ಬೆಂಗಳೂರು (ಅ.23):  ಕೊರೋನಾ ಮತ್ತು ನೆರೆ ಹಾವಳಿಯಂತಹ ಸಂದರ್ಭದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಕೆಲ ಸಚಿವರು, ಶಾಸಕರು ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿಲ್ಲ ಎಂದು ತಮ್ಮ ಪಕ್ಷದ ಮುಖಂಡರ ನಡೆಯ ಬಗ್ಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ, ‘ಸಂಕಷ್ಟದಲ್ಲಿರುವ ನಾಗರಿಕರ ಸಂಕಷ್ಟಕ್ಕೆ ಸಚಿವರ, ಶಾಸಕರ ಸ್ಪಂದನೆ ನಿರೀಕ್ಷಿತಮಟ್ಟದಲ್ಲಿ ಇಲ್ಲ. ಕೆಲ ಸಚಿವರು, ಶಾಸಕರು ತಮಗೂ ಮತ್ತು ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲದಂತೆ ನಡೆದುಕೊಳ್ಳುತ್ತಿದ್ದಾರೆ. ಇದು ಸರಿಯಾದ ನಡೆಯಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು ಎನ್ನಲಾಗಿದೆ. ಕೆಲ ನಾಯಕರು ಪಕ್ಷಕ್ಕೆ ಮತ್ತು ಸರ್ಕಾರಕ್ಕೆ ಮುಜುಗರವನ್ನುಂಟು ಮಾಡುವಂತೆ ನಡೆದುಕೊಳ್ಳುತ್ತಿದ್ದಾರೆ. ಆದರೂ ಈ ಬಗ್ಗೆ ಚಕಾರವೆತ್ತದೆ ಸುಮ್ಮನಿದ್ದಾರೆ. ಮುಂದಿನ ದಿನದಲ್ಲಿ ಹೀಗೆ ಮುಂದುವರಿಸಿದರೆ ಗಂಭೀರ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ’ ಎಂದಿದ್ದಾರೆ ಎಂದು ತಿಳಿದು ಬಂದಿದೆ.

‘ಪ್ರಸ್ತುತ ರಾಜ್ಯದಲ್ಲಿ ಕೊರೋನಾ ಹಾವಳಿ ಮತ್ತು ಪ್ರವಾಹ ಪರಿಸ್ಥಿತಿ ಎದುರಿಸಲಾಗುತ್ತಿದೆ. ಕೊರೋನಾ ಕುರಿತು ಜಾಗೃತಿ ಮೂಡಿಸುವುದು, ಪ್ರವಾಹ ಪೀಡಿತ ಪ್ರದೇಶದಲ್ಲಿನ ಜನರಿಗೆ ಸಾಂತ್ವನ ಹೇಳಿ ಸಹಾಯ ಹಸ್ತ ಚಾಚುವುದರಲ್ಲಿ ಪಕ್ಷದ ಶಾಸಕರು ಅಸಡ್ಡೆ ತೋರುತ್ತಿದ್ದಾರೆ. ಅವರವರ ಕ್ಷೇತ್ರದಲ್ಲಿಯೇ ಶಾಸಕರು ಉತ್ತಮವಾಗಿ ಕೆಲಸ ನಿರ್ವಹಿಸುವಲ್ಲಿ ಎಡವಿದ್ದಾರೆ. ಇದು ಪ್ರತಿಪಕ್ಷಗಳಿಗೆ ಆಹಾರವಾಗಿದೆ. ಆದರೂ ಪಕ್ಷದ ಶಾಸಕರು ತಲೆಕೆಡಿಸಿಕೊಳ್ಳುತ್ತಿಲ್ಲ.

ಯತ್ನಾಳ ಬಗ್ಗೆ ಸಿಎಂ ಪರೋಕ್ಷ ಅತೃಪ್ತಿ

ಬೆಂಗಳೂರು: ‘ಶೀಘ್ರ ಹೊಸ ಸಿಎಂ ಬರುತ್ತಾರೆ’ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ಹೇಳಿಕೆ ಬಗ್ಗೆಯೂ ಸಭೆಯಲ್ಲಿ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ‘ಉಪಚುನಾವಣೆ ವೇಳೆಯಲ್ಲಿ ಶಾಸಕರು ಇಲ್ಲಸಲ್ಲದ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಹೇಳಿಕೆಗಳನ್ನು ನೀಡುವುದನ್ನು ಬಿಟ್ಟು ಜನರ ಬಳಿ ಹೋಗಿ ಅವರ ಕಷ್ಟ-ಸುಖಕ್ಕೆ ಸ್ಪಂದಿಸಬೇಕು’ ಎಂದರು ಎನ್ನಲಾಗಿದೆ.

‘ಈಗಾಗಲಾದರೂ ಎಚ್ಚೆತ್ತುಕೊಳ್ಳಬೇಕು. ಸರ್ಕಾರಕ್ಕೆ ಇರುಸು-ಮುರುಸು ಆಗುವಂತಹ ಪರಿಸ್ಥಿತಿ ನೋಡಿಯೂ ಸುಮ್ಮನಿದ್ದರೆ ಹೇಗೆ? ಜಿಲ್ಲಾ ಉಸ್ತುವಾರಿ ಸಚಿವರು ತಮಗೆ ಜವಾಬ್ದಾರಿ ವಹಿಸಿರುವ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಮತ್ತು ಕೊರೋನಾ ಪರಿಸ್ಥಿತಿ ಹೇಗಿದೆ? ನಿಯಂತ್ರಣಗೊಳಿಸುವ ಸಂಬಂಧ ಕೈಗೊಳ್ಳಬಹುದಾದ ಕುರಿತು ಸಭೆ ನಡೆಸುವುದು ಸೇರಿದಂತೆ ಕ್ರಿಯಾಶೀಲವಾಗಿ ಕೆಲಸ ಮಾಡಬೇಕು. ಅಲ್ಲದೇ, ಪ್ರತಿಪಕ್ಷಗಳು ಸರ್ಕಾರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದು, ಅವುಗಳಿಗೆ ತಕ್ಕ ಉತ್ತರ ನೀಡಬೇಕು. ಇಲ್ಲಿದಿದ್ದರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗಲಿದೆ. ಸಚಿವರು, ಶಾಸಕರು ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವಂತೆ ಸೂಚಿಸಿದರು’ ಎಂದು ಮೂಲಗಳು ತಿಳಿಸಿವೆ.