೇಡಿಕೆಯನ್ನೂ ಈಡೇರಿಸಬೇಕು ಎಂದು ಮನವಿ ಮಾಡಿದರು.
