ಅಂತಾರಾಜ್ಯ ಜಲ ವಿವಾದಗಳಿಗೆ ಸಂಬಂಧಿಸಿ ಕೇಂದ್ರದಿಂದಲೂ ಹಲವು ಅನುಮತಿ ಪಡೆಯಬೇಕಿದೆ. ಈ ಬಗ್ಗೆ ಸಿದ್ಧತೆ ಮಾಡಿಕೊಳ್ಳಲು ಸಂಬಂಧಪಟ್ಟಇಲಾಖೆಗಳಿಗೆ ಸೂಚನೆ ನೀಡಿದ್ದೇನೆ.
ಹುಬ್ಬಳ್ಳಿ (ಮಾ.28): ಅಂತಾರಾಜ್ಯ ಜಲ ವಿವಾದಗಳಿಗೆ ಸಂಬಂಧಿಸಿ ಕೇಂದ್ರದಿಂದಲೂ ಹಲವು ಅನುಮತಿ ಪಡೆಯಬೇಕಿದೆ. ಈ ಬಗ್ಗೆ ಸಿದ್ಧತೆ ಮಾಡಿಕೊಳ್ಳಲು ಸಂಬಂಧಪಟ್ಟಇಲಾಖೆಗಳಿಗೆ ಸೂಚನೆ ನೀಡಿದ್ದೇನೆ. ಏಪ್ರಿಲ್ ಮೊದಲ ವಾರದಲ್ಲಿ ಕೇಂದ್ರ ಜಲಶಕ್ತಿ ಸಚಿವರ ಭೇಟಿಯಾಗಲಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದರು. ಭಾನುವಾರ ಸುದ್ದಿಗಾರರ ಜತೆಗೆ ಮಾತನಾಡಿ, ಅಂತಾರಾಜ್ಯ ಜಲವಿವಾದಗಳನ್ನು ಶೀಘ್ರ ಬಗೆಹರಿಸಲು ಎಲ್ಲ ರೀತಿಯ ಪ್ರಯತ್ನ ಮಾಡಬೇಕಿದೆ. ಕಾನೂನಾತ್ಮಕ ವಿಚಾರಗಳಲ್ಲಿ ನ್ಯಾಯಾಲಯಗಳಿಂದ ಕೂಡಲೇ ಪರಿಹಾರ ಕಂಡುಕೊಳ್ಳಬೇಕಿದೆ.
ಅದಕ್ಕಾಗಿ ಕಾನೂನು ತಜ್ಞರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವೆ ಎಂದರು. ಇನ್ನು ಕೇಂದ್ರ ಸರ್ಕಾರದ ಕೆಲ ಇಲಾಖೆಗಳಿಂದಲೂ ಕೆಲ ಜಲ ಯೋಜನೆಗಳಿಗೆ ಅನುಮತಿ ಪಡೆಯಬೇಕಿದೆ. ಅದಕ್ಕಾಗಿ ಕೇಂದ್ರ ಜಲಸಚಿವರನ್ನು ಭೇಟಿ ಮಾಡಿ ಚರ್ಚಿಸುವೆ. ಆಮೇಲೆ ಅಗತ್ಯ ಬಿದ್ದರೆ ಸರ್ವಪಕ್ಷ ನಿಯೋಗ ಕೊಂಡೊಯ್ಯುವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಅದೇ ರೀತಿ ರೈಲ್ವೆ ಯೋಜನೆಗಳ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲು ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವುದು ಎಂದರು.
ಸ್ಟಾರ್ಟ್‌ಅಪ್ ಉದ್ದಿಮೆಗಳ ಸ್ಥಾಪನೆಯಲ್ಲಿ ರಾಜ್ಯ ಮಂಚೂಣಿ: ಸಿಎಂ ಬೊಮ್ಮಾಯಿ
ಅಭಿವೃದ್ಧಿ ಪರ್ವ: ಕೋವಿಡ್‌ನಿಂದ ಇಷ್ಟುದಿನ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಆಗಿರಲಿಲ್ಲ. ಇದೀಗ ಕೊರೋನಾ ಕರಿನೆರಳಿನಿಂದ ಹೊರಬಂದಿದ್ದೇವೆ. ಇದೀಗ ಅಭಿವೃದ್ಧಿ ಪರ್ವ ಶುರುವಾಗಿದೆ. ಯೋಜನಾಬದ್ಧವಾಗಿ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುವುದು. ತ್ವರಿತವಾಗಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಬಂಡವಾಳ ಹೂಡಿಕೆಗೆ ಒತ್ತು: ಕೈಗಾರಿಕೆಗೆ ಬಜೆಟ್‌ನಲ್ಲಿ ಘೋಷಣೆ ಮಾಡಿರುವಂತೆ ಜಮೀನು ಗುರುತಿಸುವಿಕೆ, ಅಭಿವೃದ್ಧಿ ಮತ್ತು ಬಂಡವಾಳ ಹೂಡಿಕೆ ಆಕರ್ಷಿಸಲು ಹೆಚ್ಚಿನ ಒತ್ತು ನೀಡಲಾಗಿದೆ. ಇವುಗಳಲ್ಲಿ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ ಎಂದರು. ಮಹಿಳೆಯರ ಸಬಲೀಕರಣಕ್ಕೆ ಬಜೆಟ್‌ನಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ. ಅದಕ್ಕೆ ರೂಪುರೇಷೆಗಳನ್ನು ನೀಡಲಾಗುತ್ತಿದೆ. ಕೃಷಿ ಸೆಕಂಡರಿ ನಿರ್ದೇಶನಾಲಯವನ್ನು ಸ್ಥಾಪಿಸಲು ಆದೇಶ ಮಾಡಲಾಗಿದೆ. ಶೀಘ್ರದಲ್ಲೇ ಇದು ಕಾರ್ಯಾರಂಭ ಮಾಡಲಾಗುವುದು ಎಂದರು.
