ಬೆಂಗಳೂರು [ಡಿ.14]:  ಉಪಚುನಾವಣೆ ಫಲಿತಾಂಶ ಹೊರಬಿದ್ದು ಸರ್ಕಾರ ಸುಭದ್ರವಾದ ಬೆನ್ನಲ್ಲೇ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಆಡಳಿತ ಯಂತ್ರ ಚುರುಕುಗೊಳಿಸಲು ಮುಂದಾಗಿದ್ದಾರೆ.

ಸರ್ಕಾರದ ವಿವಿಧ ಇಲಾಖೆಗಳ ಮುಖ್ಯಸ್ಥರಾದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳ ಸುದೀರ್ಘ ಸಭೆ ನಡೆಸಿದ ಯಡಿಯೂರಪ್ಪ ಅವರು, ಇನ್ನು ಮುಂದೆ ಯಾವುದೇ ಗೊಂದಲಗಳನ್ನು ಇಟ್ಟುಕೊಳ್ಳದೆ ಅಭಿವೃದ್ಧಿ ಮತ್ತು ಜನರ ಸಮಸ್ಯೆಗಳತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಅಧಿಕಾರಿಗಳಿಗೆ ನೇರವಾಗಿಯೇ ತಾಕೀತು ಮಾಡಿದ್ದಾರೆ.

ಪ್ರವಾಹ ಸಂತ್ರಸ್ತರಿಗೆ ಸಮರ್ಪಕವಾಗಿ ಪರಿಹಾರ ವಿತರಣೆಯಾಗದಿರುವುದಕ್ಕೆ ಮತ್ತು ಮನೆಗಳ ನಿರ್ಮಾಣಕ್ಕಾಗಿ ಅಡಿಪಾಯ ಹಾಕಲು ಪ್ರತಿ ಮನೆಗೆ ಒಂದು ಲಕ್ಷ ರು. ಬಿಡುಗಡೆಯಾದರೂ ಸರಿಯಾಗಿ ಅಡಿಪಾಯ ಹಾಕದಿರುವ ಬಗ್ಗೆ ಪರಿಶೀಲನೆ ಮಾಡದಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಸಭೆ ಆರಂಭವಾಗುತ್ತಿದ್ದಂತೆ ಅಧಿಕಾರಿ ವರ್ಗಕ್ಕೆ ಸರ್ಕಾರದ ಸ್ಥಿರತೆಯ ಬಗ್ಗೆ ಆಶ್ವಾಸನೆ ಮೂಡಿಸಿದರು. ಸರ್ಕಾರದ ಸ್ಥಿರತೆ ಬಗ್ಗೆ ಗೊಂದಲಗಳಿದ್ದವು. ಆದರೆ, ಉಪಚುನಾವಣೆ ಬಳಿಕ ಎಲ್ಲಾ ಗೊಂದಲಗಳು ಬಗೆಹರಿದಿವೆ. ಸರ್ಕಾರವು ಸ್ಥಿರವಾಗಿದ್ದು, ಆಡಳಿತದಲ್ಲಿ ಬಿಗಿ ತರಬೇಕು. ಇನ್ನು ಮುಂದೆ ಯಾವುದೇ ಗೊಂದಲಗಳನ್ನು ಇಟ್ಟುಕೊಳ್ಳದೆ ಅಭಿವೃದ್ಧಿ ಮತ್ತು ಜನರ ಸಮಸ್ಯೆಗಳತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಅಧಿಕಾರಿಗಳ ವಿರುದ್ಧ ಕಿಡಿ:

ಪ್ರಮುಖವಾಗಿ ಪ್ರವಾಹಪೀಡಿತ ಪ್ರದೇಶಗಳ ಸ್ಥಿತಿಗತಿ, ಪುನರ್‌ವಸತಿ ಕಾರ್ಯಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಈ ವೇಳೆ ಅಧಿಕಾರಿಗಳು ಪ್ರವಾಹ ಪರಿಹಾರ ವಿಚಾರದಲ್ಲಿ ಸಮರ್ಪಕವಾದ ಉತ್ತರ ನೀಡದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಗರಂ ಆದರು. ಪ್ರವಾಹ ಪೀಡಿತ ಪ್ರದೇಶದಲ್ಲಿ ಸಂತ್ರಸ್ತರಿಗೆ ಮನೆಗಳ ನಿರ್ಮಾಣಕ್ಕಾಗಿ ಅಡಿಪಾಯ ಹಾಕಲು ಪ್ರತಿ ಮನೆಗೆ 1 ಲಕ್ಷ ರು.ನಂತೆ ಬಿಡುಗಡೆ ಮಾಡಲಾಗಿದೆ. ಆದರೆ, ಬಹಳಷ್ಟುಕಡೆ ಅಡಿಪಾಯ ಹಾಕುವ ಕೆಲಸ ನಡೆದಿಲ್ಲ. ಈ ಬಗ್ಗೆ ಅಧಿಕಾರಿಗಳು ಯಾವ ಕಾರಣಕ್ಕಾಗಿ ಪರಿಶೀಲನೆ ನಡೆಸಿಲ್ಲ ಎಂದು ಅಧಿಕಾರಿಗಳ ನಡೆಯ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಸಂಪುಟ ವಿಸ್ತರಣೆಗೆ BSY ಮುಹೂರ್ತ: ಅಮಿತ್ ಶಾ ಮಾಟೇ ಶಾಸನಂ..!...

