ಏರ್‌ಪೋರ್ಟ್‌ನಲ್ಲೇ ಮಂಕಿಪಾಕ್ಸ್ ಸೋಂಕಿತರ ಪತ್ತೆಗೆ ಸಿಎಂ ಕಟ್ಟಪ್ಪಣೆ
ಸೋಂಕು ದೃಢಪಟ್ಟ ವ್ಯಕ್ತಿಗಳನ್ನು 21 ದಿನಗಳ ಕಾಲ ಕ್ವಾರಂಟೈನ್ ಮಾಡಬೇಕು. ಹಾಗೆಯೇ ಸೋಂಕಿತರ ಚಿಕಿತ್ಸೆ, ಸಂಪರ್ಕಿತರ ಪತ್ತೆಯಲ್ಲಿ ಕೇಂದ್ರ ಸರ್ಕಾರ ನೀಡಿರುವ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದ ಸಿಎಂ ಬೊಮ್ಮಾಯಿ
ಬೆಂಗಳೂರು(ಆ.03): ಮಂಕಿಪಾಕ್ಸ್ ಸೋಂಕಿತರು ಮತ್ತು ಗುಣಲಕ್ಷಣ ಹೊಂದಿರುವವರನ್ನು ರಾಜ್ಯದ ವಿಮಾನ ನಿಲ್ದಾಣಗಳಲ್ಲಿ ಪತ್ತೆ ಹಚ್ಚಿ ಪರೀಕ್ಷೆಗೆ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕೇರಳದಲ್ಲಿ ಒಬ್ಬ ವ್ಯಕ್ತಿ ಮಂಕಿಪಾಕ್ಸ್‌ನಿಂದ ಮರಣವನ್ನಪ್ಪಿರುವುದು ಮತ್ತು ದೇಶದಲ್ಲಿ ಈಗಾಗಲೇ ಒಟ್ಟು ಆರು ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಕರೆದಿದ್ದ ಉನ್ನತ ಮಟ್ಟದ ಸಭೆಯಲ್ಲಿ ಸೋಂಕು ಹರಡದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮುಖ್ಯಮಂತ್ರಿಗಳು ಚರ್ಚಿಸಿದರು.
ಸೋಂಕು ದೃಢಪಟ್ಟ ವ್ಯಕ್ತಿಗಳನ್ನು 21 ದಿನಗಳ ಕಾಲ ಕ್ವಾರಂಟೈನ್ ಮಾಡಬೇಕು. ಹಾಗೆಯೇ ಸೋಂಕಿತರ ಚಿಕಿತ್ಸೆ, ಸಂಪರ್ಕಿತರ ಪತ್ತೆಯಲ್ಲಿ ಕೇಂದ್ರ ಸರ್ಕಾರ ನೀಡಿರುವ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದರು.
ಮಂಕಿಪಾಕ್ಸ್ ಸೋಂಕಿಗೆ ಚಿಕಿತ್ಸೆ ನೀಡಬಹುದಾದ ಖಾಸಗಿ ಸಂಸ್ಥೆಗಳನ್ನು ಗುರುತಿಸಬೇಕು, ವೈದ್ಯಕೀಯ ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಬೇಕು, ಸೋಂಕಿನ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ವ್ಯಾಪಕವಾಗಿ ಪ್ರಚಾರ ಕಾರ್ಯ ಕೈಗೊಳ್ಳಬೇಕು ಎಂದು ಬಸವರಾಜ ಬೊಮ್ಮಾಯಿ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಹೇಳಿದರು.
ಮಂಕಿಪಾಕ್ಸ್ ಅಲರ್ಟ್; ಪುರುಷ ಸಲಿಂಗಕಾಮಿಗಳು ಲೈಂಗಿಕ ಸಂಬಂಧ ಮಿತಿಗೊಳಿಸಿ, WHO ವಾರ್ನಿಂಗ್
ರಾಜ್ಯದ ಮೂವರು ವ್ಯಕ್ತಿಗಳ ಪೈಕಿ ಇಬ್ಬರು ವ್ಯಕ್ತಿಗಳ ಪರೀಕ್ಷಾ ವರದಿ ನೆಗೆಟಿವ್ ಇದೆ. ಬೆಲ್ಜಿಯಂನಿಂದ ಪ್ರಯಾಣ ಮಾಡಿದ್ದ ಉತ್ತರ ಕನ್ನಡ ಜಿಲ್ಲೆಯ ವ್ಯಕ್ತಿಯ ಪರೀಕ್ಷಾ ವರದಿ ಇನ್ನೂ ಬರಬೇಕಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಸಭೆಯಲ್ಲಿ ಆರೋಗ್ಯ ಸಚಿವ ಡಾ. ಕೆ.ಸುಧಾಕರ್, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಆರೋಗ್ಯ ಇಲಾಖೆ ಆಯುಕ್ತ ಡಿ.ರಂದೀಪ್, ರಾಷ್ಟ್ರೀಯ ಆರೋಗ್ಯ ಮಿಷನ್‌ನ ನಿರ್ದೇಶಕಿ ಡಾ. ಅರುಂಧತಿ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಆರೋಗ್ಯ ಟಾಸ್‌್ಕ ಫೋರ್ಸ್ ಅಧ್ಯಕ್ಷ ಡಾ. ಸುದರ್ಶನ್ ಮೊದಲಾದವರು ಉಪಸ್ಥಿತರಿದ್ದರು.
