ಚಿಕ್ಕಪ್ಪನಹಳ್ಳಿ ಷಣ್ಮುಖ, ಕನ್ನಡಪ್ರಭ

ಚಿತ್ರದುರ್ಗ(ಜೂ.29): ಹಾವು ಸಾಯೋಲ್ಲ, ಕೋಲು ಮುರಿಯೋಲ್ಲ. ರಾಜ್ಯದಲ್ಲಿ ಖಾಸಗಿ ಬಸ್ಸುಗಳ ಸಂಚಾರಕ್ಕೆ ಸಂಬಂಧಿಸಿದಂತೆ ಭಾನುವಾರ ಚಿಕ್ಕಮಗಳೂರಿನಲ್ಲಿ ನಡೆದ ಸಭೆಯ ಒಟ್ಟಾರೆ ತಿರುಳಿದು.

ಒಲ್ಲದ ಮನಸ್ಸಿನಿಂದಲೇ ಸಭೆ ನಡೆಸಿರುವ ಖಾಸಗಿ ಬಸ್ಸುಗಳ ಮಾಲೀಕರು ಜುಲೈ ಆರರೊಳಗೆ ಮುಖ್ಯಮಂತ್ರಿಗಳ ಭೇಟಿಯಾಗಿ ಮನವಿಯೊಂದನ್ನು ಸಲ್ಲಿಸಲು ತೀರ್ಮಾನಿಸಿದ್ದಾರೆ. ಕಗ್ಗಂಟಿನ ನಿವೇದನೆಯೊಂದನ್ನು ಸರ್ಕಾರದ ಮುಂದೆ ಮಂಡಿಸಲಿದ್ದಾರೆ. ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದರೆ ಮಾತ್ರ ಬಸ್ಸುಗಳ ಓಡಾಟ ಆರಂಭಿಸುವ ಬದ್ಧತೆ ಪ್ರದರ್ಶಿಸಿದ್ದಾರೆ.

ಐವತ್ತು ಸೀಟ್‌ ಕೆಪಾಸಿಟಿಗೆ ಹಾಲಿ ತೆರಿಗೆ ಕಟ್ಟುತ್ತಿದ್ದು ಮೂವತ್ತು ಮಂದಿ ಪ್ರಯಾಣಿಕರ ಕರೆದೊಯ್ಯಲು ಕಷ್ಟವಾಗುತ್ತಿದೆ. ಹಾಗಾಗಿ ಕೋವಿಡ್‌ ಪರಿಸ್ಥಿತಿ ಸುಧಾರಿಸುವ ತನಕ ತೆರಿಗೆ ರದ್ದು ಮಾಡಬೇಕು. ಮೂವತ್ತು ಮಂದಿ ಸಾಮರ್ಥ್ಯದಾಚೆ ಪ್ರಯಾಣಿಕರು ಏನಾದರೂ ಬಸ್ಸು ಹತ್ತಿದರೆ ಯಾವುದೇ ಕಾರಣದಿಂದ ಕೋವಿಡ್‌ ಕಾಯ್ದೆಯಡಿ ಪ್ರಕರಣ ದಾಖಲು ಮಾಡಬಾರದು. ಡೀಸೆಲ್‌ ದರದಲ್ಲಿ ಇಳಿಕೆ ಮಾಡಬೇಕು. ಕೊರೋನಾ ಹಿನ್ನೆಲೆಯಲ್ಲಿ ಅಸಂಘಟಿತ ಕಾರ್ಮಿಕ ವಲಯಗಳಿಗೆ ರಾಜ್ಯ ಸರ್ಕಾರ ಈಗಾಗಲೇ ಪರಿಹಾರ ಘೋಷಿಸಿದ್ದು, ಅದೇ ರೀತಿ ಬಸ್ಸುಗಳ ಕಂಡಕ್ಟರ್‌ ಹಾಗೂ ಡ್ರೈವರ್‌ಗಳಿಗೆ ಪ್ಯಾಕೇಜ್‌ ಘೋಷಿಸಬೇಕು. ಬ್ಯಾಂಕುಗಳಲ್ಲಿ ಹಾಲಿ ಸಾಲ ಪಡೆದುಕೊಂಡಿರುವ ಬಸ್ಸುಗಳ ಮಾಲೀಕರಿಗೆ ಇಎಂಐ ರಿಯಾಯಿತಿ ನೀಡಲಾಗಿದ್ದು ಬಡ್ಡಿ ಮನ್ನಾ ಮಾಡಬೇಕು ಎಂಬಿತ್ಯಾದಿ ಮನವಿಯನ್ನು ಮುಖ್ಯಮಂತ್ರಿಗಳ ಮುಂದೆ ಮಂಡಿಸಲಿದೆ.