ಪ್ರವಾಹ ಪೀಡಿತ ಪ್ರದೇಶದಲ್ಲಿ ಕೈಗೊಂಡಿರುವ ಕಾರ್ಯಗಳ ಕುರಿತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ವಾರದೊಳಗೆ ಜಿಲ್ಲೆಗಳಿಗೆ ಭೇಟಿ ನೀಡಿ ಸಮಸ್ಯೆ ಹರಿಹರಿಸಬೇಕು. ಭೂಕುಸಿತ ಮತ್ತು ಇನ್ನಿತರ ಕಾರಣಗಳಿಂದ ಮನೆ ನಿರ್ಮಿಸಲು ಸಾಧ್ಯವಾಗದ ಕಡೆಗಳಲ್ಲಿ ಪರ್ಯಾಯ ಜಮೀನು ಒದಗಿಸಬೇಕು. ನೆರೆ ಸಂತ್ರಸ್ತರ ಸಮಸ್ಯೆಗಳನ್ನು ಪಟ್ಟಿಮಾಡಿ ನೀಡಬೇಕು. ಆಧಾರ್‌ ಕಾರ್ಡ್‌ ಇಲ್ಲದವರಿಗೆ ಚೆಕ್‌ ಮೂಲಕ ಪರಿಹಾರ ನೀಡುವಂತೆ ಇದೇ ವೇಳೆ ಸೂಚನೆ ನೀಡಿದರು.

ಈವರೆಗೆ 5.06 ಲಕ್ಷ ರೈತರಿಗೆ 785.94 ಕೋಟಿ ರು. ಬೆಳೆ ಪರಿಹಾರ ವಿತರಣೆ ಮಾಡಲಾಗಿದೆ. ಸುಮಾರು 37 ಸಾವಿರ ರೈತರ ಬ್ಯಾಂಕ್‌ ಖಾತೆಗೆ ಆಧಾರ್‌ ಜೋಡಣೆ ಆಗಿರದ ಕಾರಣ ಪರಿಹಾರ ಪಾವತಿಗೆ ಅಡಚಣೆಯಾಗಿದೆ. ಈ ಬಗ್ಗೆ ಪರ್ಯಾಯ ವಿಧಾನಗಳನ್ನು ಅನುಸರಿಸುವಂತೆ ಸೂಚನೆ ನೀಡಿದರು. ಅಲ್ಲದೇ, ಒಂದು ವಾರದೊಳಗೆ ಪರಿಹಾರ ಪಾವತಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಹೇಳಿದರು. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರ ಖಾತೆಗಳಿಗೆ ಜಮೆಯಾದ ಸಬ್ಸಿಡಿ ಮತ್ತು ಬೆಳೆ ವಿಮೆ ಪರಿಹಾರ ಮೊತ್ತಗಳನ್ನು ಸಾಲ ಖಾತೆಗೆ ಜಮೆ ಮಾಡಲಾಗುತ್ತಿದೆ. ಈ ಬಗ್ಗೆ ರಾಜ್ಯಮಟ್ಟದ ಬ್ಯಾಂಕರುಗಳ ಸಮಿತಿ ಸಭೆಯಲ್ಲಿ ಸಾಲಕ್ಕೆ ಜಮೆ ಮಾಡಿಕೊಳ್ಳಬಾರದು. ಈ ಬಗ್ಗೆ ಲಿಖಿತ ಸೂಚನೆ ಕಳುಹಿಸುವಂತೆ ಮುಖ್ಯಕಾರ್ಯದರ್ಶಿಗಳಿಗೆ ಸೂಚಿಸಿದರು.

