ಶನಿವಾರ ವಿಧಾನಸೌಧದಲ್ಲಿ ನಡೆಯಲಿರುವ ಅಧಿಕೃತ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡ ಅವರಿಬ್ಬರೂ ಗೈರು ಹಾಜರಾಗಲಿದ್ದಾರೆ.

ಬೆಂಗಳೂರು : ವಿವಾದದ ಸ್ವರೂಪ ಪಡೆದುಕೊಳ್ಳುತ್ತಿರುವ ಸರ್ಕಾರದ ಟಿಪ್ಪು ಜಯಂತಿ ಆಚರಣೆಯಿಂದ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷ ಜೆಡಿಎಸ್‌ ಅಂತರ ಕಾಪಾಡಿಕೊಳ್ಳಲು ನಿರ್ಧರಿಸಿದ್ದು, ಶನಿವಾರ ವಿಧಾನಸೌಧದಲ್ಲಿ ನಡೆಯಲಿರುವ ಅಧಿಕೃತ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡ ಅವರಿಬ್ಬರೂ ಗೈರು ಹಾಜರಾಗಲಿದ್ದಾರೆ.

ಈ ಮೂಲಕ ಪ್ರತಿಪಕ್ಷ ಬಿಜೆಪಿ ತೀವ್ರ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಇಡೀ ಟಿಪ್ಪು ಜಯಂತಿ ಆಚರಣೆ ಸಂಬಂಧ ಉದ್ಭವಿಸಿರುವ ವಿವಾದವನ್ನು ಜಾಣತನದಿಂದ ಮಿತ್ರ ಪಕ್ಷ ಕಾಂಗ್ರೆಸ್‌ ತಲೆಗೆ ಕಟ್ಟುವ ಉದ್ದೇಶವಿರುವಂತೆ ಕಂಡು ಬರುತ್ತಿದೆ. ಆದರೆ ಇದಕ್ಕೆ ಕಾಂಗ್ರೆಸ್‌ ಯಾವ ರೀತಿ ಪ್ರತಿಕ್ರಿಯಿಸಲಿದೆ ಎಂಬುದು ಕುತೂಹಲಕಾರವಾಗಿದೆ.

ಟಿಪ್ಪು ಸುಲ್ತಾನ್‌ ಜಯಂತಿ ಆಚರಣೆ ಸಂಬಂಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಹ್ವಾನ ಪತ್ರಿಕೆ ಬಿಡುಗಡೆಯಾಗಿದ್ದು, ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ಬೆಳಗ್ಗೆ 10.30ಕ್ಕೆ ನಡೆಯುವ ಸಮಾರಂಭವನ್ನು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರು ಉದ್ಘಾಟಿಸಲಿದ್ದಾರೆ. ಇದುವರೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ ಎಂಬ ಮಾಹಿತಿಯಿತ್ತು. ಆದರೆ, ಕುಮಾರಸ್ವಾಮಿ ಅವರು ಈ ಸಮಾರಂಭದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.

ಎಚ್‌ಡಿಕೆ ವಿಶ್ರಾಂತಿ, ಗೌಡರು ದಿಲ್ಲಿಗೆ!:

‘ಹಾಗೆ ನೋಡಿದರೆ ಕುಮಾರಸ್ವಾಮಿ ಅವರ ಶನಿವಾರದ ಬೇರೆ ಯಾವುದೇ ಕಾರ್ಯಕ್ರಮ ಇದುವರೆಗೆ ನಿಗದಿಯಾಗಿಲ್ಲ. ಶುಕ್ರವಾರ ಮತ್ತು ಶನಿವಾರ ಎರಡೂ ದಿನಗಳ ಕಾಲ ಮುಖ್ಯಮಂತ್ರಿಗಳು ಬೆಂಗಳೂರಿನ ಹೊರತುಪಡಿಸಿ ಬೇರೊಂದು ಸ್ಥಳದಲ್ಲಿ ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ದೀಪಾವಳಿ ಹಬ್ಬದ ಪ್ರಯುಕ್ತ ಕಳೆದ ಮೂರು ದಿನಗಳ ಕಾಲ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಯಾವ ಅಧಿಕೃತ ಕಾರ್ಯಕ್ರಮಗಳೂ ಇರಲಿಲ್ಲ. ಒಂದು ರೀತಿಯಲ್ಲಿ ವಿಶ್ರಾಂತಿಯಂತೆಯೇ ಇತ್ತು. ಆದರೆ, ಶುಕ್ರವಾರ ಮತ್ತು ಶನಿವಾರವೂ ಯಾವುದೇ ಕಾರ್ಯಕ್ರಮಗಳನ್ನು ನಿಗದಿಗೊಳಿಸದೆ ವಿಶ್ರಾಂತಿ ತೆಗೆದುಕೊಳ್ಳಲು ನಿರ್ಧರಿಸಿರುವುದು ಟಿಪ್ಪು ಜಯಂತಿ ಆಚರಣೆಯಿಂದ ದೂರ ಉಳಿಯುವುದಕ್ಕಾಗಿಯೇ ಎಂಬ ಅನುಮಾನ ಮೂಡಿದೆ.

