Asianet Suvarna News Asianet Suvarna News

ಬಂಜಾರ ಸಮಾಜಕ್ಕೆ 100 ಕೋಟಿ ಅನುದಾನ ಘೋಷಿಸಿದ ಸಿಎಂ ಯಡಿಯೂರಪ್ಪ

ಬಂಜಾರ ಸಮುದಾಯದ ಏಳಿಗೆಗಾಗಿ ಮುಂದಿನ ಬಜೆಟ್‌ನಲ್ಲಿ 100 ಕೋಟಿ ರುಪಾಯಿ ಮೀಸಲಿಡುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ..

CM BS Yediyurappa announces 100 crore grant for Banjara community
Author
Honnali, First Published Feb 15, 2020, 10:49 AM IST

ಹೊನ್ನಾಳಿ(ಫೆ.15): ರಾಜ್ಯದಲ್ಲಿನ ಲಂಬಾಣಿ ತಾಂಡಾಗಳನ್ನು ಸಂಪೂರ್ಣ ಕಂದಾಯ ಗ್ರಾಮಗಳಾಗಿ ಪರಿವರ್ತಿಸಲು ಕ್ರಮ ಕೈಗೊಂಡಿದ್ದು, ಬಂಜಾರ ಸಮಾಜದ ಸಮಗ್ರ ಅಭಿವೃದ್ಧಿಯ ಸಲುವಾಗಿ ಮುಂದಿನ ಬಜೆಟ್‌ನಲ್ಲಿ .100 ಕೋಟಿ ಅನುದಾನ ತೆಗೆದಿರಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಘೋಷಿಸಿದ್ದಾರೆ.

ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪ ಕ್ಷೇತ್ರ ಸಂತ ಸೇವಾಲಾಲ್‌ ಜನ್ಮಸ್ಥಾನದ ಮಹಾಮಠದಲ್ಲಿ ಶುಕ್ರವಾರ ಕರ್ನಾಟಕ ತಾಂಡಾ ಅಭಿವೃದ್ದಿ ನಿಗಮ, ಸೇವಾಲಾಲ್‌ ಕ್ಷೇತ್ರ ಅಭಿವೃದ್ಧಿ ಮತ್ತು ನಿರ್ವಹಣಾ ಪ್ರತಿಷ್ಠಾನಗಳ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಸೇವಾಲಾಲ್‌ರ 281ನೇ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಕಾಶಿ ವೀರಶೈವ ಗುರುಕುಲಕ್ಕೆ ಮೋದಿ, BSY: ಸಿದ್ಧಾಂತ ಶಿಖಾಮಣಿ ಕೃತಿ ಬಿಡುಗಡೆ

ಉದ್ಯೋಗ ಸೃಷ್ಟಿಗೆ ಕ್ರಮ:

ಶ್ರಮದ ದುಡಿಮೆ ಶಕ್ತಿಯ ಬದುಕು ಎಂಬ ತತ್ವದ ಮೇಲೆ ಈ ಸಮುದಾಯ ನಿಂತಿದೆ ಎಂದು ಶ್ಲಾಘಿಸಿದ ಮುಖ್ಯಮಂತ್ರಿ, ಸಮುದಾಯದವರು ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕವಾಗಿ ಸ್ವಾಭಿಮಾನದ ಬದುಕು ಸಾಗಿಸಲು ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಈ ಸಮುದಾಯದಲ್ಲಿ ಹೊಟ್ಟೆಪಾಡಿಗಾಗಿ ಗುಳೇ ಹೋಗುವುದು ಹೆಚ್ಚಾಗಿದ್ದು ಇದನ್ನು ತಪ್ಪಿಸಲು ತಾಂಡಾ ಅಭಿವೃದ್ಧಿ ನಿಗಮದ ಮೂಲಕ ಉದ್ಯೋಗ ಸೃಷ್ಟಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲಿನ ಎಲ್ಲಾ ಲಂಬಾಣಿ ತಾಂಡಗಳನ್ನು ಮುಂದಿನ ಎರಡು ವರ್ಷಗಳಲ್ಲಿ ಸಂಪೂರ್ಣವಾಗಿ ಕಂದಾಯ ಗ್ರಾಮವಾಗಿ ಪರಿವರ್ತಿಸಲಾಗುವುದು ಎಂದರು.

