ಮಂತ್ರಿ ಬಳಿ 2 ಲಕ್ಷ ಸಿಕ್ಕಾಗ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ರಾ?: ಸಿದ್ದುಗೆ ಸಿಎಂ ತಿರುಗೇಟು
ಬಿಜೆಪಿ ಸರ್ಕಾರ ಲೋಕಾಯುಕ್ತಕ್ಕೆ ಹೆಚ್ಚಿನ ಬಲ ನೀಡಿದೆ. ಹೀಗಾಗಿ, ಲೋಕಾಯುಕ್ತದಿಂದ ಯಾವುದೇ ಪಕ್ಷ ಭೇದವಿಲ್ಲದೆ ನಿಷ್ಪಕ್ಷಪಾತವಾದ ತನಿಖೆ ಕಾರ್ಯ ನಡೆಯುತ್ತಿದೆ. ಲೋಕಾಯುಕ್ತರು ಯಾವುದೇ ಪಕ್ಷ ಭೇದವಿಲ್ಲದೆ ದಾಳಿ ನಡೆಸಿ, ಭ್ರಷ್ಟರನ್ನು ಬಂಧಿಸಿರುವುದೇ ಇದಕ್ಕೆ ನಿದರ್ಶನ ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದ ಸಿಎಂ ಬೊಮ್ಮಾಯಿ
ಚಿತ್ರದುರ್ಗ(ಮಾ.05): ‘ಸಿದ್ದರಾಮಯ್ಯನವರೇ, ಈ ಹಿಂದೆ ನೀವು ಮುಖ್ಯಮಂತ್ರಿಯಾಗಿದ್ದಾಗ ಸಚಿವರ ಕೊಠಡಿಯಲ್ಲೇ ಎರಡು ಲಕ್ಷ ರು. ಸಿಕ್ಕಿತ್ತು. ಶಾಸಕರ ಮೇಲೂ ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿದ್ದವು. ಅಂದು ನೀವು ಯಾವ ಸಚಿವರು, ಶಾಸಕರ ರಾಜೀನಾಮೆ ಪಡೆದಿದ್ರಿ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ.
ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಪಾಲ್ಗೊಳ್ಳಲು ಶನಿವಾರ ಚಿತ್ರದುರ್ಗಕ್ಕೆ ಆಗಮಿಸಿದ್ದ ಅವರು, ಇಲ್ಲಿನ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಮಾಡಾಳು ವಿರೂಪಾಕ್ಷಪ್ಪ ಪುತ್ರನ ಮೇಲಿನ ಲೋಕಾಯುಕ್ತ ದಾಳಿ ಹಿನ್ನೆಲೆಯಲ್ಲಿ ಶಾಸಕರ ರಾಜೀನಾಮೆ ಪಡೆಯಬೇಕು ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ, ಬಿಜೆಪಿ ಸರ್ಕಾರ ಲೋಕಾಯುಕ್ತಕ್ಕೆ ಹೆಚ್ಚಿನ ಬಲ ನೀಡಿದೆ. ಹೀಗಾಗಿ, ಲೋಕಾಯುಕ್ತದಿಂದ ಯಾವುದೇ ಪಕ್ಷ ಭೇದವಿಲ್ಲದೆ ನಿಷ್ಪಕ್ಷಪಾತವಾದ ತನಿಖೆ ಕಾರ್ಯ ನಡೆಯುತ್ತಿದೆ. ಲೋಕಾಯುಕ್ತರು ಯಾವುದೇ ಪಕ್ಷ ಭೇದವಿಲ್ಲದೆ ದಾಳಿ ನಡೆಸಿ, ಭ್ರಷ್ಟರನ್ನು ಬಂಧಿಸಿರುವುದೇ ಇದಕ್ಕೆ ನಿದರ್ಶನ ಎಂದು ತಿರುಗೇಟು ನೀಡಿದರು.
ಲಂಚ ಪ್ರಕರಣ: ಬಿಜೆಪಿ ಶಾಸಕ ಮಾಡಾಳುಗಾಗಿ ಲೋಕಾ ಬೇಟೆ..!
ಈ ಹಿಂದೆ ಕಾಂಗ್ರೆಸ್, ತನ್ನ ಪಾಪ ಕರ್ಮಗಳನ್ನು ಮುಚ್ಚಿ ಹಾಕಲು ಲೋಕಾಯುಕ್ತವನ್ನು ದುರ್ಬಲಗೊಳಿಸಿತ್ತು. ಇಂತಹ 59 ಭ್ರಷ್ಟಾಚಾರ ಪ್ರಕರಣಗಳನ್ನು ಮುಚ್ಚಿ ಹಾಕುವುದು ಕಾಂಗ್ರೆಸ್‌ನ ಪ್ರಮುಖ ಉದ್ದೇಶವಾಗಿತ್ತು. ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ನ ಹಗರಣಗಳನ್ನು ಸಹ ಹೊರಗೆಳೆಯಲಾಗುವುದು. ಇದಕ್ಕೆ ಜನರೇ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.
ಬಿಜೆಪಿ ವಿರುದ್ಧ ಭ್ರಷ್ಟಾಚಾರದ ಬಗ್ಗೆ ಆರೋಪ ಮಾಡುವುದಕ್ಕೂ ಮೊದಲು ಕಾಂಗ್ರೆಸ್, ತನ್ನ ಎಲೆಯಲ್ಲಿ ಬಿದ್ದಿರುವ ಕತ್ತೆಯನ್ನು ನೋಡಿಕೊಳ್ಳಬೇಕು. ಎಷ್ಟುಭ್ರಷ್ಟಾಚಾರ ಅವರ ಅಧಿಕಾರಾವಧಿಯಲ್ಲಿ ನಡೆದಿತ್ತು? ಎಷ್ಟು ಸಲ ಅವರು ರಾಜೀನಾಮೆ ನೀಡಬೇಕಿತ್ತು ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಹರಿಹಾಯ್ದರು.
ಇದೇ ವೇಳೆ, ಕೊಲೆಗಡುಕ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಅತಿ ಹೆಚ್ಚು ಕೊಲೆಗಳು ನಡೆದಿರುವುದು ಸಿದ್ದರಾಮಯ್ಯ ಅಧಿಕಾರದ ಅವಧಿಯಲ್ಲಿ. ಅದರ ದೊಡ್ಡ ಪಟ್ಟಿಯೇ ಇದೆ. ಧರ್ಮ, ಜಾತಿ, ರಾಜಕೀಯ ದ್ವೇಷದಲ್ಲಿ ಸರಣಿ ಕೊಲೆಗಳಾದವು. ಕೊಲೆಗೆ ಕಾರಣವಾಗಿದ್ದ ಎಸ್‌ಡಿಪಿಐ, ಪಿಎಫ್‌ಐ ಕೇಸುಗಳನ್ನೇ ಕಾಂಗ್ರೆಸ್‌ನವರು ರದ್ದು ಮಾಡಿದರು. ಈಗ ಬಿಜೆಪಿಯವರ ರಾಜೀನಾಮೆ ಕೇಳಲು ಅವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.