ಬಜೆಟ್‌ ಮೇಲಿನ ಚರ್ಚೆಗೆ ಉತ್ತರ ನೀಡುವ ವೇಳೆ ಕಾಂಗ್ರೆಸ್‌ ವಿರುದ್ಧ ಭ್ರಷ್ಟಾಚಾರ ಆರೋಪಗಳನ್ನು ಹೊರಿಸಿ ಹರಿಹಾಯ್ದ ಅವರು, ಇತ್ತೀಚೆಗೆ ಕಾಂಗ್ರೆಸ್‌ ನಾಯಕರು ಬಿಜೆಪಿ ಸರ್ಕಾರ ತರಾತುರಿಯಲ್ಲಿ ನೀರಾವರಿ ಟೆಂಡರ್‌ಗಳನ್ನು ನೀಡಿದೆ ಎಂದು ದೊಡ್ಡ ವಿವಾದ ಸೃಷ್ಟಿಸಲು ಯತ್ನಿಸಿದರು. 

ವಿಧಾನಸಭೆ (ಫೆ.24): ‘ನಮ್ಮ ಸರ್ಕಾರ ತರಾತುರಿಯಲ್ಲಿ 4,410 ಕೋಟಿ ರು. ಮೊತ್ತದ ನೀರಾವರಿ ಟೆಂಡರ್‌ಗಳಿಗೆ ಅನುಮೋದನೆ ನೀಡಿದೆ ಎಂದು ಆರೋಪ ಮಾಡುತ್ತಿರುವ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ತಮ್ಮ ಕೊನೆಯ ವರ್ಷದ ಅವಧಿಯಲ್ಲಿ 9 ತಿಂಗಳಲ್ಲೇ 11,838 ಕೋಟಿ ರು.ಗಳ ನೀರಾವರಿ ಟೆಂಡರ್‌ಗಳಿಗೆ ಅನುಮೋದನೆ ನೀಡಿದ್ದರು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬಜೆಟ್‌ ಮೇಲಿನ ಚರ್ಚೆಗೆ ಉತ್ತರ ನೀಡುವ ವೇಳೆ ಕಾಂಗ್ರೆಸ್‌ ವಿರುದ್ಧ ಭ್ರಷ್ಟಾಚಾರ ಆರೋಪಗಳನ್ನು ಹೊರಿಸಿ ಹರಿಹಾಯ್ದ ಅವರು, ಇತ್ತೀಚೆಗೆ ಕಾಂಗ್ರೆಸ್‌ ನಾಯಕರು ಬಿಜೆಪಿ ಸರ್ಕಾರ ತರಾತುರಿಯಲ್ಲಿ ನೀರಾವರಿ ಟೆಂಡರ್‌ಗಳನ್ನು ನೀಡಿದೆ ಎಂದು ದೊಡ್ಡ ವಿವಾದ ಸೃಷ್ಟಿಸಲು ಯತ್ನಿಸಿದರು. ನಮ್ಮ ಸರ್ಕಾರ 2022ರ ಡಿಸೆಂಬರ್‌ನಿಂದ 2023ರ ಫೆಬ್ರುವರಿವರೆಗೆ 4,410 ಕೋಟಿ ರು. ಮೊತ್ತದ ಟೆಂಡರ್‌ಗಳಿಗೆ ಒಪ್ಪಿಗೆ ನೀಡಿದೆ. ಕಳೆದ ವರ್ಷವೇ ಟೆಂಡರ್‌ ಕರೆದಿದ್ದರೂ ಟೆಂಡರ್‌ ಪರಿಶೀಲನಾ ಸಮಿತಿ ನೇಮಿಸಿರುವುದರಿಂದ ಎಲ್ಲಾ ಹಂತದಲ್ಲೂ ಪರಿಶೀಲನೆಯಾಗಿ ಟೆಂಡರ್‌ಗೆ ಅನುಮೋದನೆ ದೊರೆಯಲು ವಿಳಂಬವಾಗಿದೆ. ಅದು ಚುನಾವಣಾ ತರಾತುರಿಯಲ್ಲಿ ಮಾಡಿರುವ ಟೆಂಡರ್‌ಗಳಲ್ಲ ಎಂದು ಸ್ಪಷ್ಟನೆ ನೀಡಿದರು.

‘ಗೃಹಿಣಿ ಶಕ್ತಿ’ಯಡಿ 500 ಬದಲು 1000: ಸಿಎಂ ಬೊಮ್ಮಾಯಿ ಘೋಷಣೆ

ಇದೇ ವೇಳೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಟೆಂಡರ್‌ಗಳನ್ನು ಪ್ರಸ್ತಾಪಿಸಿದ ಅವರು, ಇದೇ ಸಿದ್ದರಾಮಯ್ಯ ಅವರ ಸರ್ಕಾರ ತಮ್ಮ ಅವಧಿಯ ಕೊನೆಯ ವರ್ಷದಲ್ಲಿ 2017ರ ಮಾಚ್‌ರ್‍ನಿಂದ ಡಿಸೆಂಬರ್‌ ವೇಳೆಗೆ 11,838 ಕೋಟಿ ರು.ಗಳ ನೀರಾವರಿ ಟೆಂಡರ್‌ಗಳಿಗೆ ಅನುಮೋದನೆ ಪಡೆದಿತ್ತು. ಇವರಿಗೆ ನಮಗೆ ಪಾಠ ಹೇಳುವ ನೈತಿಕತೆ ಇದೆಯೇ? ಎಂದು ಕಿಡಿಕಾರಿದರು.

