ಬೆಂಗಳೂರು (ಸೆ.21): ರಾಜ್ಯದಲ್ಲಿ ಸಚಿವ ಸಂಪುಟ ಚರ್ಚೆ ಜೋರಾಗಿದ್ದು, ಇನ್ನೂ ಈ ಬಗ್ಗೆ ಹೈ ಕಮಾಂಡ್‌ನಿಂದ ಯಾವುದೇ ಸಂದೇಶ ಬಂದಿಲ್ಲ ಎಂದು ಸಿಎಂ  ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ. 

ರಾಜ್ಯದಲ್ಲಿ ಸಂಪುಟ ವಿಸ್ತರಣೆ ಮಾಡುವ ಸಲುವಾಗಿ ಹೈ ಕಮಾಂಡ್ ಆದೇಶಕ್ಕೆ ಕಾಯುತ್ತಿದ್ದೇವೆ. ಹೈ ಕಮಾಂಡ್ ನಿಂದ ಸಂದೇಶ ಬಂದ ತಕ್ಷಣ ಸಂಪುಟ ವಿಸ್ತರಣೆ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು. 

ಮಳೆಯ ಕುರಿತು ಸಿಎಂ ಪ್ರಸ್ತಾಪ : ರಾಜ್ಯದ ಹಲವೆಡೆ ಭಾರೀ ಮಳೆಯಾಗುತ್ತಿದ್ದು, ಹಲವು ಜಿಲ್ಲೆಗಳ ಡಿಸಿಗಳ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದೇನೆ. ಉಡುಪಿಯಲ್ಲಿ ಹೆಚ್ಚು ಮಳೆ ಆಗಿದೆ. 

ಬೇರೆ ಜಿಲ್ಲೆಗಳಲ್ಲಿ ಹೆಚ್ಚೇನು ಅನಾಹುತ ಆಗಿಲ್ಲ. ಭಗವಂತನ ದಯೆಯಿಂದ ಇಂದು ಮಳೆ ಕಡಿಮೆ ಆದರೆ ಸಮಸ್ಯೆ ನಿವಾರಣೆ ಆಗಲಿದೆ.  ಹಗಲು ರಾತ್ರಿ ನಮ್ಮ ಡಿಸಿಗಳು ಕೆಲಸ ಮಾಡ್ತಿದ್ದಾರೆ. ಯಾವುದೇ ಸಾವು ನೋವು ಆಗಿಲ್ಲ. ಕೇಂದ್ರದಿಂದ ಹೆಲಿಕಾಪ್ಟರ್ ಸೇರಿದಂತೆ ಎಲ್ಲಾ ಸಹಕಾರ ಸಿಕ್ಕಿದೆ.  ಶಕ್ತಿ ಮೀರಿ ಜಿಲ್ಲಾಡಳಿತ ಕೆಲಸ ಮಾಡ್ತಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.

ರಾಜ್ಯದಲ್ಲಿ ಮಳೆಯಬ್ಬರ : ಸರ್ಕಾರದ ವಿರುದ್ಧ ಕೈ ಸಮರ ..

 ಕೊರೋನಾ ಜಾಗೃತಿಗೆ ಕೋರಿಕೆ : ರಾಜ್ಯದಲ್ಲಿ ಮತ್ತೆ ಕೊರೊನಾ ಮಹಾಮಾರಿ ಹೆಚ್ಚಳವಾಗಿದ್ದು, ಜನರು ಯಾವುದೇ ಕಾರಣಕ್ಕೂ ಉದಾಸೀನ ಮಾಡಬಾರದು ಎಂದು ಸಿಎಂ ಯಡಿಯೂರಪ್ಪ ಹೇಳಿದರು.

ಸಾಮಾಜಿಕ ಅಂತರ, ಮಾಸ್ಕ್ ಬಳಕೆ ಕಡ್ಡಾಯವಾಗಿ ಮಾಡಬೇಕು.  ಯಾವುದೇ ಸಮಸ್ಯೆ ಇಲ್ಲದವರು ಕೊರೊನಾ ಪಾಸಿಟಿವ್ ಆಗುತ್ತಿದ್ದಾರೆ. ನಾಡಿನ ಜನರು ಎಚ್ಚರಿಕೆಯಿಂದ ಇರಬೇಕು. ಗ್ರಾಮೀಣ ಭಾಗದ ಜನರು ಎಚ್ಚರಿಕೆ ಇರುವಂತೆ ಕೈ ಮುಗಿದು ಕೇಳಿಕೊಳ್ಳುತ್ತೇನೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.

ಅಧಿವೇಶನ ಮೊಟಕು : ಇನ್ನು ಕೋವಿಡ್ ಹಿನ್ನೆಲೆಯಲ್ಲಿ 50 ರಿಂದ 60 ಜನರು ಕೋವಿಡ್‌ನಿಂದಾಗಿ ಸದನಕ್ಕೆ ಬರುತ್ತಿಲ್ಲ. ಹೀಗಾಗಿ ಬೇಗ ಮುಗಿಸಲು ವಿಪಕ್ಷ ನಾಯಕರ ಸಹಕಾರ ಕೇಳಲಾಗುವುದು ಎಂದು ಸಿಎಂ ಯಡಿಯೂರಪ್ಪ ಹೇಳಿದರು.
 
ವಿಪಕ್ಷದವರು ಯಾವ ರೀತಿ ಸಹಕಾರ ಕೊಡುತ್ತಾರೆ ಎನ್ನುವುದನ್ನು ನೋಡೋಣ ಎಂದರು ಸಿಎಂ ಯಡಿಯೂರಪ್ಪ.