ಕಬ್ಬಿನ ಎಫ್‌ಆರ್‌ಪಿ (ನ್ಯಾಯೋಚಿತ ಮೌಲ್ಯವರ್ಧಿತ ಬೆಲೆ) ಹೆಚ್ಚಿಸುವ ಸಂಬಂಧ  ಸಭೆ  ಶೀಘ್ರದಲ್ಲೇ ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ರೈತ ಮುಖಂಡರೊಂದಿಗೆ ಸಭೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ

ಬೆಂಗಳೂರು (ಅ.06): ಕಬ್ಬಿನ ಎಫ್‌ಆರ್‌ಪಿ (Fair and Remunerative Price) ಹೆಚ್ಚಿಸುವ ಸಂಬಂಧ ಶೀಘ್ರದಲ್ಲೇ ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ರೈತ (Farmers) ಮುಖಂಡರೊಂದಿಗೆ ಸಭೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದ ಹಿನ್ನೆಲೆಯಲ್ಲಿ ರೈತರು ತಾತ್ಕಾಲಿಕವಾಗಿ ಪ್ರತಿಭಟನೆ ವಾಪಸ್‌ ಪಡೆದಿದ್ದಾರೆ.

ಎಫ್‌ಆರ್‌ಪಿ (FRP) ಹೆಚ್ಚಳ, ಫಸಲ್‌ ಭಿಮಾ ಯೋಜನೆ ವ್ಯಾಪ್ತಿಗೆ ಕಬ್ಬನ್ನು ಸೇರ್ಪಡೆ ಮಾಡಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಂಗಳವಾರ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ವಿವಿಧ ಭಾಗಗಳಿಂದ ಬಂದಿದ್ದ ರೈತರು ಬೃಹತ್‌ ಪ್ರತಿಭಟನೆ ನಡೆಸಿದರು.

ಕುರುಬೂರು ನೇತೃತ್ವದಲ್ಲಿ ರೈತರ ಬೃಹತ್ ಪ್ರತಿಭಟನೆ : ಹಲವು ಬೇಡಿಕೆ ಈಡೇರಿಕೆಗೆ ಆಗ್ರಹ

ತಮ್ಮ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಬೇಕೆಂಬ ಆಗ್ರಹಕ್ಕೆ ಮಣಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಸಂಜೆ ತಮ್ಮ ಗೃಹ ಕಚೇರಿಯಲ್ಲಿ ಸಭೆ ನಡೆಸಿ ರೈತರ ಬೇಡಿಕೆ, ಅವರ ಸಮಸ್ಯೆಗಳನ್ನು ಆಲಿಸಿ, ಶೀಘ್ರದಲ್ಲಿ ಸಕ್ಕರೆ ಕಾರ್ಖಾನೆ ಮಾಲಿಕರು ಹಾಗೂ ರೈತ ನಾಯಕರ ಜೊತೆ ಸಭೆ ನಡೆಸಿ ಪರಿಹರಿಸುವ ಭರವಸೆ ನೀಡಿದರು.

ಮುಖ್ಯಮಂತ್ರಿಗಳ ಭರವಸೆಯ ಮೇಲೆ ವಿಶ್ವಾಸವಿಟ್ಟು ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ವಾಪಸ್‌ ಪಡೆದುಕೊಂಡಿದ್ದೇವೆ. ಆದರೆ ತಮ್ಮ ಬೇಡಿಕೆಗಳನ್ನು ಒಂದು ತಿಂಗಳೊಳಗೆ ಈಡೇರಿಸದಿದ್ದರೆ ಪುನಃ ಪ್ರತಿಭಟನೆ ನಡೆಸಲಾಗುವುದು ಎಂದು ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ಬೃಹತ್‌ ರ‍್ಯಾಲಿ, ರಸ್ತೆ ತಡೆ

ಇದಕ್ಕೂ ಮುನ್ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನವನದವರೆಗೆ ರೈತರು ಬೃಹತ್‌ ರಾರ‍ಯಲಿ ನಡೆಸಿದರು. ಮನವಿ ಸ್ವೀಕರಿಸಲು ಸಚಿವರು ಆಗಮಿಸಿದ್ದು ವಿಳಂಬವಾಗಿದ್ದರಿಂದ ಆಕ್ರೋಶಗೊಂಡು, ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮುಂದಾದಾಗ ಪೊಲೀಸರು ಇದಕ್ಕೆ ಅವಕಾಶ ನೀಡಲಿಲ್ಲ. ನಂತರ ಸ್ವಾತಂತ್ರ್ಯ ಉದ್ಯಾನದ ಮುಂದಿನ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ಆರಂಭಿಸಿದರು.

ನಂತರ ಸ್ಥಳಕ್ಕೆ ಆಗಮಿಸಿದ ಸಕ್ಕರೆ ಸಚಿವ ಶಂಕರ ಪಾಟೀಲ್‌ ಮುನೇನಕೊಪ್ಪ ಮತ್ತು ಕೃಷಿ ಸಚಿವ ಬಿ.ಸಿ.ಪಾಟೀಲ್‌ (BC Patil) ಅವರು ಎಫ್‌ಆರ್‌ಪಿ ಹೆಚ್ಚಳದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಕಬ್ಬನ್ನು ಬೆಳೆ ವಿಮೆ ವ್ಯಾಪ್ತಿಗೆ ಸೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರೂ ಇದಕ್ಕೆ ಬಗ್ಗದ ಪ್ರತಿಭಟನಾಕಾರರು, ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಬೇಕೆಂದು ಪಟ್ಟು ಹಿಡಿದರು.