ಸಿಎಂ ಈ ಬೇಡಿಕೆಗಳಿಗೆ ಒಪ್ಪಿಗೆ ಸೂಚಿಸಿದರೆ ಮಾತ್ರ ಖಾಸಗಿ ಬಸ್ಸುಗಳು ಎಂದಿಂತೆ ಸಂಚಾರ ಆರಂಭಿಸಲಿವೆ. ಈಗಾಗಲೇ ಉಡುಪಿ ಮತ್ತು ಮಂಗಳೂರು ಜಿಲ್ಲೆಯಲ್ಲಿ ಖಾಸಗಿ ಬಸ್ಸುಗಳ ಓಡಾಟ ಆರಂಭಿಸಿದ್ದು ಈ ಅಂಶವನ್ನು ಸಿಎಂ ಪರಿಗಣಿಸಬಾರದು. ಒಟ್ಟಾರೆ ಖಾಸಗಿ ಬಸ್ಸುಗಳ ಮಾಲೀಕರ ಹಿತ ಕಾಯಬೇಕು. ಬೇಡಿಕೆಗಳಿಗೆ ಒಪ್ಪಿಗೆ ಸೂಚಿಸಿದರೆ ಮಾತ್ರ ಜುಲೈ ಆರರಿಂದ ಸೇವೆ ಆರಂಭಿಸಲಾಗುವುದೆಂಬ ನಿರ್ಣಯಕ್ಕೆ ಸಭೆ ಬಂದಿದೆ.

ಸಿಎಂಗೆ ಶಿಕಾರಿಪುರ ಅಭಿವೃದ್ದಿ ಉತ್ತುಂಗಕ್ಕೆ ಕೊಂಡೊಯ್ಯುವಾಸೆ: ಸಂಸದ ರಾಘವೇಂದ್ರ

ಡೀಸೆಲ್‌ ಬೆಲೆ ಕಡಿಮೆ ಮಾಡುವುದು ಪಾಲಿಸಿ ಮ್ಯಾಟರ್‌ ಆಗುತ್ತದೆ. ಅದೇ ರೀತಿ ಕೋವಿಡ್‌ ನಿಯಂತ್ರಣಕ್ಕೆ ಬರುವ ತನಕ ತೆರಿಗೆ ರಿಯಾಯಿತಿ ಕೊಡುವುದು ಸರ್ಕಾರಕ್ಕೆ ಕಷ್ಟಸಾಧ್ಯ. ಸದ್ಯದ ಪರಿಸ್ಥಿತಿಯಲ್ಲಿ ಖಾಸಗಿ ಬಸ್ಸುಗಳ ಮಾಲೀಕರ ಬೇಡಿಕೆ ಈಡೇರಿಸುವುದು ರಾಜ್ಯ ಸರ್ಕಾರಕ್ಕೆ ಕಬ್ಬಿಣದ ಕಡಲೆಯಾಗಿದೆ. ಹಾಗಾಗಿ ಹಾವು ಸಾಯಬಾರದು, ಕೋಲು ಮುರಿಯಬಾರದು ಎಂಬ ತೀರ್ಮಾನಕ್ಕೆ ಖಾಸಗಿ ಬಸ್ಸುಗಳ ಮಾಲೀಕರು ಬಂದಂತೆ ಕಾಣಿಸುತ್ತಿದೆ.

ಚಿಕ್ಕಮಗಳೂರಿನ ಪೈ ಕಲ್ಯಾಣ ಮಂಟಪದಲ್ಲಿ ನಡೆದ ಖಾಸಗಿ ಬಸ್‌ ಮಾಲೀಕರ ಸಭೆಯಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಕೆ. ಬಾಲಕೃಷ್ಣ , ಚಿತ್ರದುರ್ಗ ಖಾಸಗಿ ಬಸ್ಸುಗಳ ಸಂಘದ ಅಧ್ಯಕ್ಷ ಬಿ.ಎ. ಲಿಂಗಾರೆಡ್ಡಿ, ಕಾರ್ಯದರ್ಶಿ ಜಿ.ಬಿ.ಶೇಖರ್‌, ನಿರ್ದೇಶಕ ಎಸ್‌.ಆರ್‌. ಗಿರೀಶ್‌, ಸುರೇಶ್‌ ನಾಯ್ಕ, ಮಂಜುನಾಥ್‌, ಆರ್‌. ರಂಗಪ್ಪ, ಮಂಜೇಗೌಡ, ಬಿ.ಸಿ. ಚಂದ್ರಶೇಖರ್‌ ಮುಂತಾದವರು ಪಾಲ್ಗೊಂಡಿದ್ದರು.ಸ