15 ದಿನಗಳಿಗೊಮ್ಮೆ ಜಿಲ್ಲೆಗೆ ಭೇಟಿ:

ವಿವಿಧ ಇಲಾಖೆಯ ಕಾರ್ಯದರ್ಶಿಗಳು 15 ದಿನಗಳಿಗೊಮ್ಮೆ ಜಿಲ್ಲೆಗಳಿಗೆ ಭೇಟಿ ನೀಡಬೇಕು. ಅಧಿಕಾರಿಗಳ ಸಭೆ ನಡೆಸಿ ವಿವಿಧ ಯೋಜನೆಗಳ ಅನುಷ್ಠಾನದ ಕುರಿತು ಖುದ್ದು ಪರಿಶೀಲನೆ ನಡೆಸಬೇಕು. ನಿಯಮಿತವಾಗಿ ಮಾಸಿಕ ಪ್ರಗತಿ ಪರಿಶೀಲನಾ ನಡೆಸಿ, ವರದಿಗಳನ್ನು ಸಂಬಂಧಪಟ್ಟಇಲಾಖೆಯ ಸಚಿವರಿಗೆ ಸಲ್ಲಿಸಬೇಕು. ಅಲ್ಲದೇ, ಮುಖ್ಯ ಕಾರ್ಯದರ್ಶಿಗೂ ವರದಿ ಸಲ್ಲಿಸಬೇಕು. ಇದರಿಂದ ಸಮಸ್ಯೆಗಳ ಕುರಿತು ತಿಳಿದುಕೊಂಡು ಬಗೆಹರಿಸಲು ಸಾಧ್ಯವಾಗಲಿದೆ. ಸಕಾಲ ಯೋಜನೆಯಡಿ ಕಡತ ವಿಲೇವಾರಿ ತ್ವರಿತವಾಗಿ ಆಗಬೇಕು. ಇತರೆ ಕಡತಗಳನ್ನು ಒಂದು ವಾರಕ್ಕಿಂತ ಹೆಚ್ಚಿನ ಅವಧಿಗೆ ಬಾಕಿ ಉಳಿಸಬಾರದು ಎಂದು ಯಡಿಯೂರಪ್ಪ ಸೂಚಿಸಿದರು.

ಎಲ್ಲ ಇಲಾಖೆಗಳಲ್ಲಿ ಇ-ಆಫೀಸ್‌ ವ್ಯವಸ್ಥೆಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕು. ಸರ್ಕಾರದ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಭೂಸ್ವಾಧೀನ ಪ್ರಕ್ರಿಯೆ ತ್ವರಿತವಾಗಿ ಪೂರ್ಣಗೊಳಿಸಬೇಕು. ಈ ಬಗ್ಗೆ ಅರಣ್ಯ ಮತ್ತು ಕಂದಾಯ ಇಲಾಖೆಗಳೊಂದಿಗೆ ಸಭೆ ನಡೆಸಿ ಇರುವ ತೊಡಕುಗಳನ್ನು ನಿವಾರಿಸಬೇಕು. ಶುದ್ಧ ಕುಡಿಯುವ ನೀರಿನ ಘಟಕಗಳು ಮತ್ತು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಬಹುತೇಕ ಯೋಜನೆಗಳು ವಿಫಲಗೊಂಡಿದ್ದು, ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಿತಿಗತಿಯ ಕುರಿತು ಅಧ್ಯಯನ ವರದಿ ಮತ್ತುಸಲಹೆಗಳನ್ನು ಪಡೆದು ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ 30,444 ಕೋಟಿ ರು. ಅನುದಾನ ಒದಗಿಸಲಾಗಿದ್ದು, ಈವರೆಗೆ 11,642 ಕೋಟಿ ರು. ಬಿಡುಗಡೆಯಾಗಿದೆ. 9667 ಕೋಟಿ ರು. ವೆಚ್ಚವಾಗಿದೆ. 2020ರ ಮಾ.15ರೊಳಗೆ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ, ಅನುದಾನ ವೆಚ್ಚ ಮಾಡಬೇಕು. ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವ್ಯಾಪ್ತಿಯ ಹಾಸ್ಟೆಲ್‌ ವೆಚ್ಚ ಮತ್ತು ವಿದ್ಯಾರ್ಥಿ ವೇತನಗಳಿಗೆ ಅನುದಾನವನ್ನು ಸಕಾಲದಲ್ಲಿ ಬಿಡುಗಡೆ ಮಾಡಬೇಕು. ಕಾರ್ಮಿಕರ ಪಿಂಚಣಿ ಯೋಜನೆಯಡಿ ಕೇಂದ್ರ ಸರ್ಕಾರವು 7 ಲಕ್ಷ ಗುರಿ ನೀಡಿತ್ತು. ರಾಜ್ಯದ ಲಕ್ಷ ಕಾರ್ಮಿಕರಿಗೆ ಪಿಂಚಣಿ ನೀಡಲು ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ ಎಂದರು.

ಸಭೆಯಲ್ಲಿ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಸಚಿವರಾದ ಕೆ.ಎಸ್‌.ಈಶ್ವರಪ್ಪ, ಆರ್‌.ಅಶೋಕ್‌, ವಿ.ಸೋಮಣ್ಣ, ಬಸವರಾ ಜ ಬೊಮ್ಮಾಯಿ, ಶಶಿಕಲಾ ಜೊಲ್ಲೆ ಮೊದಲಾದವರು ಪಾಲ್ಗೊಂಡಿದ್ದರು.