ಬೆಂಗಳೂರು (ಡಿ.25): ವಿಶ್ವದಾದ್ಯಂತ ಇಂದು ಕ್ರಿಸ್ಮಸ್ ಸಂಭ್ರಮ. ಬೆಂಗಳೂರು, ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಕ್ರೈಸ್ತರು ಶ್ರದ್ಧೆ ಮತ್ತು ಸಂಭ್ರಮದಿಂದ ಕ್ರಿಸ್ಮಸ್ ಆಚರಿಸಿದರು.

ಚರ್ಚ್ ಗಳಲ್ಲಿ ಕ್ರಿಸ್ಮಸ್ ಪ್ರಯುಕ್ತ ವಿಶೇಷ ಪ್ರಾರ್ಥನೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಬೆಂಗಳೂರಿನ ಶಿವಾಜಿನಗರದಲ್ಲಿರುವ ಸೈಂಟ್ ಮೇರಿ ಬೆಸಿಲಿಕಾದಲ್ಲಿ ಸಾವಿರಾರು ಭಕ್ತರು ಬಂದು ಪ್ರಾರ್ಥನೆಗಳನ್ನು ಸಲ್ಲಿಸಿದರು.

ವ್ಯಾಟಿಕನ್ ಸಿಟಿಯಲ್ಲಿ 1.3 ಬಿಲಿಯನ್ ಕ್ರೈಸ್ತ ಧರ್ಮಾನುಯಾಯಿಗಳನ್ನು ಉದ್ದೇಶಿಸಿ ಮಾತನಾಡಿದ ಪೋಪ್ ಫ್ರಾನ್ಸಿಸ್, ಪ್ರೀತಿಯ ಸಂದೇಶವನ್ನು ನೀಡಿದರು.

ವ್ಯಕ್ತಿ ಎಷ್ಟೇ ಕೆಟ್ಟವನಾಗಿದ್ದರೂ ದೇವನು ಎಲ್ಲರನ್ನೂ ಪ್ರೀತಿಸುತ್ತಾನೆ. ಪ್ರೀತಿಗೆ ಯಾವುದೇ ಶರತ್ತುಗಳಿಲ್ಲ, ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಕೂಡಾ ಟ್ವಿಟರ್ ಮೂಲಕ ಕ್ರಿಸ್ಮಸ್ ಶುಭಾಶಯಗಳನ್ನು ಕೋರಿದ್ದಾರೆ. ಎಲ್ಲರಿಗೂ ಕ್ರಿಸ್ಮಸ್ ಶುಭಾಶಯ. ಜೀಸಸ್ ಆದರ್ಶಗಳು ಜಗತ್ತಿಗೆ ಸ್ಫೂರ್ತಿಯಾಗಿವೆ ಎಂದು ಮೋದಿ ಹೇಳಿದ್ದಾರೆ.