ಸಮಿತಿ ರಚನೆ: ಮಾ.30ರಂದು ಬಜೆಟ್ ಅಧಿವೇಶನ ಮುಕ್ತಾಯವಾಗಲಿದೆ. ಬಜೆಟ್‌ನಲ್ಲಿ ಘೋಷಿಸಿರುವ ಎಲ್ಲ ಯೋಜನೆಗಳು ಅನುಷ್ಠಾನಕ್ಕೆ ಬರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅದಕ್ಕೆ ಹಣಕಾಸು ನೆರವು ದೊರೆಯಬೇಕು ಎಂಬ ಕಾರಣಕ್ಕೆ ಸಮಿತಿಯನ್ನೂ ರಚನೆ ಮಾಡಲಾಗಿದೆ. ಸಮಿತಿ ರಚನೆ ಕುರಿತು ಮಾ.28ಕ್ಕೆ ಅದೇಶ ಹೊರಡಿಸಲಾಗುವುದು. ಬಜೆಟ್ ಘೋಷಣೆ ಸಂಬಂಧಿಸಿ ಏಪ್ರಿಲ್ ಅಂತ್ಯದೊಳಗೆ ಕಾರ್ಯಾದೇಶ ಹೊರಡಿಸುವ ಯೋಚನೆ ಇದೆ. ಬಳಿಕ ಅವುಗಳ ಸಮರ್ಪಕ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ನುಡಿದರು.
Karnataka Politics: ಶಿಗ್ಗಾಂವಿ ಬಿಟ್ಟು ಬೇರೆ ಕಡೆ ಹೋಗುವ ಪ್ರಶ್ನೆಯೇ ಇಲ್ಲ: ಸಿಎಂ ಬೊಮ್ಮಾಯಿ
ಕಾಫಿ ಬೆಳೆಗಾರಿಗೂ ಸಬ್ಸಿಡಿ ವಿದ್ಯುತ್: ಕಾಫಿ ಬೆಳೆಗಾರರಿಗೆ ಸರ್ಕಾರವು ಸಿಹಿ ಸುದ್ದಿ ನೀಡಿದ್ದು, ಕೃಷಿ ಪಂಪ್‌ಸೆಟ್ ಬಳಸುವ ರೈತರಿಗೆ ನೀಡುವಂತೆ ಕಾಫಿ ಬೆಳೆಗಾರರಿಗೂ ಕೆಲವು ಷರತ್ತುಗಳೊಂದಿಗೆ 10 ಎಚ್‌ಪಿವರೆಗೆ ಸಬ್ಸಿಡಿ ದರದಲ್ಲಿ ವಿದ್ಯುತ್ ಪೂರೈಕೆ ಮಾಡಲು ಸರ್ಕಾರವು ಸಿದ್ಧವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದರು. ಮಂಗಳವಾರ ಶೂನ್ಯವೇಳೆಯಲ್ಲಿ ಜೆಡಿಎಸ್ ಸದಸ್ಯ ಎ.ಟಿ.ರಾಮಸ್ವಾಮಿ ಮತ್ತು ಬಿಜೆಪಿ ಸದಸ್ಯ ಅಪ್ಪಚ್ಚು ರಂಜನ್ ವಿಷಯವನ್ನು ಪ್ರಸ್ತಾಪಿಸಿದರು. ಇದಕ್ಕೆ ಬಿಜೆಪಿ ಸದಸ್ಯರಾದ ಸಿ.ಟಿ.ರವಿ, ಎಂ.ಪಿ.ಕುಮಾರಸ್ವಾಮಿ, ಕೆ.ಜಿ.ಬೋಪಯ್ಯ ಸೇರಿದಂತೆ ಇತರರು ಧ್ವನಿಗೂಡಿಸಿದರು. ಕಾಫಿ ನಾಡಿನ ಶಾಸಕರ ಒತ್ತಾಯಕ್ಕೆ ಮಣಿದ ಮುಖ್ಯಮಂತ್ರಿಗಳು ಸದನದಲ್ಲಿ ಕೆಲವು ಷರತ್ತುಗಳೊಂದಿಗೆ ಸಬ್ಸಿಡಿ ದರದಲ್ಲಿ ವಿದ್ಯುತ್ ಪೂರೈಕೆ ಮಾಡಲು ಸಿದ್ಧವಿದೆ ಎಂದು ಪ್ರಕಟಿಸಿದ್ದರು.