ಸಂಜೆ ಗೃಹ ಕಚೇರಿ ಕೃಷ್ಣಾದಲ್ಲಿ ಬಸವರಾಜ ಬೊಮ್ಮಾಯಿ ಅವರ ಜೊತೆ ನಡೆದ ಸಭೆಯಲ್ಲಿ ಮುಖಂಡರಾದ ಕುರುಬೂರು ಶಾಂತಕುಮಾರ್‌, ತೇಜಸ್ವಿ ಪಟೇಲ್‌, ಸುರೇಶ್‌ ಪಟೇಲ್‌, ಭಾಗ್ಯರಾಜ್‌, ಕಾಶೀನಾಥ್‌ ಮತ್ತಿತರರು ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಿದರು

ಪ್ರಮುಖ ಬೇಡಿಕೆಗಳು

-ಟನ್‌ ಕಬ್ಬಿನ ಎಫ್‌ಆರ್‌ಪಿಯನ್ನು 2900 ರಿಂದ 3500 ರು.ಗೆ ಹೆಚ್ಚಿಸಬೇಕು

-ಎಥೆನಾಲ್‌ ಮತ್ತಿತರ ಉಪ ಉತ್ಪನ್ನಗಳ ಲಾಭ ರೈತರಿಗೆ ಹಂಚಿಕೆಯಾಗಬೇಕು

-ಕಬ್ಬನ್ನು ಫಸಲ್‌ ಭಿಮಾ ಬೆಳೆ ವಿಮೆ ವ್ಯಾಪ್ತಿಗೆ ಸೇರಿಸಬೇಕು

-ಸಕ್ಕರೆ ಕಾರ್ಖಾನೆ ಮಾಲಿಕರಿಂದ ರೈತರಿಗೆ ಬಾಕಿ ಹಣ ಕೊಡಿಸಬೇಕು

2 ದಿನದಲ್ಲಿ ದಿನಾಂಕ ಘೋಷಣೆ

ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸುವ ಬಗ್ಗೆ ಇನ್ನೆರಡು ದಿವಸದಲ್ಲಿ ದಿನಾಂಕ ಘೋಷಿಸಲಾಗುವುದು. 2020-21 ರಲ್ಲಿ ರೈತರಿಗೆ ಸಕ್ಕರೆ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿಲ್ಲ. 2018-19, 2019-20 ನೇ ಸಾಲಿನ ಬಾಕಿ ಇದೆ ಎಂದು ಸಕ್ಕರೆ ಸಚಿವ ಶಂಕರಪಾಟೀಲ್‌ ಮುನೇನಕೊಪ್ಪ ಸ್ಪಷ್ಟಪಡಿಸಿದರು.

ಎಫ್‌ಆರ್‌ಪಿ ಹೆಚ್ಚಳದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಸಮಸ್ಯೆ ಬಗೆಹರಿಸಲಾಗುವುದು. ಕಬ್ಬನ್ನು ಬೆಳೆ ವಿಮೆ ವ್ಯಾಪ್ತಿಗೆ ಸೇರಿಸುವ ಬಗ್ಗೆ ಪರಿಶೀಲಿಸಲಾಗುವುದು.

-ಬಿ.ಸಿ.ಪಾಟೀಲ್‌, ಕೃಷಿ ಸಚಿವ

ಎಫ್‌ಆರ್‌ಪಿ ಹೆಚ್ಚಳದ ಬಗ್ಗೆ ಎರಡು ಬಾರಿ ಕೇಂದ್ರ ಸರ್ಕಾರದ ಜೊತೆ ಚರ್ಚೆ ಮಾಡಿದ್ದೇನೆ. ರೈತರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಲಾಗುವುದು.

-ಶಂಕರ ಪಾಟೀಲ್‌ ಮುನೇನಕೊಪ್ಪ, ಸಕ್ಕರೆ ಸಚಿವ

ಅ.15 ರೊಳಗೆ ಎಲ್ಲ ಸಕ್ಕರೆ ಕಾರ್ಖಾನೆಗಳೂ ಕಬ್ಬನ್ನು ಅರೆಯಲು ಕ್ರಮ ಕೈಗೊಳ್ಳಬೇಕು. ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಒಂದು ತಿಂಗಳ ಗಡುವು ನೀಡಿ ಪ್ರತಿಭಟನೆ ವಾಪಸ್‌ ಪಡೆದಿದ್ದೇವೆ. ಬೇಡಿಕೆ ಈಡೇರದಿದ್ದರೆ ಪುನಃ ಪ್ರತಿಭಟನೆ ನಡೆಸಲಾಗುವುದು.

-ಕುರುಬೂರು ಶಾಂತಕುಮಾರ್‌, ಅಧ್ಯಕ್ಷರು, ರಾಜ್ಯ ಕಬ್ಬು ಬೆಳೆಗಾರರ ಸಂಘ

-ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರೈತ ಮುಖಂಡರ ಜೊತೆ ಸಭೆ ನಡೆಸಿದರು.

-ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಶೇಷಾದ್ರಿ ರಸ್ತೆಯಲ್ಲಿ ರೈತರು ಬೃಹತ್‌ ಪ್ರತಿಭಟನೆ ನಡೆಸಿದರು.