ಆತಂಕ ಬೇಡ-ಸುಧಾಕರ್:
ಸಭೆಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ. ಸುಧಾಕರ್, ಕೋವಿಡ್ ರೀತಿ ಮಂಕಿಪಾಕ್ಸ್ ವೇಗವಾಗಿ ಮತ್ತು ಸುಲಭವಾಗಿ ಹರಡುವುದಿಲ್ಲ. ಸಲಿಂಗಕಾಮಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಎಂದು ವರದಿಯಾಗಿದೆ. ಯಾರು ಸೋಂಕಿತರ ನಿಕಟ ಸಂಪರ್ಕದಲ್ಲಿ ದೀರ್ಘಕಾಲ ಇರುತ್ತಾರೋ ಅವರಲ್ಲಿ ಸೋಂಕು ಕಾಣಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.
ಅಮೆರಿಕದಲ್ಲಿಒಂದೇ ದಿನ ದಾಖಲೆಯ 1048 ಹೊಸ ಪ್ರಕರಣಗಳು ಪತ್ತೆ; ಭಾರತದಲ್ಲೂ ಹೆಚ್ಚಿದ ಆತಂಕ
ನಾವು ಕೇರಳದ ಗಡಿಯಲ್ಲಿ ಈಗಾಗಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದೇವೆ. ಬೆಂಗಳೂರು ಮತ್ತು ಮಂಗಳೂರಿನಲ್ಲಿ ಮಂಕಿಪಾಕ್ಸ್ ಚಿಕಿತ್ಸೆಗಾಗಿ ಆಸ್ಪತ್ರೆ ವ್ಯವಸ್ಥೆ ಮಾಡಿದ್ದೇವೆ. ಜ್ವರ ಮತ್ತು ದದ್ದು ಮಂಕಿಪಾಕ್ಸ್‌ನ ಪ್ರಮುಖ ಗುಣಲಕ್ಷಣ. ಸೋಂಕಿತರ ಪತ್ತೆಗಾಗಿ ವಿಮಾನ ನಿಲ್ದಾಣ ಮತ್ತು ಬಂದರುಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಮಾಡುತ್ತಿದ್ದೇವೆ. ಯಾರಿಗೆ ಚರ್ಮದ ಮೇಲೆ ದದ್ದುಗಳಿರುತ್ತವೆಯೋ ಅವರು ರಾಜ್ಯ ಪ್ರವೇಶಿಸಿದ ತಕ್ಷಣ ತಪಾಸಣೆಗೊಳ್ಳಬೇಕು. ಅನುಮಾನ ಬಂದರೆ ಆಸ್ಪತ್ರೆಗೆ ದಾಖಲು ಮಾಡುತ್ತೇವೆ. ಇದಕ್ಕಾಗಿ ಆಸ್ಪತ್ರೆಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.
80 ದೇಶಗಳಲ್ಲಿ ಈ ಸೋಂಕು ಪತ್ತೆಯಾಗಿದ್ದು ಒಟ್ಟು 22 ಸಾವಿರ ಜನರಲ್ಲಿ ಸೋಂಕು ಇರುವುದು ಖಚಿತ ಪಟ್ಟಿದೆ. ಭಾರತದಲ್ಲಿ ಕೇರಳದಲ್ಲಿ ನಾಲ್ಕು ಮತ್ತು ಕೇರಳದಲ್ಲಿ ಎರಡು ಪ್ರಕರಣ ಪತ್ತೆಯಾಗಿದೆ. ಕರ್ನಾಟಕದಲ್ಲಿ ಇದುವರೆಗೆ ಸೋಂಕು ಪತ್ತೆಯಾಗಿಲ್ಲ ಎಂದು ಆರೋಗ್ಯ ಸಚಿವರು ತಿಳಿಸಿದರು.