ಆಕ್ಸಿಜನ್ ಕೊರತೆಯಾದರೆ ನನ್ನ ಗಮನಕ್ಕೆ ತನ್ನಿ ಎಂದಿದ್ದು ರಾಜ್ಯದಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹಾಸಿಗೆ ಮತ್ತು ಆಮ್ಲಜನಕ ಸಮಸ್ಯೆಯ ಬಗ್ಗೆ ಹಲವು ಜಿಲ್ಲೆಗಳ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿದ ಸಿಎಂ ಯಡಿಯೂರಪ್ಪ ಅವರು ಮಾಹಿತಿ ಪಡೆದುಕೊಂಡರು.

ಬೆಂಗಳೂರು (ಏ.25): ‘ಆಮ್ಲಜನಕ ಮತ್ತು ರೆಮ್‌ಡೆಸಿವಿರ್‌ ಇಂಜೆಕ್ಷನ್‌ ಪೂರೈಕೆಯಲ್ಲಿ ಕೊರತೆ ಕಂಡು ಬಂದರೆ ತಕ್ಷಣ ಸಂಬಂಧಪಟ್ಟ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು. ಒಂದು ವೇಳೆ ಅವರು ತಕ್ಷಣ ಸ್ಪಂದಿಸದಿದ್ದರೆ ನನ್ನ ಗಮನಕ್ಕಾದರೂ ತನ್ನಿ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಜ್ಯದಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ಹಾಸಿಗೆ ಮತ್ತು ಆಮ್ಲಜನಕ ಸಮಸ್ಯೆಯ ಬಗ್ಗೆ ಹಲವು ಜಿಲ್ಲೆಗಳ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿದ ಯಡಿಯೂರಪ್ಪ ಅವರು ಮಾಹಿತಿ ಪಡೆದುಕೊಂಡರು.

ಕೊರೋನಾ ತುರ್ತು ಸ್ಥಿತಿ : ಹೆಚ್ಚಿದ ನೆರವು

ಜಿಲ್ಲಾವಾರು ಪರಿಸ್ಥಿತಿಯ ಕುರಿತು ಚರ್ಚೆ ನಡೆಸಿದ ಅವರು ಸೌಲಭ್ಯಗಳ ವಿವರಗಳನ್ನು ತಿಳಿದುಕೊಂಡು, ‘ಜನರಿಗೆ ಚಿಕಿತ್ಸೆಯ ಅಲಭ್ಯತೆಯಾಗದಂತೆ ಕ್ರಮ ಕೈಗೊಳ್ಳಬೇಕು. ಆಮ್ಲಜನಕ ಮತ್ತು ರೆಮ್‌ಡೆಸಿವಿರ್‌ನಲ್ಲಿ ಏನಾದರೂ ಕೊರತೆ ಕಂಡು ಬಂದರೆ ತಕ್ಷಣ ಸಂಬಂಧಪಟ್ಟಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು. ಒಂದು ವೇಳೆ ಅಧಿಕಾರಿಗಳು ತಕ್ಷಣ ಸ್ಪಂದಿಸಲು ಸಾಧ್ಯವಾಗದಿದ್ದರೆ ನನ್ನ ಗಮನಕ್ಕಾದರೂ ತರಬೇಕು. ಅಂತಿಮವಾಗಿ ರೋಗಿಗಳಿಗೆ ಚಿಕಿತ್ಸೆ ಸಿಗದೆ ಸಾವು ಸಂಭವಿಸುವಂತಾಗಬಾರದು’ ಎಂದು ತಾಕೀತು ಮಾಡಿದರು.

‘ಯಾವುದೇ ಕಾರಣಕ್ಕೂ ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ಕ್ರಮ ವಹಿಸಬೇಕು. ಯಾವುದಾದರೂ ತೀರಾ ಅಗತ್ಯತೆ ಕಂಡು ಬಂದರೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ಅಥವಾ ನನ್ನ ಗಮನಕ್ಕೆ ತರಬೇಕು. ಇದರಲ್ಲಿ ಮೀನಮೇಷ ಎಣಿಸಬೇಡಿ. ಜನರಿಗೆ ಸಮಸ್ಯೆಯಾಗದಂತೆ ಹೆಚ್ಚಿನ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.