ಇದೇ ವೇಳೆ ಅನ್ನಭಾಗ್ಯ ಯೋಜನೆ ತಾವೇ ತಂದಿದ್ದು ಎಂದು ಬೀಗುತ್ತಿರುವ ಸಿದ್ದರಾಮಯ್ಯ ಅವರು ತಾವು ಅಧಿಕಾರಕ್ಕೆ ಬರುವ ಮೊದಲು ಪಡಿತರ ಅಂಗಡಿಗಳು ಇರಲಿಲ್ಲ. ಅಕ್ಕಿಯೇ ನೀಡುತ್ತಿರಲಿಲ್ಲ ಎಂಬಂತೆ ಬಿಂಬಿಸುತ್ತಿದ್ದಾರೆ. 1950 ರಿಂದಲೂ ಪಡಿತರ ಅಕ್ಕಿ ನೀಡುವ ಪದ್ಧತಿ ಇದೆ. ಇದರಲ್ಲಿ ಬಹುಪಾಲು ಹಣ ಕೇಂದ್ರದಿಂದಲೇ ಬರುತ್ತದೆ. ಕೊರೋನಾ ಅವಧಿಯಲ್ಲಿ 10 ಕೆಜಿ ಅಕ್ಕಿ ನೀಡಿದ ನರೇಂದ್ರ ಮೋದಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಹೇಳಿದರು.

ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಧಾನ್‌ ನೇತೃತ್ವದಲ್ಲಿ ಸಭೆ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚು ಸ್ಥಾನಗಳನ್ನು ಗಳಿಸುವ ನಿಟ್ಟಿನಲ್ಲಿ ಬಿಜೆಪಿಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್‌ ನೇತೃತ್ವದಲ್ಲಿ ನಗರವನ್ನು ಪ್ರತಿನಿಧಿಸುವ ಸಚಿವರು, ಶಾಸಕರು ಹಾಗೂ ಸಂಸದರ ಸಭೆ ನಡೆಯಿತು. ವಾಸ್ತವವಾಗಿ ಈ ಸಭೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೇತೃತ್ವದಲ್ಲಿ ನಡೆಯಬೇಕಿತ್ತು. ಆದರೆ, ಸತತ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಬಳಲಿದ್ದ ಶಾ ಅವರು ವಿಶ್ರಾಂತಿ ಪಡೆಯಬೇಕಿದ್ದ ಕಾರಣ ಆಗಮಿಸಲಿಲ್ಲ. ಹೀಗಾಗಿ, ಪ್ರಧಾನ್‌ ಅವರೇ ಕೆಲನಿಮಿಷಗಳ ಕಾಲ ಸಭೆ ನಡೆಸಿದರು. ಮುಂದಿನ ಕೆಲವು ದಿನಗಳ ಬಳಿಕ ಮತ್ತೊಂದು ಬಾರಿ ಸಭೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ರಾಜಧಾನಿ ಬೆಂಗಳೂರಿನಲ್ಲಿ 28 ವಿಧಾನಸಭಾ ಕ್ಷೇತ್ರಗಳಿರುವುದರಿಂದ ಹಳೆ ಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನ ಗಳಿಸಲು ಬೆಂಗಳೂರು ಮುಖ್ಯವಾದದ್ದು. ಈ ಹಿನ್ನೆಲೆಯಲ್ಲಿ ಈಗಿರುವ ಶಾಸಕರು ತಾವು ಗೆಲ್ಲುವುದಲ್ಲದೆ ಮತ್ತೊಂದು ಕ್ಷೇತ್ರವನ್ನು ಗೆಲ್ಲಿಸುವತ್ತ ಗಮನಹರಿಸಬೇಕು. 25 ಸ್ಥಾನಗಳನ್ನು ಗೆಲ್ಲಲು ಬೇಕಾದ ತಂತ್ರ ರೂಪಿಸುವ ಅಗತ್ಯವಿದೆ ಎಂಬ ಸಲಹೆ ಸಭೆಯಲ್ಲಿ ಕೇಳಿಬಂತು.

ಹಾಸನದಲ್ಲಿ ಭವಾನಿ ರೇವಣ್ಣ ಪ್ರಚಾರ: ಮನೆ ದೇವರಿಗೆ ವಿಶೇಷ ಪೂಜೆ

ಪಕ್ಷ ಸಂಘಟನೆ ಬಗ್ಗೆ ಸಚಿವರು ಹಾಗೂ ಶಾಸಕ-ಸಂಸದರ ಅಭಿಪ್ರಾಯ ಆಲಿಸಿದ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್‌, ಸಹ ಉಸ್ತುವಾರಿಗಳಾದ ಮಾನ್ಸುಖ್‌ ಮಾಂಡವಿಯ ಹಾಗೂ ಅಣ್ಣಾಮಲೈ ಅವರು ಮುಂದಿನ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸೋಣ ಎಂಬ ಮಾತನ್ನು ಹೇಳಿದರು ಎನ್ನಲಾಗಿದೆ. ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಅವರು ಉಪಸ್ಥಿತರಿದ್ದರು.