Asianet Suvarna News Asianet Suvarna News

ತೌಕ್ಟೆ ರೌದ್ರಾವತಾರ: ಕೊರೋನಾ ಮಧ್ಯೆಯೂ ಪರಿಹಾರ ನೀಡಲು ಸಿಎಂ ಬಿಎಸ್‌ವೈ ಸೂಚನೆ

* ಭಾರೀ ಮಳೆಯಿಂದ ಮನೆ ಬಿಟ್ಟು ಹೊರಬಾರದ ಜನ 
* ಹಲವರನ್ನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ
* ಪರಿಹಾರ ಹಾಗೂ ರಕ್ಷಣಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಸಿಎಂ ಸೂಚನೆ 
 

CM BS Yediyurappa Ask Information about Tauktae Cyclone in Karnataka grg
Author
Bengaluru, First Published May 16, 2021, 11:51 AM IST

ಬಳ್ಳಾರಿ(ಮೇ.16): ಕರಾವಳಿ ಭಾಗದಲ್ಲಿ ಉಂಟಾಗಿರುವ ತೌಕ್ಟೆ ಚಂಡಮಾರುತದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು(ಭಾನುವಾರ) ಕರಾವಳಿ ಭಾಗದ ಜಿಲ್ಲಾಧಿಕಾರಿಗಳು ಹಾಗೂ ಉಸ್ತುವಾರಿ ಸಚಿವರುಗಳಿಂದ ಮಾಹಿತಿ ಪಡೆದುಕೊಂಡು, ಅಗತ್ಯ ಸೂಚನೆಗಳನ್ನ ನೀಡಿದ್ದಾರೆ. 

 

ಕೋವಿಡ್ ನಿಯಂತ್ರಣ ಕಾರ್ಯಗಳ ಜೊತೆಗೆ ಹಾನಿಗೆ ಒಳಗಾದ ಪ್ರದೇಶಗಳಿಗೆ ಭೇಟಿ‌ ನೀಡಿ ಪರಿಹಾರ ಹಾಗೂ ರಕ್ಷಣಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಸರ್ಕಾರದಿಂದ ಯಾವುದೇ ತುರ್ತು ನೆರವು ಬೇಕಿದ್ದರೂ ಸಂಬಂಧಪಟ್ಟ ಸಚಿವರುಗಳಿಗೆ ಅಥವಾ ತಮಗೆ ನೇರವಾಗಿ ಕರೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ. 

 

ಉಡುಪಿ ಜಿಲ್ಲೆಯಲ್ಲಿ ತೌಕ್ಟೆ ಚಂಡಮಾರುತದ ಅಬ್ಬರ ಜೋರಾಗಿದ್ದು, ಜಿಲ್ಲೆಯ ಕುಂದಾಪುರ, ಬೈಂದೂರಿನಲ್ಲಿ ಭಾರೀ ಪ್ರಮಾಣದಲ್ಲಿ ಗಾಳಿಸಹಿತ ಮಳೆಯಾಗುತ್ತಿದೆ. ನಿನ್ನೆ(ಶನಿವಾರ) ರಾತ್ರಿಯಿಡೀ ಸುರಿದ ಧಾರಾಕಾರ ಮಳೆಯಿಂದಾಗಿ ಈವರೆಗೆ ಜಿಲ್ಲೆಯಲ್ಲಿ ಅಂದಾಜು 40 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಸುಮಾರು 75 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಬೈಂದೂರು- ಮರವಂತೆ ಭಾಗದಲ್ಲಿ ಹಲವರನ್ನ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. ಹೀಗಾಗಿ ಇಂದು ಜಿಲ್ಲೆಯಲ್ಲಿ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.

ಚಂಡಮಾರುತ ಎಫೆಕ್ಟ್: ರಾಜ್ಯದಲ್ಲಿ ಇನ್ನೂ ಮೂರು ದಿನ ಭಾರೀ ಮಳೆ

ಈಜಿ ದಡ ಸೇರಿದ ಮತ್ತೊಬ್ಬ ಯುವಕ    

ಮಂಗಳೂರಿನಲ್ಲಿ ದೋಣಿ ಮಗುಚಿ ಬಿದ್ದ ಸಂದರ್ಭದಲ್ಲಿ ನೀರು ಪಾಲಾಗಿದ್ದ ನಸೀಮ್ ಎಂಬುವರು ಶನಿವಾರ ತಡರಾತ್ರಿ ಟ್ಯೂಬ್ ಸಹಾಯದಿಂದ ಈಜಿ ದಡ ಸೇರಿದ್ದಾರೆ. ನಸೀಮ್ ಉಡುಪಿಯ ಪಡುತೋನ್ಸೆ ಬೆಂಗ್ರೆ ಬಳಿ ದಡಕ್ಕೆ ಬಂದು ತಲುಪಿದ್ದಾರೆ. ಹರಿಯಾಣ ಮೂಲದ ನಸೀಮ್ ಮಂಗಳೂರು ಎಂಆರ್‌ಪಿಎಲ್ ಕಂಪನಿಯ ನೌಕರರಾಗಿದ್ದಾರೆ.

