ಹಿಂದಿ ಬಲ್ಲವರಿಗಷ್ಟೇ ಪ್ರವಾಸ: ಆದೇಶ ಹೊರಡಿಸಿದ ಅಧಿಕಾರಿ ವಿರುದ್ಧ ಶಿಸ್ತು ಕ್ರಮ

* ಶಿಕ್ಷಣ ಸಚಿವ ನಾಗೇಶ್‌ ಸ್ಪಷ್ಟನೆ ಗೊಂದಲಕ್ಕೆ ತೆರೆ

* ಹಿಂದಿ ಬಲ್ಲವರಿಗಷ್ಟೇ ಪ್ರವಾಸ: ಅಧಿಕಾರಿ ವಿರುದ್ಧ ಶಿಸ್ತು ಕ್ರಮ

* ಇದು ಕೇಂದ್ರ, ರಾಜ್ಯ ಸರ್ಕಾರದ ಆದೇಶವಲ್ಲ

Circular selecting only Hindi-speaking students for tour stokes controversy in Karnataka minister clarifies pod

ಬೆಂಗಳೂರು(ಜೂ.16): ‘ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ’ದ ಪ್ರಯುಕ್ತ ಹೊರ ರಾಜ್ಯ ಪ್ರವಾಸಕ್ಕೆ ಹಿಂದಿ, ಇಂಗ್ಲಿಷ್‌ ಮಾತನಾಡುವ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವಂತೆ ಕೇಂದ್ರ ಸರ್ಕಾರವಾಗಲಿ, ರಾಜ್ಯ ಸರ್ಕಾರವಾಗಲಿ ಆದೇಶಿಸಿಲ್ಲ. ಈ ಗೊಂದಲಕ್ಕೆ ಕಾರಣವಾಗಿರುವ ಅಧಿಕಾರಿ, ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಸ್ಪಷ್ಟಪಡಿಸಿದ್ದಾರೆ.

ಹೊರ ರಾಜ್ಯ ಪ್ರವಾಸಕ್ಕೆ ಹಿಂದಿ, ಇಂಗ್ಲಿಷ್‌ ಬರುವ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವಂತೆ ಪಿಯು ಇಲಾಖೆಯ ಅಧಿಕಾರಿಗಳು ಹೊರಡಿಸಿರುವ ಸುತ್ತೋಲೆಯೊಂದು ತೀವ್ರ ವಿವಾದಕ್ಕೀಡಾದ ಹಿನ್ನೆಲೆಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿ ಟ್ವೀಟ್‌ ಮಾಡಿರುವ ಸಚಿವರು, ‘ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಕರ್ನಾಟಕದಿಂದ ಹೊರ ರಾಜ್ಯಕ್ಕೆ ಪ್ರವಾಸ ಕಳುಹಿಸಲು ಹಿಂದಿ, ಇಂಗ್ಲಿಷ್‌ ಭಾಷಾ ಜ್ಞಾನ ಕಡ್ಡಾಯ ಎಂಬ ಸೂಚನೆಯನ್ನು ಕೇಂದ್ರ ಸರ್ಕಾರವಾಗಲಿ ನೀಡಿಲ್ಲ. ಈ ಗೊಂದಲಕ್ಕೆ ಕಾರಣವಾದ ಅಧಿಕಾರಿ/ಸಿಬ್ಬಂದಿ ವಿರುದ್ಧ ಇಲಾಖೆಯಿಂದ ಶಿಸ್ತುಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.

ನಾನವನಲ್ಲ ಎನ್ನುತ್ತಿರುವ ಅಧಿಕಾರಿಗಳು:

ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಸಮಗ್ರ ಶಿಕ್ಷಣ ಕರ್ನಾಟಕ ಇಲಾಖಾ ಹಂತದಲ್ಲಿ ಕೆಲ ಅಧಿಕಾರಿಗಳೇ ಇಂತಹ ಎಡವಟ್ಟು ಮಾಡಿ ಸರ್ಕಾರಕ್ಕೆ ಮುಜುಗರ ಸೃಷ್ಟಿಸಿರುವುದು ಸಚಿವರು ಬುಧವಾರ ನಡೆಸಿದ ಪರಿಶೀಲನೆ ವೇಳೆ ಪತ್ತೆಯಾಗಿದೆ.

ಆದರೆ, ಯಾವ ಅಧಿಕಾರಿಗಳನ್ನು ಪ್ರಶ್ನಿಸಿದರೂ ಈ ಸುತ್ತೋಲೆ ಹೊರಡಿಸಿದ್ದು ತಾವು ಎಂದು ಒಪ್ಪಿಕೊಂಡಿಲ್ಲ. ಎಲ್ಲರಿಂದ ಒಂದೇ ಉತ್ತರ ‘ನಾನವನಲ್ಲ’ ಎಂಬ ಉತ್ತರವೇ ಬಂದಿದೆ. ಅಧಿಕಾರಿಗಳ ಗಮನಕ್ಕೆ ತರದೆ ಕಚೇರಿ ಸಿಬ್ಬಂದಿಯಿಂದ ಇಂತಹ ಲೋಪವಾಗಿರಬಹುದು ಎಂದು ಕೆಲವರು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಕೊನೆಗೆ ಸಚಿವ ನಾಗೇಶ್‌ ಅವರು ಇಲಾಖೆಗಳ ಉನ್ನತ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಗಟೆಗೆ ತೆಗೆದುಕೊಂಡಿದ್ದು, ಈ ಎಡವಟ್ಟು ಮಾಡಿರುವವರು ಯಾರೇ ಆಗಿದ್ದರೂ ತನಿಖೆ ನಡೆಸಿ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಸೂಚನೆ ನೀಡಿದ್ದಾರೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಏನಿದು ವಿವಾದ?

- ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಪಿಯು ವಿದ್ಯಾರ್ಥಿಗಳಿಗೆ ಪ್ರವಾಸ

- ಹೊರ ರಾಜ್ಯದ ಈ ಪ್ರವಾಸಕ್ಕೆ ಹಿಂದಿ, ಇಂಗ್ಲಿಷ್‌ ಬಲ್ಲ ವಿದ್ಯಾರ್ಥಿಗಳಿಗಷ್ಟೇ ಅವಕಾಶ

- ಪಿಯು ಇಲಾಖೆ ಅಧಿಕಾರಿಗಳು ಹೊರಡಿಸಿರುವ ಸುತ್ತೋಲೆಯ ಬಗ್ಗೆ ತೀವ್ರ ವಿವಾದ

- ಕೂಡಲೇ ಎಚ್ಚೆತ್ತ ಶಿಕ್ಷಣ ಸಚಿವರಿಂದ ವಿವಾದಕ್ಕೆ ತೆರೆ ಎಳೆವ ಯತ್ನ; ಕ್ರಮದ ಭರವಸೆ

Latest Videos
Follow Us:
Download App:
  • android
  • ios