ಬೆಂಗಳೂರು, (ಮೇ.28): ರಾಜ್ಯದಲ್ಲಿ ಕೊರೋನಾ ನಿಯಂತ್ರಣ ಸಂಬಂಧ ಸಚಿವರ ಜೊತೆ ಸಿಎಂ ಬಿಎಸ್ ಯಡಿಯೂರಪ್ಪ ನಡೆಸಿದ ಸಭೆ ಮುಕ್ತಾಯವಾಗಿದ್ದು, ಈ ವೇಳೆ ಮಹತ್ವದ ಚರ್ಚೆಗಳ ನಡೆದಿವೆ.

ಅದರಲ್ಲೂ ಹಳ್ಳಿಗಳಲ್ಲಿ ಕೊರೋನಾ ನಿಯಂತ್ರಣದ ಬಗ್ಗೆ ಮಹತ್ವದ ಚರ್ಚೆಗಳು ನಡೆದಿದ್ದು, ಈ ವೇಳೆ ಅಧಿಕಾರಿಗಳಿಗೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ಮಹತ್ವದ ಸೂಚನೆ ಕೊಟ್ಟಿದ್ದಾರೆ.

ಕರ್ನಾಟಕದಲ್ಲಿ ಕೊರೋನಾ ಇಳಿಮುಖ: ಹೆಚ್ಚಾಯ್ತು ಗುಣಮುಖ

 ಸದ್ಯ ಜಾರಿಯಲ್ಲಿರುವ ಕಠಿಣ ನಿಯಮಗಳಿಂದ ನಗರಗಳಲ್ಲಿ ಕೊವಿಡ್ ಪ್ರಕರಣಗಳ ಸಂಖ್ಯೆಯಲ್ಲಿ‌ ಇಳಿಕೆಯಾಗಿದೆ. ನಗರಗಳ ಜತೆಗೆ ಹಳ್ಳಿಗಳಲ್ಲಿ ಕೊವಿಡ್ ಸೋಂಕಿನ ಪ್ರಮಾಣ ಕಡಿಮೆ‌ ಮಾಡುವ ನಿಟ್ಟಿನಲ್ಲಿ ಒತ್ತು ನೀಡಬೇಕು. ವೈದ್ಯರ ನಡೆ ಹಳ್ಳಿಕಡೆ ಕಾರ್ಯಕ್ರಮವನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಚಿವ ಸಂಪುಟ ಸಭೆಯಲ್ಲಿ ಸೂಚನೆ ನೀಡಿದರು. 

ಕೊವಿಡ್ ಸೋಂಕುಮುಕ್ತರಾದವರು ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗುವಾಗ ಶಿಷ್ಟಾಚಾರ ಪಾಲನೆಯಾಗಬೇಕು. ಬ್ಲ್ಯಾಕ್ ಫಂಗಸ್ ಔಷಧ ಎಲ್ಲೇ ಸಿಕ್ಕಿದರೂ ಖರೀದಿಸಬೇಕು ಎಂದು ಸಿಎಂ ಯಡಿಯೂರಪ್ಪ ತಮ್ಮ ಸಹೋದ್ಯೋಗಿಗಳಿಗೆ ನಿರ್ದೇಶನ ನೀಡಿದರು.

ಸಿಎಂ ಅಧಿಕೃತ ನಿವಾಸ 'ಕಾವೇರಿ'ಯಲ್ಲಿ ನಡೆದ ಸಭೆಯಲ್ಲಿ ಹಲವು ಪ್ರಮುಖ ವಿಷಯಗಳನ್ನು ಚರ್ಚಿಸಲಾಯಿತು. ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಅಶ್ವತ್ಥ್​ ನಾರಾಯಣ, ಸಚಿವರಾದ ಆರ್. ಅಶೋಕ್, ಅರವಿಂದ ಲಿಂಬಾವಳಿ ಮತ್ತು ಉನ್ನತ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.