ಟೂರಿಸಂ ಇಲಾಖೆ ಮೂಲಕವೂ ಕ್ರಮ:

ಬಂಜಾರ ಸಂಸ್ಕೃತಿ ಉಳಿಸಿ ಬೆಳೆಸುವ ಮೂಲಕ ಪ್ರವಾಸೋದ್ಯಮ ಇಲಾಖೆ ಮೂಲಕ ವಿದೇಶಿ ಪ್ರವಾಸಿಗರನ್ನು ಆಕರ್ಷಿಸಲು ಸಿದ್ಧ ಉಡುಪುಗಳ ಘಟಕಗಳ ಹಾಗೂ ಕೌಶಲ್ಯ ಅಭಿವೃದ್ಧಿ ಮೂಲಕ ಸಮುದಾಯದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಪ್ರಥಮವಾಗಿ ಕೊಪ್ಪಳ ಬಂಡೆ ಪ್ರದೇಶದಲ್ಲಿ ಬಂಜಾರ್‌ ಸಂಸ್ಕೃತಿಯ ಸಿದ್ಧ ಉಡುಪುಗಳ ತಯಾರಿಕಾ ಘಟಕ ತೆರೆಯಲಾಗುವುದು. ಸೂರಗೊಂಡನಕೊಪ್ಪ ಕ್ಷೇತ್ರಕ್ಕೆ ಸಂಪರ್ಕ ರಸ್ತೆಗಳನ್ನು ನಿರ್ಮಿಸುವ ಮೂಲಕ ಇದನ್ನು ರಾಷ್ಟ್ರೀಯ ಪ್ರವಾಸಿ ತಾಣವನ್ನಾಗಿ ರೂಪಿಸಲಾಗುವುದು ಎಂದು ಭರವಸೆ ನೀಡಿದರು. ಇದೇವೇಳೆ ಸೂರಗೊಂಡನಕೊಪ್ಪದಲ್ಲಿ ಮದ್ಯವರ್ಜನ ಶಿಬಿರ ಏರ್ಪಡಿಸುವ ಮೂಲಕ ಸಮಾಜವನ್ನು ದುಶ್ಚಟಗಳಿಂದ ದೂರ ಮಾಡುವ ಕ್ರಮ ಕೈಗೊಂಡಿರುವುದು ಪ್ರಶಂಸನೀಯ ಎಂದರು.

ಖಾತೆ ಆಯ್ತು ಈಗ ನೂತನ ಸಚಿವರಿಂದ ಮತ್ತೊಂದು ಕ್ಯಾತೆ

ಸಂತ ಸೇವಾಲಾಲ್‌ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಳಿಕ ಜಾಗೂ ಬಂಜಾರ್‌ ವಾಹಿನಿಗೆ ಚಾಲನೆ ನೀಡಿದರು. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್‌, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ರೇಣುಕಾಚಾರ್ಯ, ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ ಅಧ್ಯಕ್ಷ ಪಿ.ರಾಜೀವ, ಮಾಜಿ ಸಚಿವ ಪರಮೇಶ್ವರ ನಾಯ್ಕ, ಮಹಾಮಠ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಚಿವ ರುದ್ರಪ್ಪ ಎಂ.ಲಮಾಣಿ, ಉಪಾಧ್ಯಕ್ಷ ಡಾ.ಈಶ್ವರನಾಯ್ಕ ಇದ್ದರು.
 

Follow Us:
Download App:
  • android
  • ios