ಇದೇ ವೇಳೆ ಅಲ್ಪಸಂಖ್ಯಾತ ಮತ್ತು ವಕ್ಫ್ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅವರು ಗುರುವಾರ ದೇವೇಗೌಡರ ನಿವಾಸಕ್ಕೆ ತೆರಳಿ ಟಿಪ್ಪು ಜಯಂತಿ ಸಮಾರಂಭಕ್ಕೆ ಆಹ್ವಾನ ನೀಡಿದರು. ಆದರೆ, ದೆಹಲಿಯಲ್ಲಿ ಪೂರ್ವನಿಗದಿತ ಕಾರ್ಯಕ್ರಮದ ಹಿನ್ನೆಲೆ ತಾವು ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು. ಈ ಮಾಹಿತಿಯನ್ನು ಸ್ವತಃ ಜಮೀರ್‌ ಅವರೇ ಸುದ್ದಿಗಾರರಿಗೆ ನೀಡಿದರು.

ಈ ಹಿಂದೆ ಶಿಷ್ಟಾಚಾರಕ್ಕಾಗಿಯಾದರೂ ಆಹ್ವಾನ ಪತ್ರಿಕೆಯಲ್ಲಿ ಮುಖ್ಯಮಂತ್ರಿಗಳ ಹೆಸರನ್ನು ಹಾಕಿಕೊಳ್ಳಲಾಗುತ್ತಿತ್ತು. ಆದರೆ, ಇತ್ತೀಚೆಗೆ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಮುಖ್ಯಮಂತ್ರಿಗಳ ಹೆಸರಿದ್ದರೂ ಗೈರು ಹಾಜರಾಗಿದ್ದರಿಂದ ಗದ್ದಲ ಉಂಟಾಗಿತ್ತು. ಈ ಕಾರಣಕ್ಕಾಗಿ ಸಮಾರಂಭಕ್ಕೆ ಆಗಮಿಸುವುದಿಲ್ಲ ಎಂದ ಮೇಲೆ ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರು ಹಾಕುವುದೇ ಬೇಡ ಎಂಬ ಸೂಚನೆ ರವಾನೆಯಾಗಿದೆ ಎನ್ನಲಾಗಿದೆ.

ಇಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ

ಬೆಂಗಳೂರು: ಟಿಪ್ಪು ಜಯಂತಿ ಆಚರಣೆ ವಿರುದ್ಧ ಪ್ರತಿಪಕ್ಷ ಬಿಜೆಪಿಯು ಶುಕ್ರವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದೆ. ಬೆಂಗಳೂರು ಸೇರಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಪಕ್ಷದ ವತಿಯಿಂದ ಪ್ರತಿಭಟನಾ ಧರಣಿ ನಡೆಸಲಾಗುವುದು ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ತಿಳಿಸಿದ್ದಾರೆ. ಮುಖ್ಯ ಪ್ರತಿಭಟನೆ ಬೆಂಗಳೂರಿನಲ್ಲಿ ಬೆಳಗ್ಗೆ 11 ಗಂಟೆಗೆ ಕೆಂಪೇಗೌಡ ರಸ್ತೆಯ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಪಕ್ಷದ ಮುಖಂಡ ಆರ್‌.ಅಶೋಕ್‌, ಸಂಸದ ಪಿ.ಸಿ.ಮೋಹನ್‌ ಮತ್ತಿತರರ ನೇತೃತ್ವದಲ್ಲಿ ನಡೆಯಲಿದೆ. ನಗರದ ಶಾಸಕರು, ಬಿಬಿಎಂಪಿ ಸದಸ್ಯರು ಹಾಗೂ ಮುಖಂಡರು ಇದರಲ್ಲಿ ಭಾಗವಹಿಸಲಿದ್ದಾರೆ.