ಬೆಂಗಳೂರು [ನ. 02] :  ಇಂಗ್ಲಿಷ್ ಸಂಬಳಕ್ಕಾದರೆ, ಕನ್ನಡ ಉಂಬಳಕ್ಕೆ ಎಂಬ ಮಾತು ನಾಡಿನಲ್ಲಿ ಪ್ರಚಲಿತದಲ್ಲಿದೆ. ಆದರೆ, ಕನ್ನಡ ನಮ್ಮ ಸಂಬಳ ಹಾಗೂ ಉಂಬಳ ಎರಡಕ್ಕೂ ಆಗಬೇಕು. ಈ ದಿಸೆಯಲ್ಲಿ ಸರ್ಕಾರ ಕಾರ್ಯೋನ್ಮುಖವಾಗಿದ್ದು, ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ದೊರಕಿಸಿಕೊಡುವ ದಿಸೆಯಲ್ಲಿ ಪ್ರಯತ್ನ ನಡೆಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ಎರಡು ಸಂಸ್ಥೆಗಳು ಸೇರಿ ವಿವಿಧ ಕ್ಷೇತ್ರಗಳ ಸಾಧಕರಿಗೆ ೨೦೧೯ನೇ ಸಾಲಿನ ‘ರಾಜ್ಯೋತ್ಸವ ಪ್ರಶಸ್ತಿ’ ಪ್ರದಾನ ಮಾಡಿ ಮಾತನಾಡಿದ ಅವರು, ಖಾಸಗಿ ಕ್ಷೇತ್ರವು ಸೇರಿದಂತೆ ಎಲ್ಲಾ ರಂಗ ಗಳಲ್ಲೂ ಕನ್ನಡಿಗರಿಗೆ ಉದ್ಯೋಗಾವಕಾಶ ಹೆಚ್ಚಾಗ ಬೇಕು. ಈ ದಿಸೆಯಲ್ಲಿ ರಾಜ್ಯ ಸರ್ಕಾರ ಕಾರ್ಯೋನ್ಮುಖವಾಗಿದ್ದು, ಈಗಾಗಲೇ ಖಾಸಗಿ ಸಂಸ್ಥೆಗಳಲ್ಲಿನ ಡಿ ಹಾಗೂ ಸಿ ವರ್ಗದ ಉದ್ಯೋಗಗಳಿಗೆ ಕನ್ನಡಿಗರ ನೇಮಕಾತಿ ಕಡ್ಡಾಯಗೊಳಿಸಲಾಗಿದೆ ಎಂದರು.

ನಾಡು, ನುಡಿ, ನೆಲ, ಜಲ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ಈ ವಿಚಾರದಲ್ಲಿ ಯಾರಿಗೂ ಬಿಜೆಪಿ ಸರ್ಕಾರದ ಬಗ್ಗೆ ಅನುಮಾನ ಬೇಡ ಎಂದರು. ಭಾಷೆ-ಸಂಸ್ಕೃತಿಗೆ ಸಂಬಂಧ: ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಮಾತನಾಡಿ, ಸಂಸ್ಕೃತಿ ಹಾಗೂ ಭಾಷೆ ಒಂದನ್ನೊಂದು ಬಿಟ್ಟು ಇರಲಾರವು. ನಾವು ಭಾಷೆ ಕಳೆದುಕೊಂಡರೆ ಸಂಸ್ಕೃತಿಯನ್ನೂ ಕಳೆದುಕೊಳ್ಳು ತ್ತೇವೆ. ಎರಡನ್ನೂ ಉಳಿಸಿಕೊಳ್ಳುವುದು ವರ್ತಮಾನದ ಸವಾಲು. ಈ ಸವಾಲನ್ನು ನಾವೆಲ್ಲ ಸ್ವೀಕರಿಸಬೇಕು. ನಾವು ಎಷ್ಟೇ ಚೆನ್ನಾಗಿ ಇಂಗ್ಲಿಷ್ ಕಲಿತರೂ ಮಾತೃಭಾಷೆ ಕನ್ನಡವೇ ಆಗಿರುತ್ತದೆ. ಹಾಗಾಗಿ ಇಂಗ್ಲಿಷ್ ಸೇರಿ ಇತರೆ ನೂರು ಭಾಷೆಗಳನ್ನು ಕಲಿಯೋಣ ಎಂದರು. 

6 ವರ್ಷದಲ್ಲಿ ದೇಶ ನಿಜಕ್ಕೂ ಕಳೆದುಕೊಂಡ ಉದ್ಯೋಗ ಎಷ್ಟು? ಬೆಚ್ಚಿ ಬೀಳಿಸುವ ಸರ್ವೇ!...

ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ 2500 ಅರ್ಜಿ ಗಳು ಬಂದಿದ್ದವು. ಈ ಪೈಕಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ 64 ಮಂದಿಯನ್ನು ಮಾತ್ರ ಪ್ರಶಸ್ತಿಗೆ ಆಯ್ಕೆ ಮಾಡಿದ್ದೇವೆ. ಪ್ರಶಸ್ತಿಗೆ ಆಯ್ಕೆಯಾಗದೇ ಇರುವವರ ಸಾಧನೆ ಕಡಿಮೆ ಏನಿಲ್ಲ. ಮುಂದಿನ ದಿನಗಳಲ್ಲಿ ಅವರನ್ನೂ ಗುರುತಿಸುವುದಾಗಿ ಹೇಳಿದರು. 

ಮೇಯರ್ ಗೌತಮ್ ಕುಮಾರ್, ಶಾಸಕ ಉದಯ್ ಬಿ. ಗರುಡಾಚಾರ್, ಸಂಸದ ತೇಜಸ್ವಿ ಸೂರ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಆರ್.ಆರ್. ಜನ್ನು, ನಿರ್ದೇಶಕ ಎಸ್.ರಂಗಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.