ಮಂಗಳೂರಿನಲ್ಲಿ ದೋಣಿ ಮಗುಚಿ ಬಿದ್ದ ಸಂದರ್ಭದಲ್ಲಿ ನಸೀಮ್ ನೀರು ಪಾಲಾಗಿದ್ದರು. ಇವರ ಜೊತೆಗೆ ನೀರು ಪಾಲಾಗಿದ್ದ ಇನ್ನಿಬ್ಬರೂ ಕೂಡ ಮಟ್ಟು ಪರಿಸರದಲ್ಲಿ ದಡ ಸೇರಿದ್ದಾರೆ ಎಂದು ತಿಳಿದು ಬಂದಿದೆ. ದಡ ಸೇರಿದ ನಸೀಮ್‌ ರನ್ನು ವಿಚಾರಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಮಲ್ಪೆ ಪೊಲೀಸರು.

ಇನ್ನು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ವನ್ನಳ್ಳಿಯಲ್ಲಿ ಅಘನಾಶಿನಿ ನದಿಯ ಕೋಡಿ ಒಡೆದು ಗ್ರಾಮದೊಳಗೆ ನೀರು ಹರಿದಿದೆ. ಇದರ ಪರಿಣಾಮ ಹಲವರ ಮನೆಯೊಳಗೆ ನೀರು ಹೊಕ್ಕಿದ್ದರಿಂದ ಅಪಾರ ಪ್ರಮಾಣ ಹಾನಿ ಸಂಭವಿಸಿದೆ. ನೆರೆಯ ಆರ್ಭಟದ‌ ನಡುವೆಯೇ ಹಲವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ ಸ್ಥಳೀಯರು.  ಎಸಿ ಅಜಿತ್ ರೈ ಹಾಗೂ ಪಿಎಸ್‌ಐ ಆನಂದ ಮೂರ್ತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮಸ್ಥರ ಮನವೊಲಿಸಿ ಸುರಕ್ಷಿತ ಸ್ಥಳಕ್ಕೆ ಕಳುಹಿಸಲು ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. 

ಅರಬ್ಬಿ ಸಮುದ್ರದಲ್ಲಿ 3 ಬೋಟು ದುರಂತ: ಐವರು ನಾಪತ್ತೆ

ಕುಮಟಾದಲ್ಲಿ ಮುಂದುವರಿದ ರಕ್ಷಣಾ ಕಾರ್ಯಾಚರಣೆ

ಚಂಡಮಾರುತದಿಂದ ಸಂಕಷ್ಟಕ್ಕೊಳಗಾಗಿರುವ ಕುಟುಂಬವನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲು ಸ್ಥಳೀಯರು ನೆರವಾಗಿದ್ದಾರೆ. ಒಂದೆಡೆ ನದಿ ನೀರು ಹರಿದರೆ ಮತ್ತೊಂದೆಡೆ ಸಮುದ್ರ ಭೋರ್ಗರೆಯುತ್ತಿದೆ. ಸಮುದ್ರದ ರಾಕ್ಷಸ ಅಲೆಗಳು ಮನೆಗಳತ್ತ ನುಗ್ಗುತ್ತಿವೆ. 

ಜಿಲ್ಲೆಯ ಶಿರಸಿ, ಯಲ್ಲಾಪುರ, ಸಿದ್ಧಾಪುರ, ಜೊಯಿಡಾ, ದಾಂಡೇಲಿಯಲ್ಲೂ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಮಳೆಯ ಕಿರಿಕಿರಿಯಿಂದಾಗಿ ಬೆಳಗ್ಗೆಯಿಂದಲೇ ಜನರು ಮನೆ ಬಿಟ್ಟು ಹೊರಬರುತ್ತಿಲ್ಲ. ಅರಬ್ಬಿ ಸಮುದ್ರದಲ್ಲಿ ಕಡಲ ಅಬ್ಬರದಿಂದ ಹಲವೆಡೆ ವಿದ್ಯುತ್ ಕಂಬ ಹಾಗೂ ಮರಗಳು ನೆಲ್ಕುರುಳಿವೆ. ಜಿಲ್ಲೆಯ ಕರಾವಳಿ ಹಾಗೂ ಘಟ್ಟದ ಮೇಲಿನ ತಾಲೂಕುಗಳಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ರಾತ್ರಿಯಿಂದ ವಿದ್ಯುತ್ ಕೈ ಕೊಟ್ಟಿದೆ. ಹೀಗಾಗಿ ಜನರ ಪರದಾಟ ನಡೆಸಿದ್ದಾರೆ.

ರಕ್ಷಣಾ ಕಾರ್ಯಾಚರಣೆ ಆರಂಭ

ಮಂಗಳೂರಿನಲ್ಲಿ ಎರಡು ಟಗ್ ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ. ಇಂಡಿಯನ್ ಕೋಸ್ಟ್ ಗಾರ್ಡ್‌ನ ಶಿಪ್‌ಗಳಿಂದ ಕಾರ್ಯಾಚರಣೆ ಆರಂಭವಾಗಿದೆ. ಭಾರೀ ಪ್ರಮಾಣದಲ್ಲಿ ಗಾಳಿ ಬೀಸುತ್ತಿರುವುದರಿಂದ ಕಾರ್ಯಾಚರಣೆಗೆ ತೊಡಕುಂಟಾಗಿದೆ. ಪತ್ತೆಯಾದ ಟಗ್‌ ಸ್ಥಳಕ್ಕೆ ತಲುಪಲು ಕೋಸ್ಟ್ ಗಾರ್ಡ್ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಭಾರೀ ಗಾಳಿಯ ಮಧ್ಯೆ ಆಳ ಸಮುದ್ರದಲ್ಲಿ ಟಗ್‌ನಲ್ಲಿರುವ 9 ಜನರು ಲಂಗರು ಹಾಕಿದ್ದಾರೆ.
 

Follow Us:
Download App:
  • android
  • ios