ಬೆಳಗಾವಿ: ಸುವರ್ಣಸೌಧದಲ್ಲಿ ಶನಿವಾರ ಜನತಾ ದರ್ಶನ ಕಾರ್ಯಕ್ರಮದ ವೇಳೆ ಉತ್ತರ ಕರ್ನಾಟಕದ ಹೋರಾಟಗಾರರು ಗಲಾಟೆ ಮಾಡಿದ ಹಿನ್ನೆಲೆಯಲ್ಲಿಮುಖ್ಯಮಂತ್ರಿ ಕುಮಾರಸ್ವಾಮಿ ತುಸು ಗರಂ ಆದಂತೆ ಕಂಡುಬಂದರು. ‘ಅನ್ಯಾಯ, ಅನ್ಯಾಯ ಉತ್ತರ ಕರ್ನಾಟಕಕ್ಕೆ ಅನ್ಯಾಯ’ ಎಂದು ಹೋರಾಟಗಾರರು ಕೂಗುತ್ತಿದ್ದಂತೆ ಕಸಿವಿಸಿಗೊಂಡ ಮುಖ್ಯಮಂತ್ರಿ ಕುಮಾರಸ್ವಾಮಿ ಹೋರಾಟಗಾರರನ್ನು ತರಾಟೆಗೆ ತೆಗೆದುಕೊಂಡರು. 

ಸುವರ್ಣ ವಿಧಾನಸೌದದ ಸೆಂಟ್ರಲ್ ಹಾಲ್ ನ ವೇದಿಕೆ ಏರುತ್ತಿದ್ದಂತೆಯೇ ಉತ್ತರ ಕರ್ನಾಟಕ ಹೋರಾಟಗಾರರು ಘೋಷಣೆ ಕೂಗಿದರು. ಇದರಿಂದ ಕುಪಿತಗೊಂಡ ಸಿಎಂ ಕುಮಾರಸ್ವಾಮಿ ‘ಕೂಗಾಟ ಯಾಕೆ ಮಾಡ್ತೀರಾ.. ಏನ್ ಮನವಿ ತಂದು ಕೊಡಿ... ಅಭಿವೃದ್ಧಿ ಅಂದರೆ ಏನೇನಾಗ್ಬೇಕು ಹೇಳಿ’ ಎಂದು ಹೋರಾಟಗಾರ ರನ್ನು ಗದರಿದರು. 

ಈ ವೇಳೆ ಮುಖಂಡ ಅಡಿವೇಶಇಟಗಿ ಅವರಿಂದ ಮನವಿ ಪಡೆದು ಅವರಿಗೆ ತುಸು ಸಿಟ್ಟು ಪ್ರದರ್ಶಿಸಿದ ಸಿಎಂ, ಇದರ ಬಗ್ಗೆ ನಾನು ಅಧಿಕಾರಿಗಳು ಮತ್ತು ಸಂಬಂಧಿಸಿದ ಇಲಾಖೆಗಳ ಜತೆ ಚರ್ಚಿಸಿ ಶೀಘ್ರ ಕ್ರಮ ಕೈಗೊಳ್ಳುವುದಾಗಿ ಹೇಳಿ ಮನವಿ ಪಡೆದರು.